ADVERTISEMENT

ಕೈಗೊಂಡನಹಳ್ಳಿ: ಅಗ್ನಿಶಾಮಕ ಠಾಣೆ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2011, 20:15 IST
Last Updated 21 ಫೆಬ್ರುವರಿ 2011, 20:15 IST

ಬೆಂಗಳೂರು: ಬೆಂಗಳೂರಿನ ‘ಕಾನ್ಫಿಡರೇಷನ್ ಆಫ್ ರಿಯಲ್ ಎಸ್ಟೇಟ್ ಡೆವಲಪರ್ಸ್‌ ಅಸೋಸಿಯೇಷನ್ ಆಫ್ ಇಂಡಿಯಾ’ (ಸಿಆರ್‌ಇಡಿಎಐ) ಮತ್ತು ’ಕರ್ನಾಟಕ ಖಾಸಗಿ ರಿಯಲ್ ಎಸ್ಟೇಟ್ ಡೆವಲಪರ್ಸ್‌ ಆಫ್ ಇಂಡಿಯಾ’ ಒಕ್ಕೂಟವು ಸರ್ಜಾಪುರ ಸಮೀಪದ ಕೈಗೊಂಡನಹಳ್ಳಿಯಲ್ಲಿ ನೂತನವಾಗಿ ನಿರ್ಮಿಸಿರುವ ಅಗ್ನಿಶಾಮಕ ಠಾಣೆಯನ್ನು ಸಂಸದ ಪಿ.ಸಿ.ಮೋಹನ್ ಅವರು  ಉದ್ಘಾಟಿಸಿದರು.

ಸಿಆರ್‌ಇಡಿಎಐ ನ ರಾಜ್ಯ ಘಟಕದ ಅಧ್ಯಕ್ಷ ಸುಶೀಲ್ ಮಂತ್ರಿ ಮಾತನಾಡಿ, ‘ವಾಣಿಜ್ಯ ಸಂಸ್ಥೆಯಾದ ಸಿಆರ್‌ಇಡಿಎಐ ಸಮಾಜದ ಅಭಿವೃದ್ಧಿಗಾಗಿ ಶ್ರಮಿಸುತ್ತಿದೆ. ಸದ್ಯ ವಿಮಾನ ನಿಲ್ದಾಣದಿಂದ ವೈಟ್‌ಫೀಲ್ಡ್‌ವರೆಗಿನ ರಸ್ತೆಯನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಅಲ್ಲದೇ ಬನ್ನೇರುಘಟ್ಟ ರಸ್ತೆ, ಕನಕಪುರ ರಸ್ತೆ ಮತ್ತು ಜೆ.ಪಿ.ನಗರದ 24ನೇ ಮುಖ್ಯರಸ್ತೆಗಳನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ’ ಎಂದು ತಿಳಿಸಿದರು.

‘ಹಾಗೆಯೇ ನಗರದ ವಿವಿಧೆಡೆ ಪೊಲೀಸ್ ಠಾಣೆಗಳ ನಿರ್ಮಾಣ, ರಸ್ತೆ ವಿಭಜಕಗಳು, ವೃತ್ತಗಳು, ಉದ್ಯಾನಗಳ ನಿರ್ಮಾಣ ಮತ್ತು ಸಸಿ ನೆಡುವ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ. ಜನರು ಮತ ಚಲಾಯಿಸುವಂತೆ ಮಾಡುವ ಸಲುವಾಗಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪ್ರಮುಖ ಸ್ಥಳಗಳಲ್ಲಿ ಜಾಹೀರಾತು ಫಲಕಗಳನ್ನು ಪ್ರದರ್ಶಿಸಿ ಜಾಗೃತಿ ಮೂಡಿಸಲಾಗಿತ್ತು’ ಎಂದು ಹೇಳಿದರು. ‘ನೆರೆ ಹಾವಳಿಯಿಂದ ಮನೆಗಳನ್ನು ಕಳೆದುಕೊಂಡವರಿಗೆ ಉತ್ತರ ಕರ್ನಾಟಕದ ಬಾಗಲಕೋಟೆ ಜಿಲ್ಲೆಯಲ್ಲಿ ಸಂಸ್ಥೆಯ ವತಿಯಿಂದ 3 ಸಾವಿರ ಮನೆಗಳನ್ನು ನಿರ್ಮಿಸಿಕೊಡಲಾಗುತ್ತಿದೆ’ ಎಂದರು. ಇದೇ ಸಂದರ್ಭದಲ್ಲಿ ಅಗ್ನಿಶಾಮಕ ಠಾಣೆಯ ಬೀಗದ ಕೀಗಳನ್ನು ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯ ಡಿಜಿಪಿ ಡಿ.ವಿ.ಗುರುಪ್ರಸಾದ್ ಅವರಿಗೆ ಹಸ್ತಾಂತರಿಸಲಾಯಿತು.

ಗೃಹ ಸಚಿವ ಆರ್.ಅಶೋಕ, ಶಾಸಕರಾದ ಅರವಿಂದ ಲಿಂಬಾವಳಿ, ವರ್ತೂರು ಪ್ರಕಾಶ್, ಪಾಲಿಕೆ ಸದಸ್ಯ ಬಿ.ಸಿ.ಬಾಬು ರೆಡ್ಡಿ, ಸಿಆರ್‌ಇಡಿಎಐ ಉಪಾಧ್ಯಕ್ಷ ಗೋವಿಂದರಾಜು ಇತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.