ADVERTISEMENT

ಕೊನೆಯ ದಿನ ದಿಗ್ಗಜರ ನಾಮಪತ್ರ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2013, 20:04 IST
Last Updated 17 ಏಪ್ರಿಲ್ 2013, 20:04 IST

ಬೆಂಗಳೂರು: ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದ್ದ ಬುಧವಾರ ಮುಖ್ಯಮಂತ್ರಿ ಜಗದೀಶ ಶೆಟ್ಟರ್, ಬಿಜೆಪಿಯ ಕೆ.ಎಸ್.ಈಶ್ವರಪ್ಪ, ಆರ್.ಅಶೋಕ, ಜೆಡಿಎಸ್‌ನ ಎ.ಕೃಷ್ಣಪ್ಪ, ಕಾಂಗ್ರೆಸ್‌ನ ಎಸ್.ಎಸ್.ಮಲ್ಲಿಕಾರ್ಜುನ, ಶಕುಂತಲಾ ಶೆಟ್ಟಿ ಸೇರಿದಂತೆ ವಿವಿಧ ಪಕ್ಷಗಳ ಅಭ್ಯರ್ಥಿಗಳು ಹಾಗೂ ಪಕ್ಷೇತರರು ಒಟ್ಟು 623 ನಾಮಪತ್ರಗಳನ್ನು ಸಲ್ಲಿಸಿದ್ದಾರೆ.

ಪ್ರಾಥಮಿಕ ಮಾಹಿತಿ ಪ್ರಕಾರ 224 ಕ್ಷೇತ್ರಗಳಲ್ಲಿ 2,332 ಅಭ್ಯರ್ಥಿಗಳು ಒಟ್ಟು 2,984 ನಾಮಪತ್ರಗಳನ್ನು ಸಲ್ಲಿಸಿದ್ದಾರೆ. ಗುರುವಾರ ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ನಾಮಪತ್ರಗಳನ್ನು ವಾಪಸ್ ಪಡೆಯಲು ಶನಿವಾರ ಕೊನೆಯ ದಿನ ಎಂದು ಮುಖ್ಯಚುನಾವಣಾಧಿಕಾರಿ ಅನಿಲ್‌ಕುಮಾರ್ ಝಾ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಗುಲ್ಬರ್ಗ ದಕ್ಷಿಣ, ಹಾನಗಲ್, ತುಮಕೂರು ನಗರ, ಮಾಯಕೊಂಡ, ಮುಳಬಾಗಲು, ವರುಣಾ, ಚಿಕ್ಕಬಳ್ಳಾಪುರ, ಬಾಗೇಪಲ್ಲಿ ಸೇರಿದಂತೆ 23 ಕ್ಷೇತ್ರಗಳಲ್ಲಿ 16ಕ್ಕಿಂತ ಅಧಿಕ ಅಭ್ಯರ್ಥಿಗಳು ನಾಮಪತ್ರಗಳನ್ನು ಸಲ್ಲಿಸಿದ್ದಾರೆ. ನಾಮಪತ್ರಗಳ ಪರಿಶೀಲನೆ ನಂತರವೂ 16ಕ್ಕಿಂತ ಹೆಚ್ಚು ಅಭ್ಯರ್ಥಿಗಳು ಕಣದಲ್ಲಿ ಉಳಿದರೆ ಎಲೆಕ್ಟ್ರಾನಿಕ್ ಮತಯಂತ್ರದಲ್ಲಿ ಎರಡು `ಯೂನಿಟ್' ವ್ಯವಸ್ಥೆ ಮಾಡಲಾಗುತ್ತದೆ.

ಜಾಗೃತದಳ ಮಂಗಳವಾರ ತುಮಕೂರಿನಲ್ಲಿ 12 ಲಕ್ಷ ರೂಪಾಯಿ ನಗದು ಮತ್ತು 8 ಕೆ.ಜಿ ಚಿನ್ನವನ್ನು ವಶಪಡಿಸಿಕೊಂಡಿದೆ. ದೇವದುರ್ಗದ ಬಳಿ ಮೂರು ಲಕ್ಷ ರೂಪಾಯಿ, ಸುರತ್ಕಲ್‌ನಲ್ಲಿ ಐದು ಲಕ್ಷ ರೂಪಾಯಿ ನಗದು ವಶಪಡಿಸಿಕೊಳ್ಳಲಾಗಿದೆ. ಆದಾಯ ತೆರಿಗೆ ಇಲಾಖೆಗೂ ಈ ಬಗ್ಗೆ ಮಾಹಿತಿ ನೀಡಲಾಗಿದೆ ಎಂದರು.

ಬಿಬಿಎಂಪಿ ವ್ಯಾಪ್ತಿಯ 28 ಕ್ಷೇತ್ರದಲ್ಲಿ 128 ನಾಮಪತ್ರ

ಬೆಂಗಳೂರು: ರಾಜ್ಯ ವಿಧಾನಸಭೆಗೆ ನಡೆಯಲಿರುವ ಚುನಾವಣೆಗಾಗಿ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದ್ದ ಬುಧವಾರ ಬಿಬಿಎಂಪಿ ವ್ಯಾಪ್ತಿಯ 28 ಕ್ಷೇತ್ರಗಳಲ್ಲಿ ಒಟ್ಟಾರೆ 128 ನಾಮಪತ್ರಗಳು ಸಲ್ಲಿಕೆಯಾದವು.

