ADVERTISEMENT

ಕೋರ್ಟ್ ವೆಚ್ಚಕ್ಕೆ ಕೋಟಿ ಹಣ ಬಳಕೆ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2012, 19:30 IST
Last Updated 17 ಅಕ್ಟೋಬರ್ 2012, 19:30 IST

ಎಚ್.ಡಿ ರೇವಣ್ಣ ಆರೋಪ

ಬೆಂಗಳೂರು:  `ಕರ್ನಾಟಕ ಹಾಲು ಮಹಾಮಂಡಲದಲ್ಲಿ (ಕೆಎಂಎಫ್) ನಡೆದಿರುವ ಅವ್ಯವಹಾರಗಳಲ್ಲಿ ಹಿಂದೆ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಎ.ಎಸ್.ಪ್ರೇಮನಾಥ್ ಅವರ ಕೈವಾಡವಿದೆ. ಈ ಬಗ್ಗೆ ಸಮಗ್ರವಾಗಿ ತನಿಖೆ ನಡೆಸಬೇಕು~ ಎಂದು ಕೆಎಂಎಫ್ ನಿರ್ದೇಶಕ ಎಚ್.ಡಿ.ರೇವಣ್ಣ ಒತ್ತಾಯಿಸಿದರು.

ನ್ಯಾಯಾಲಯಗಳಲ್ಲಿ ದಾಖಲಿಸಿರುವ ವೈಯಕ್ತಿಕ ಪ್ರಕರಣಗಳ ವೆಚ್ಚಕ್ಕಾಗಿ ರೈತರ ಹಣವನ್ನು ಬಳಸಿಕೊಂಡಿದ್ದಾರೆ. ಹಾಲು ಉತ್ಪಾದಕರಿಗೆ ಎಂಟು ವಾರಗಳಿಂದ ಹಣ ಪಾವತಿಯಾಗಿಲ್ಲ. ಅವರ ಅಧಿಕಾರ ಅವಧಿಯಲ್ಲಿನ ಅವ್ಯವಹಾರಗಳ ಬಗ್ಗೆ ತನಿಖೆ ನಡೆಸಬೇಕು ಎಂದು ನೂತನ ವ್ಯವಸ್ಥಾಪಕ ನಿರ್ದೇಶಕ ಹರ್ಷ ಗುಪ್ತ ಅವರಿಗೆ ಮನವಿ ಮಾಡಿರುವುದಾಗಿ ಬುಧವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

`ಪ್ರೇಮನಾಥ್ ಮತ್ತು ಎಂ.ಎನ್.ವೆಂಕಟರಾಮು ನಡುವಿನ ಪ್ರಕರಣ ಹೈಕೋರ್ಟ್ ಮೆಟ್ಟಿಲು ಹತ್ತಿದ್ದಾಗ, ನ್ಯಾಯಾಲಯ ವೆಚ್ಚಕ್ಕಾಗಿ ಪ್ರೇಮನಾಥ್ ಅವರು ಕೆಎಂಎಫ್‌ನ ಒಂದು ಕೋಟಿ ರೂಪಾಯಿ ಹಣವನ್ನು ಬಳಕೆ ಮಾಡಿಕೊಂಡಿದ್ದಾರೆ~ ಎಂದು ಅವರು ಆರೋಪಿಸಿದರು.

ಸಭೆ ರದ್ದು: ಈ ನಡುವೆ ಬುಧವಾರ ನಡೆಯಬೇಕಿದ್ದ ಕೆಎಂಎಫ್ ಆಡಳಿತ ಮಂಡಳಿಯ ತುರ್ತು ಸಭೆ ರದ್ದಾಯಿತು. ಸಹಕಾರ ಸಂಘಗಳ ಹೆಚ್ಚುವರಿ ರಿಜಿಸ್ಟ್ರಾರ್ ತಡೆಯಾಜ್ಞೆ ನೀಡಿದ ಹಿನ್ನೆಲೆಯಲ್ಲಿ ಸಭೆ ರದ್ದಾಗಿದೆ. 10- 15 ದಿನಗಳಲ್ಲಿ ಮುಂದಿನ ಸಭೆ ನಡೆಯಲಿದೆ ಎಂದು ಹರ್ಷ ಗುಪ್ತ ತಿಳಿಸಿದರು.

`ಮಂಗಳವಾರ ಸಂಜೆಯಷ್ಟೇ ಅಧಿಕಾರ ವಹಿಸಿಕೊಂಡಿದ್ದೇನೆ. ಹಣ ದುರುಪಯೋಗ ಸೇರಿದಂತೆ ಹಿಂದಿನ ವ್ಯವಸ್ಥಾಪಕ ನಿರ್ದೇಶಕರ ವಿರುದ್ಧ ಕೆಲವೊಂದು ದೂರುಗಳು ಬಂದಿವೆ. ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು~ ಎಂದು ಅವರು ತಿಳಿಸಿದರು. ಲಕ್ಷ್ಮಣ ರೆಡ್ಡಿ ಅವರು ವ್ಯವಸ್ಥಾಪಕ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡ ಕೂಡಲೇ 18 ಮಂದಿ ಸಿಬ್ಬಂದಿಯನ್ನು ವರ್ಗಾವಣೆ ಮಾಡಿ ಹೊರಡಿಸಿದ್ದ ಆದೇಶವನ್ನು ಮಂಗಳವಾರ ಬೆಳಿಗ್ಗೆ ರದ್ದುಪಡಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.