ಬೆಂಗಳೂರು: ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶನಿವಾರದಿಂದ ಏ.23 ರವರೆಗೆ ನಡೆಯಲಿರುವ ಐಪಿಎಲ್ ಕ್ರಿಕೆಟ್ ಪಂದ್ಯಗಳ ವೀಕ್ಷಣೆಗೆ ಹೆಚ್ಚಿನ ಸಂಖ್ಯೆಯಲ್ಲಿ ಕ್ರೀಡಾಭಿಮಾನಿಗಳು ಬರುವ ನಿರೀಕ್ಷೆಯಿಂದ ಪಂದ್ಯಗಳ ದಿನಗಳಂದು ಮಧ್ಯಾಹ್ನ 12 ಗಂಟೆಯಿಂದ ರಾತ್ರಿ 8 ರವರೆಗೆ ಕ್ರೀಡಾಂಗಣದ ಸುತ್ತಮುತ್ತಲಿನ ರಸ್ತೆಗಳಲ್ಲಿ ವಾಹನ ನಿಲುಗಡೆಯನ್ನು ನಿಷೇಧಿಸಲಾಗಿದೆ.
ಪಂದ್ಯ ವೀಕ್ಷಣೆಗೆ ಬರುವ ಕ್ರೀಡಾಭಿಮಾನಿಗಳ ಅನುಕೂಲಕ್ಕಾಗಿ ಪರ್ಯಾಯ ವಾಹನ ನಿಲುಗಡೆ ವ್ಯವಸ್ಥೆ ಮಾಡಲಾಗಿದೆ ಎಂದು ನಗರ ಸಂಚಾರ ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪಂದ್ಯಗಳ ದಿನಗಳಂದು ಕ್ವೀನ್ಸ್ ರಸ್ತೆಯ ಸಿ.ಟಿ.ಓ ವೃತ್ತದಿಂದ ಕ್ವೀನ್ಸ್ ವೃತ್ತದ ವರೆಗೆ, ಎಂ.ಜಿ ರಸ್ತೆಯ ಅನಿಲ್ ಕುಂಬ್ಳೆ ವೃತ್ತದಿಂದ ಕ್ವೀನ್ಸ್ ವೃತ್ತದ ವರೆಗೆ, ಲಿಂಕ್ ರಸ್ತೆಯಲ್ಲಿ ಎಂ.ಜಿ ರಸ್ತೆಯಿಂದ ಕಬ್ಬನ್ ರಸ್ತೆ ವರೆಗೆ, ರಾಜಭವನ ರಸ್ತೆ, ಟಿ.ಚೌಡಯ್ಯ ರಸ್ತೆ ಮತ್ತು ರೇಸ್ ಕೋರ್ಸ್ ರಸ್ತೆಗಳಲ್ಲಿ, ಚಿನ್ನಸ್ವಾಮಿ ಕ್ರೀಡಾಂಗಣದ ಕಾಂಪೌಂಡಿಗೆ ಹೊಂದಿಕೊಂಡಂತೆ ರಸ್ತೆಯ ಎರಡೂ ಕಡೆಗಳಲ್ಲಿ , ಸೆಂಟ್ರಲ್ ಸ್ಟ್ರೀಟ್, ಕಬ್ಬನ್ ರಸ್ತೆಯ ಬಿ.ಆರ್.ವಿ ವೃತ್ತದಿಂದ ಡಿಕನ್‌ಸನ್ ರಸ್ತೆಯ ಜಂಕ್ಷನ್ ವರೆಗೆ, ಕಬ್ಬನ್ ರಸ್ತೆಯಲ್ಲಿ ಕಾಮರಾಜ ರಸ್ತೆ ಜಂಕ್ಷನ್‌ನಿಂದ ಡಿಕನ್‌ಸನ್ ರಸ್ತೆಯ ಜಂಕ್ಷನ್ ವರೆಗೆ ಬಿಎಂಟಿಸಿ ಬಸ್‌ಗಳನ್ನು ಹೊರತುಪಡಿಸಿ ಎಲ್ಲಾ ವಾಹನ ನಿಲುಗಡೆ ನಿಷೇಧಿಸಿದೆ.
