ಬೆಂಗಳೂರು: ಕೊಳೆಗೇರಿ ಮುಕ್ತ ರಾಜ್ಯ ಮಾಡುವ ಉದ್ದೇಶದಿಂದ ಕೊಳೆಗೇರಿ ಪ್ರದೇಶಗಳ ಅಭಿವೃದ್ಧಿಗೆ ಪೂರಕವಾಗಿ ಹೊಸ ನೀತಿ ಜಾರಿ ಮಾಡಲಾಗುವುದು ಎಂದು ವಸತಿ ಸಚಿವ ವಿ.ಸೋಮಣ್ಣ ಅವರು ಬುಧವಾರ ಇಲ್ಲಿ ತಿಳಿಸಿದರು.
ರಾಜ್ಯದಲ್ಲಿ ಒಟ್ಟು 2,723 ಕೊಳೆಗೇರಿಗಳು ಇವೆ. ಇವುಗಳಲ್ಲಿ ಬೆಂಗಳೂರು ನಗರದಲ್ಲೇ 500 ಕೊಳೆಗೇರಿ ಪ್ರದೇಶಗಳು ಇದ್ದು, ಅವುಗಳ ಅಭಿವೃದ್ಧಿಗೆ ಹೊಸ ನೀತಿ ಅನುಕೂಲಕರವಾಗಲಿದೆ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.
ನೀತಿಯ ಕರಡು ಸಿದ್ಧ ಆಗಿದ್ದು, ಎರಡು ತಿಂಗಳಲ್ಲಿ ಅದನ್ನು ಜಾರಿ ಮಾಡಲಾಗುವುದು. ಕೊಳೆಗೇರಿಗಳಲ್ಲಿ ನೆಲೆಸಿರುವ ಮತ್ತು ಮೂಲಸೌಲಭ್ಯಗಳಿಂದ ವಂಚಿತರಾದ ಎಲ್ಲರಿಗೂ ಮನೆ ನಿರ್ಮಿಸಿ ಕೊಡುವುದು ಇದರ ಉದ್ದೇಶ ಎಂದು ಹೇಳಿದರು.
ಅಂದಾಜಿನ ಪ್ರಕಾರ 40 ಲಕ್ಷ ಜನರು ಈ ರೀತಿ ನೆಲೆಸಿದ್ದಾರೆ. ಸರ್ಕಾರಿ ಜಾಗದಲ್ಲಿ 496 ಕೊಳೆಗೇರಿಗಳು, ಖಾಸಗಿ ವ್ಯಕ್ತಿಗಳ ಜಾಗಗಳಲ್ಲಿ 606 ಮತ್ತು ಮಹಾನಗರ ಪಾಲಿಕೆ ಮತ್ತು ಪುರಸಭೆಗಳಿಗೆ ಸೇರಿದ ಜಾಗಗಳಲ್ಲಿ 1,084 ಕೊಳೆಗೇರಿಗಳು ಇವೆ ಎಂದು ಅವರು ವಿವರಿಸಿದರು.
ಕನಿಷ್ಠ 300 ಚ.ಅಡಿ ಜಾಗದಲ್ಲಿ ಗುಡಿಸಲು ಹೊಂದಿರುವವರಿಗೆ ಮನೆಗಳನ್ನು ನಿರ್ಮಿಸಿಕೊಡಲಾಗುತ್ತದೆ. ಅದಕ್ಕಿಂತ ಕಡಿಮೆ ಜಾಗ ಇರುವವರಿಗೆ ಅಪಾರ್ಟ್‌ಮೆಂಟ್ ಮಾದರಿಯಲ್ಲಿ ಕಟ್ಟಡ ನಿರ್ಮಿಸಿ, ಮನೆಗಳನ್ನು ಹಂಚಲಾಗುವುದು. ಇದಕ್ಕೆ ಫಲಾನುಭವಿಗಳು ಕೂಡ ಸ್ವಲ್ಪ ಹಣ ನೀಡಬೇಕಾಗುತ್ತದೆ. ಉಳಿದ ಹಣವನ್ನು ಸರ್ಕಾರವೇ ಭರಿಸಲಿದೆ ಎಂದು ಹೇಳಿದರು.
ಹೊಸ ಮನೆಗಳ ಖಾತೆಗಳನ್ನು ಮಹಿಳೆಯರ ಹೆಸರಿನಲ್ಲಿ ನೀಡಲು ಕೆಲ ತಿದ್ದುಪಡಿಗಳನ್ನು ಮಾಡಲಾಗುತ್ತದೆ ಎಂದು ವಿವರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.