ADVERTISEMENT

ಕೊಡಗು ಬಂದ್: ಉತ್ತಮ ಪ್ರತಿಕ್ರಿಯೆ

​ಪ್ರಜಾವಾಣಿ ವಾರ್ತೆ
Published 12 ಜುಲೈ 2012, 18:30 IST
Last Updated 12 ಜುಲೈ 2012, 18:30 IST
ಕೊಡಗು ಬಂದ್: ಉತ್ತಮ ಪ್ರತಿಕ್ರಿಯೆ
ಕೊಡಗು ಬಂದ್: ಉತ್ತಮ ಪ್ರತಿಕ್ರಿಯೆ   

ಮಡಿಕೇರಿ: ಯುನೆಸ್ಕೊ ವಿಶ್ವ ಪಾರಂಪರಿಕ ತಾಣ ಪಟ್ಟಿಗೆ ಪಶ್ಚಿಮಘಟ್ಟಗಳನ್ನು ಸೇರಿಸಿರುವ ಕ್ರಮ ವಿರೋಧಿಸಿ ಬಿಜೆಪಿ ಕರೆ ನೀಡಿದ್ದ ಕೊಡಗು ಬಂದ್‌ಗೆ ಗುರುವಾರ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.
ಮಡಿಕೇರಿ, ಸೋಮವಾರ ಪೇಟೆ, ವಿರಾಜಪೇಟೆ, ಕುಶಾಲನಗರ ಸೇರಿದಂತೆ ಇತರ ಎಲ್ಲ ಪ್ರದೇಶಗಳಲ್ಲೂ ಬಂದ್ ಸಂಪೂರ್ಣ ಯಶಸ್ವಿಯಾಗಿದೆ.

ಬಂದ್ ಶಾಂತಿಯುತವಾಗಿತ್ತು ಎಂದು ಜಿಲ್ಲಾಧಿಕಾರಿ (ಪ್ರಭಾರ) ಕೆ.ಎಂ. ಚಂದ್ರೇಗೌಡ ತಿಳಿಸಿದರು.
ಅಂಗಡಿ-ಮುಂಗಟ್ಟುಗಳು ಬಾಗಿಲು ಮುಚ್ಚಿದ್ದವು. ಶಾಲಾ- ಕಾಲೇಜುಗಳು ಅಘೋಷಿತ ರಜೆ ಮಾಡಿದ್ದವು. ಖಾಸಗಿ ಹಾಗೂ ಕೆಎಸ್‌ಆರ್‌ಟಿಸಿ ಬಸ್‌ಗಳು ಹಾಗೂ ಆಟೋಗಳೂ ಸಂಚಾರ ಸ್ಥಗಿತಗೊಳಿಸಿದ್ದವು. ಸಂಜೆ ನಂತರ ಕೆಎಸ್‌ಆರ್‌ಟಿಸಿ ಬಸ್ ಸಂಚಾರ ಪುನರಾರಂಭಗೊಂಡಿತು.

ಮಡಿಕೇರಿಯ ಜನರಲ್ ತಿಮ್ಮಯ್ಯ ವೃತ್ತದಲ್ಲಿ ಬೆಳಿಗ್ಗೆ ಜಮಾಯಿಸಿದ ಬಿಜೆಪಿ ಕಾರ್ಯಕರ್ತರು ಹಾಗೂ ಬಂದ್‌ಗೆ ಬೆಂಬಲ ವ್ಯಕ್ತಪಡಿಸಿದ ವಿವಿಧ ಸಂಘಟನೆಗಳ ಕಾರ್ಯಕರ್ತರು ರಸ್ತೆ ತಡೆ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಶಾಂತೆಯಂಡ ರವಿ ಕುಶಾಲಪ್ಪ, ಜಿಲ್ಲೆಯ ಪ್ರಮುಖರ ಸಭೆಯನ್ನು ವಾರದಲ್ಲಿ ಕರೆದು ಮುಂದಿನ ಹೋರಾಟದ ಬಗ್ಗೆ ಕಾರ್ಯತಂತ್ರ ರೂಪಿಸುವುದಾಗಿ ಹೇಳಿದರು.

ಕೊಡಗು-ಮೈಸೂರು ಸಂಸದ ಎಚ್.ವಿಶ್ವನಾಥ್ ಈ ವಿಷಯದ ಬಗ್ಗೆ ಸ್ಪಷ್ಟವಾಗಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಬೇಕು. ಈ ಯೋಜನೆಯನ್ನು ತಡೆಯಲು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲು ನಮ್ಮಂದಿಗೆ ಸಂಸದರು ಸಹಕರಿಸಬೇಕು ಎಂದರು.

ಕೊಡಗು ಕಾಫಿ ಬೆಳೆಗಾರರ ಸಹಕಾರ ಸಂಘದ ಅಧ್ಯಕ್ಷ ಎಂ.ಬಿ. ದೇವಯ್ಯ, ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶಜಿಲ್ ಕೃಷ್ಣ, ಜನತಾ ಬಜಾರ್ ಅಧ್ಯಕ್ಷ ರವಿ ಬಸಪ್ಪ, ನಗರ ಬಿಜೆಪಿ ಅಧ್ಯಕ್ಷ ಬಿ.ಕೆ.ಅರುಣ್ ಕುಮಾರ್ ಮತ್ತಿತರರು ಭಾಗವಹಿಸಿದ್ದರು.
 
ಕಾಂಗ್ರೆಸ್, ಜೆಡಿಎಸ್ ಸೇರಿದಂತೆ ಸೇವ್ ಕೊಡಗು ವೇದಿಕೆ, ಕೊಡಗು ಗೌಡ ಸಮಾಜ, ಭಾಗಮಂಡಲ ವಿಶ್ವ ಪಾರಂಪರಿಕ ತಾಣ ಹೋರಾಟ ಸಮಿತಿ, ಪಶ್ಚಿಮಘಟ್ಟ ಮೂಲ ನಿವಾಸಿಗಳ ವಿಮೋಚನಾ ಸಮಿತಿ, ಜಿಲ್ಲಾ ಮೊಗೇರ ಸಮಾಜ, ಕೊಡಗು ಹೆಗ್ಗಡೆ ಸಮಾಜ ಧರಣಿಗೆ ಬೆಂಬಲ ನೀಡಿದ್ದವು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.