ADVERTISEMENT

ಕ್ರಿಕೆಟ್ ಬೆಟ್ಟಿಂಗ್: ಇಬ್ಬರ ಬಂಧ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2012, 19:30 IST
Last Updated 19 ಏಪ್ರಿಲ್ 2012, 19:30 IST

ಬೆಂಗಳೂರು: ಕ್ರಿಕೆಟ್ ಬೆಟ್ಟಿಂಗ್‌ನಲ್ಲಿ ತೊಡಗಿದ್ದ ಇಬ್ಬರನ್ನು ಬಂಧಿಸಿರುವ ಕೇಂದ್ರ ಅಪರಾಧ ವಿಭಾಗದ ಪೊಲೀಸರು, ಆರೋಪಿಗಳಿಂದ 15.5ಲಕ್ಷ ರೂಪಾಯಿ ನಗದು, 34 ಮೊಬೈಲ್‌ಗಳು, ಲ್ಯಾಪ್‌ಟಾಪ್ ಹಾಗೂ ಇತರೆ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಮೈಸೂರಿನ ಎನ್.ಆರ್ ಮೊಹಲ್ಲಾ ನಿವಾಸಿ ಕುನಾಲ್.ಎಸ್.ನಾರಂಗ್ (29) ಹಾಗೂ ಹಿಮಾಚಲಪ್ರದೇಶ ಮೂಲದ ಅತೀಶ್‌ಕುಮಾರ್ (25) ಬಂಧಿತರು. ಸಂಜಯ್‌ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಚಿಕ್ಕಮಾರಹಳ್ಳಿ ಬಸ್ ನಿಲ್ದಾಣದ ಬಳಿ ಇರುವ ಖಾಸಗಿ ಹೊಟೇಲ್‌ನಲ್ಲಿ ಬೆಟ್ಟಿಂಗ್ ದಂಧೆ ನಡೆಯುತ್ತಿದೆ ಎಂಬ ಖಚಿತ ಮಾಹಿತಿಯಿಂದ ದಾಳಿ ನಡೆಸಲಾಯಿತು.
 
ಐಪಿಎಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಡೆಕ್ಕನ್‌ಚಾರ್ಜರ್ಸ್‌ ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳ ನಡುವಿನ ಪಂದ್ಯಕ್ಕೆ ಫೋನ್ ಮೂಲಕ ಬೆಟ್ಟಿಂಗ್ ಕಟ್ಟಿಸಿಕೊಳ್ಳುತ್ತಿದ್ದ ಆರೋಪಿ ಅತೀಶ್‌ಕುಮಾರ್‌ನನ್ನು ಮಂಗಳವಾರ (ಏ.17) ಬಂಧಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

ಅತೀಶ್‌ಕುಮಾರ್‌ನಿಂದ 60 ಸಾವಿರ ರೂಪಾಯಿ ಹಣ ಹಾಗೂ ನಾಲ್ಕು ಮೊಬೈಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಯನ್ನು ವಿಚಾರಣೆ ನಡೆಸಿದಾಗ ಕುನಾಲ್.ಎಸ್.ನಾರಂಗ್‌ನ ನಿರ್ದೇಶನದಂತೆ ಬೆಟ್ಟಿಂಗ್‌ನಲ್ಲಿ ತೊಡಗಿರುವುದಾಗಿ ಮಾಹಿತಿ ನೀಡಿದನು. ಕುನಾಲ್ ಏ. 4ರಿಂದ ಉಡುಪಿ ಜಿಲ್ಲೆಯ ಕಾಪು ಗ್ರಾಮದಲ್ಲಿರುವ ಅತಿಥಿಗೃಹದಲ್ಲಿ ಉಳಿದುಕೊಂಡಿದ್ದು, ಗಿರಾಕಿಗಳನ್ನು ಮೊಬೈಲ್ ಮೂಲಕ ಸಂಪರ್ಕಿಸಿ ಅವರಿಂದ ಬೆಟ್ಟಿಂಗ್ ಕಟ್ಟಿಸಿಕೊಳ್ಳುತ್ತಿದ್ದ.
 
ಬುಧವಾರ ಆತನನ್ನು ಬಂಧಿಸಿ 15 ಲಕ್ಷ ನಗದು, ಒಂದು ಲ್ಯಾಪ್ ಟಾಪ್, 30 ಮೊಬೈಲ್‌ಗಳು ಹಾಗೂ ಇತರೆ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದರು.  ಆತೀಶ್‌ಕುಮಾರ್‌ನನ್ನು ಬೆಂಗಳೂರಿನ ಸಂಜಯನಗರದ ಖಾಸಗಿ ಹೋಟೆಲ್‌ನಲ್ಲಿ ಇರಿಸಿ ಬೆಟ್ಟಿಂಗ್ ನಡೆಸಲು ಸೂಚಿಸಿದ್ದೆ ಹಾಗೂ ಆತನಿಗೆ ಹಣಕಾಸಿನ ನೆರವು ನೀಡಿದ್ದಾಗಿ ವಿಚಾರಣೆ ವೇಳೆ ಕುನಾಲ್  ಒಪ್ಪಿಕೊಂಡಿದ್ದಾನೆ. ಆರೋಪಿಗಳ ವಿರುದ್ಧ ಸಂಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಗರ ಪೊಲೀಸ್ ಕಮಿಷನರ್ ಜ್ಯೋತಿ ಪ್ರಕಾಶ್‌ಮಿರ್ಜಿ ನಿರ್ದೇಶನದಲ್ಲಿ, ಅಪರಾಧ ಪೂರ್ವ ವಿಭಾಗದ ಜಂಟಿ ಪೊಲೀಸ್ ಕಮಿಷನರ್ ಬಿ.ದಯಾನಂದ ಹಾಗೂ ಡಿಸಿಪಿ ಕೃಷ್ಣಂರಾಜು ಅವರ ಮಾರ್ಗದರ್ಶನದಲ್ಲಿ, ಎಸಿಪಿ ಕೆ.ಎನ್. ಜಿತೇಂದ್ರನಾಥ್ ಹಾಗೂ ಸಿಬ್ಬಂದಿ  ಆರೋಪಿಗಳನ್ನು ಬಂಧಿಸಿದ್ದಾರೆ. 
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.