ಬಿಬಿಎಂಪಿ ಕೇಂದ್ರ ವಲಯದ ಕ್ಷೇತ್ರಗಳಿಂದ 52, ದಕ್ಷಿಣ ವಲಯದಿಂದ 33, ಉತ್ತರ ವಲಯದಿಂದ 26 ಮತ್ತು ನಗರ ಜಿಲ್ಲೆಯಿಂದ 17 ನಾಮಪತ್ರಗಳನ್ನು ಸ್ವೀಕರಿಸಲಾಗಿದೆ. ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾದ ಕಾರಣ ಚುನಾವಣಾ ಕೇಂದ್ರಗಳ ಮುಂದೆ ಭಾರಿ ನೂಕು-ನುಗ್ಗಲು ಕಂಡುಬಂತು. ಆರ್. ಅಶೋಕ, ಮೇಯರ್ ಡಿ.ವೆಂಕಟೇಶಮೂರ್ತಿ ಸೇರಿದಂತೆ ಎಲ್ಲ ಪ್ರಮುಖರು ತಮ್ಮ ಉಮೇದುವಾರಿಕೆ ದಾಖಲಿಸಿದರು.

ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಗೆ ಬರುವ ಏಳು ವಿಧಾನಸಭಾ ಕ್ಷೇತ್ರಗಳ ಪೈಕಿ ಆನೇಕಲ್ ವಿಧಾನಸಭಾ ಕ್ಷೇತ್ರದಿಂದ ಒಟ್ಟು 10 ನಾಮಪತ್ರ ಸಲ್ಲಿಕೆಯಾಗಿವೆ. ಜೆಡಿಎಸ್‌ನಿಂದ ಎನ್.ಕೇಶವ, ಜೆಡಿಯುನಿಂದ ವಿ.ಚೌಡಪ್ಪ, ಬಿಎಸ್‌ಆರ್ ಕಾಂಗ್ರೆಸ್‌ನಿಂದ ಮಂಜುನಾಥ, ಸಿಪಿಎಂನಿಂದ ಡಿ.ಮಹದೇಶ್, ಬಿಎಸ್‌ಪಿಯಿಂದ  ಶ್ರೀನಿವಾಸ್ ಪಿ, ಪಕ್ಷೇತರ ಅಭ್ಯರ್ಥಿಗಳಾಗಿ  ಎ.ನಾರಾಯಣಸ್ವಾಮಿ, ವೆಂಕಟೇಶಪ್ಪ, ಎ.ನಾರಾಯಣಸ್ವಾಮಿ, ಜೆ.ಗೌರಮ್ಮ, ವಿ.ಸುಕುಂದ ನಾಮಪತ್ರ ಸಲ್ಲಿಸಿದ್ದಾರೆ.

ದಾಸರಹಳ್ಳಿ ಕ್ಷೇತ್ರದಿಂದ ಒಟ್ಟು 12 ನಾಮಪತ್ರ ಸಲ್ಲಿಕೆಯಾಗಿದ್ದು, ಕಾಂಗ್ರೆಸ್‌ನಿಂದ ಶಂಕರ್ ಬಿ.ಎಲ್. ಭಾರತೀಯ ಜನತಾ ದಳದಿಂದ ವೈ.ಜಿ.ನಾಗರಾಜ್, ಜೆಡಿಯುನಿಂದ ಬಿ.ಕೆ.ಶೋಭಾಬಾಯಿ,  ಪಕ್ಷೇತರ ಅಭ್ಯರ್ಥಿಗಳಾಗಿ ಕೆ.ಮಲ್ಲಿಕಾರ್ಜುನ ನಾಯ್ಡು, ಗೋವಿಂದಯ್ಯ,  ತಿಮ್ಮರಾಜುಗೌಡ, ಲಕ್ಷ್ಮೀಕಾಂತ ಆಚಾರ್ಯ ಜಿ, ಕೆ.ಮುನಿರಾಜು, ಉಮೇಶ್, ಲಕ್ಷ್ಮೀನಾರಾಯಣಸಿಂಗ್, ಎಂ.ಗಿರಿಯಪ್ಪ, ಈಶ್ವರ್‌ರಾವ್ ನಾಮಪತ್ರ ಸಲ್ಲಿಸಿದರು.

ಮಹದೇವಪುರದಿಂದ ಒಟ್ಟು 11 ನಾಮಪತ್ರ ಸಲ್ಲಿಕೆಯಾಗಿವೆ. ಬಿಎಸ್‌ಆರ್ ಕಾಂಗ್ರೆಸ್‌ನಿಂದ ಮಯೂರ್ ಪಟೇಲ್, ಕೆಜೆಪಿಯಿಂದ ಮುನಿಯಪ್ಪ, ಜೆಡಿಯುನಿಂದ ಎನ್.ಗೋವರ್ಧನ್, ಪಕ್ಷೇತರ ಅಭ್ಯರ್ಥಿಗಳಾಗಿ ಮುನಿರಾಜು.ಪಿ., ಪುಟ್ಟಪ್ಪ, ಎನ್.ಮುನಿರಾಜು, ಟಿ.ರಾಜಣ್ಣ, ನಾಗೇಶ್ (ಬಂಡಾಯ ಕಾಂಗ್ರೆಸ್),  ಮಂಜುನಾಥ್ , ಎನ್.ಮೂರ್ತಿ, ವರ್ತೂರ್ ವೆಂಕಟೇಶ್ ನಾಮಪತ್ರ ಸಲ್ಲಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.