ಮದ್ರಾಸ್ ಬ್ಯಾಂಕ್ ರಸ್ತೆಯ ಎಸ್.ಬಿ.ಐ ವೃತ್ತದಿಂದ ಆಶೀರ್ವಾದಂ ವೃತ್ತದ ವರೆಗೆ, ಮ್ಯೂಸಿಯಂ ರಸ್ತೆಯಲ್ಲಿ ಎಂ.ಜಿ ರಸ್ತೆಯಿಂದ ಮದ್ರಾಸ್ ಬ್ಯಾಂಕ್ ರಸ್ತೆ ಹಾಗೂ ರೆಸಿಡೆನ್ಸಿ ರಸ್ತೆ ವರೆಗೆ, ಕಸ್ತೂರ ಬಾ ರಸ್ತೆಯಲ್ಲಿ ಕ್ವೀನ್ಸ್ ವೃತ್ತದಿಂದ ಹಡ್ಸನ್ ವೃತ್ತದ ವರೆಗೆ ಹಾಗೂ ಗ್ರ್ಯಾಂಡ್ ರಸ್ತೆಯಲ್ಲಿ ಸಿದ್ದಲಿಂಗಯ್ಯ ವೃತ್ತದಿಂದ ಆರ್.ಆರ್.ಎಂ.ಆರ್ ವೃತ್ತದವರೆಗೆ, ಕಬ್ಬನ್‌ಪಾರ್ಕ್ ಒಳಭಾಗದ ಕಿಂಗ್ ರಸ್ತೆ, ಪ್ರೆಸ್ ಕ್ಲಬ್ ಮುಂಭಾಗ ಹಾಗೂ ಬಾಲಭವನ ಫೌಂಟನ್ ರಸ್ತೆಗಳಲ್ಲಿ ವಾಹನಗಳ ನಿಲುಗಡೆಯನ್ನು ನಿಷೇಧಿಸಲಾಗಿದೆ.
ಬಿ.ಆರ್.ವಿ ಜಂಕ್ಷನ್‌ನಿಂದ, ಬಿ.ಆರ್.ವಿ ಮೈದಾನದ ಪ್ರವೇಶದವರೆಗೆ ಕಬ್ಬನ್ ರಸ್ತೆಯ ರಸ್ತೆಯ ಒಂದು ಬದಿಗೆ ವಾಹನ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ. ಚಿನ್ನಸ್ವಾಮಿ ಕ್ರೀಡಾಂಗಣದ ಸದಸ್ಯರು ಹಾಗೂ ಪಂದ್ಯ ವೀಕ್ಷಣೆಗೆ ಬರುವ ಕ್ರೀಡಾಭಿಮಾನಿಗಳ ವಾಹನಗಳನ್ನು ಸೆಂಟ್ ಜೋಸೆಫ್ ಇಂಡಿಯನ್ ಹೈಸ್ಕೂಲ್, ಕಂಠೀರವ ಕ್ರೀಡಾಂಗಣ, ಶಿವಾಜಿನಗರ ಬಸ್ ನಿಲ್ದಾಣದ ಒಂದನೇ ಮಹಡಿಯಲ್ಲಿ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ.
ಕ್ರೀಡಾಂಗಣದ ಸುತ್ತಮುತ್ತ ವಾಹನ ನಿಲುಗಡೆಗೆ ಸ್ಥಳಾವಕಾಶ ಕಡಿಮೆ ಇರುವುದರಿಂದ ಸಂಚಾರ ದಟ್ಟಣೆ ತಪ್ಪಿಸುವ ಸಲುವಾಗಿ ಪಂದ್ಯ ವೀಕ್ಷಣೆಗೆ ಬರುವ ಕ್ರೀಡಾಭಿಮಾನಿಗಳು ಮೆಟ್ರೊ, ಬಿಎಂಟಿಸಿ ಬಸ್‌ಗಳ ಸೇವೆಯನ್ನು ಬಳಸಿಕೊಳ್ಳಲು ಸಂಚಾರ ಪೊಲೀಸರು ಪ್ರಕಟಣೆಯಲ್ಲಿ ಕೋರಿದ್ದಾರೆ.
ಟಿಕೆಟ್ ಮೇಲೆ ನಿಗಾ ವಹಿಸಲು ಆಗ್ರಹ
ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುವ ಐಪಿಎಲ್ ಸರಣಿಯ ಕ್ರಿಕೆಟ್ ಪಂದ್ಯದ ಟಿಕೆಟ್ ನೀಡುವ ಪ್ರಕ್ರಿಯೆಯಲ್ಲಿ ರಾಜ್ಯ ಕ್ರಿಕೆಟ್ ಸಂಸ್ಥೆಯ ಪಾತ್ರದ (ಕೆಎಸ್‌ಸಿಎ) ಮೇಲೆ ನಿಗಾ ಇಡಲು ಸರ್ಕಾರ ಅಧಿಕಾರಿಯೊಬ್ಬರನ್ನು ನೇಮಕ ಮಾಡಬೇಕು ಎಂದು ಆಗ್ರಹಿಸಿ ಕಾಂಗ್ರೆಸ್ ಶಾಸಕ ಪಿ.ಎಂ. ಅಶೋಕ ಅವರು ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡರಿಗೆ ಪತ್ರ ಬರೆದಿದ್ದಾರೆ.
ಚಿನ್ನಸ್ವಾಮಿ ಕ್ರೀಡಾಂಗಣದ ಒಟ್ಟು ಸಾಮರ್ಥ್ಯದ ಶೇಕಡ 20ರಷ್ಟು ಆಸನಗಳನ್ನು (8,000) ಕೆಎಸ್‌ಸಿಎಗೆ ನೀಡಲಾಗಿದೆ. ಆದರೆ ಸಂಸ್ಥೆಯ ಕೆಲವರು ತಮ್ಮ ಸಮೀಪದ ಸಂಬಂಧಿಗಳಿಗೆ ಮಾತ್ರ ಟಿಕೆಟ್‌ಗಳನ್ನು ನೀಡುತ್ತಿದ್ದಾರೆ ಎಂದು ಪತ್ರದಲ್ಲಿ ಆರೋಪಿಸಿದ್ದಾರೆ.
2011ರ ಫೆಬ್ರುವರಿಯಲ್ಲಿ ಭಾರತ ಮತ್ತು ಇಂಗ್ಲೆಂಡ್ ತಂಡಗಳ ನಡುವೆ ನಡೆದ ಪಂದ್ಯದ ಗೌರವ ಪಾಸುಗಳನ್ನು ಸಂಸ್ಥೆ ದುರುಪಯೋಗ ಮಾಡಿಕೊಂಡ ವಿಚಾರವನ್ನು ವಿಧಾನಸಭೆಯಲ್ಲಿ ಪ್ರಸ್ತಾಪ ಮಾಡಲಾಗಿತ್ತು. ಪಾಸುಗಳು ದುರುಪಯೋಗ ಆಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಸರ್ಕಾರ ಆಗ ಭರವಸೆ ನೀಡಿತ್ತು.
ಸಂಸ್ಥೆಯು ಶಾಸಕರಿಗೆ ಪಂದ್ಯ ವೀಕ್ಷಿಸಲು ಅಗತ್ಯ ಪಾಸುಗಳನ್ನು ನೀಡಬೇಕು ಎಂಬುದು ಸದನದ ಆಶಯವಾಗಿತ್ತು. ಆದರೆ ಈ ಬಾರಿಯ ಐಪಿಎಲ್ ಸರಣಿಯಲ್ಲೂ ಹಳೆಯ ಚಾಳಿ ಮರುಕಳಿಸಿದೆ. ಬಿಬಿಎಂಪಿ ಸದಸ್ಯರು 450 ಪಾಸುಗಳನ್ನು ಪಡೆದಿದ್ದಾರೆ ಎಂಬ ಮಾತುಗಳೂ ಕೇಳಿಬಂದಿವೆ.
ಆದರೆ ಕೆಎಸ್‌ಸಿಎ ಈ ಗೊಂದಲಗಳಿಗೆ ರಾಯಲ್ ಚಾಲೆಂಜರ್ಸ್ ಸಂಸ್ಥೆಯನ್ನು ದೂಷಿಸುತ್ತಿದೆ ಎಂದು ಪತ್ರದಲ್ಲಿ ವಿವರಿಸಿದ್ದಾರೆ. ಮಹಾರಾಷ್ಟ್ರ ಸರ್ಕಾರ ಪಾಲಿಕೆ ಸದಸ್ಯರು ಮತ್ತು ಶಾಸಕರಿಗೆ ಒಂದು ಸಾವಿರ ಪಾಸುಗಳನ್ನು ನೀಡುವಂತೆ, ರಾಜ್ಯ ಸರ್ಕಾರ ಕೂಡ ಶಾಸಕರಿಗೆ ಅಗತ್ಯ ಪಾಸ್ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಅಶೋಕ ಅವರು ಮುಖ್ಯಮಂತ್ರಿಗಳನ್ನು ಪತ್ರದಲ್ಲಿ ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.