ADVERTISEMENT

ಕ್ರಿಕೆಟ್ ಬೆಟ್ಟಿಂಗ್ ದಂಧೆ: ಹತ್ತು ಮಂದಿ ಬಂಧನ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2013, 20:09 IST
Last Updated 12 ಏಪ್ರಿಲ್ 2013, 20:09 IST

ಬೆಂಗಳೂರು: ಐಪಿಎಲ್ ಕ್ರಿಕೆಟ್ ಪಂದ್ಯಗಳ ಮೇಲೆ ಬೆಟ್ಟಿಂಗ್ ದಂಧೆ ನಡೆಸುತ್ತಿದ್ದ ಹತ್ತು ಮಂದಿ ಆರೋಪಿಗಳನ್ನು ಬಂಧಿಸಿರುವ ಸಿಸಿಬಿ ಪೊಲೀಸರು, ್ಙ 93 ಸಾವಿರ ನಗದನ್ನು ವಶಪಡಿಸಿಕೊಂಡಿದ್ದಾರೆ.

ಚಾಮರಾಜಪೇಟೆಯ ರಮೇಶ್ (28), ರಘುಗಾಯಕ್‌ವಾಡ್, ಗವಿಪುರ ಗುಟ್ಟಹಳ್ಳಿಯ ರವಿ (27), ಗಿರಿನಗರದ ಶಿವಪ್ರಕಾಶ್ (30), ಕೆಂಪೇಗೌಡನಗರದ ಮಂಜುನಾಥ್ (27), ಬನಶಂಕರಿಯ ರವಿಕುಮಾರ್ (29), ನಂದಿನಿ ಲೇಔಟ್‌ನ ಧನಂಜಯ (32) ಹನುಮಂತನಗರದ ಗುರುಮೂರ್ತಿ, ಉತ್ತರಹಳ್ಳಿಯ ಪುರುಷೋತ್ತಮ್ (27) ಹಾಗೂ ಕತ್ರಿಗುಪ್ಪೆಯ ನಾಗರಾಜ್ ಬಂಧಿತರು.

ಬಸವನಗುಡಿ ಸಮೀಪದ ವಸತಿ ಗೃಹವೊಂದರಲ್ಲಿ ತಂಗಿದ್ದ ಆರೋಪಿಗಳು, ಗುರುವಾರ ನಡೆದ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ಮತ್ತು ಕೋಲ್ಕತ್ತ ನೈಟ್ ರೈಡರ್ಸ್‌ ತಂಡಗಳ ನಡುವಿನ ಪಂದ್ಯಕ್ಕೆ ಹಾಗೂ ರಾಜಸ್ತಾನ್ ರಾಯಲ್ಸ್ ಹಾಗೂ ಪುಣೆ ವಾರಿಯರ್ಸ್‌ ತಂಡಗಳ ನಡುವಿನ ಪಂದ್ಯದ ಮೇಲೆ ಬೆಟ್ಟಿಂಗ್ ನಡೆಸುತ್ತಿದ್ದರು. ಈ ಬಗ್ಗೆ ದೊರೆತ ಖಚಿತ ಮಾಹಿತಿಯಿಂದ ರಾತ್ರಿ 9 ಗಂಟೆ ಸುಮಾರಿಗೆ ದಾಳಿ ನಡೆಸಿ ಅವರನ್ನು ಬಂಧಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳು ಟಿ.ವಿಯಲ್ಲಿ ಪಂದ್ಯ ವೀಕ್ಷಿಸುತ್ತ ಮೊಬೈಲ್‌ಗಳ ಮೂಲಕ ಬೆಟ್ಟಿಂಗ್ ವ್ಯವಹಾರ ನಡೆಸುತ್ತಿದ್ದರು. ಟಿ.ವಿ, ಸೆಟ್ ಟಾಪ್‌ಬಾಕ್ಸ್, 11 ಮೊಬೈಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಬಸವನಗುಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪಘಾತ: ಬಿಡಿಎ ಎಂಜಿನಿಯರ್ ಸಾವು : ನಾಗರಬಾವಿ ವರ್ತುಲ ರಸ್ತೆಯಲ್ಲಿ ವಾಯು ವಿಹಾರ ಮಾಡುತ್ತಿದ್ದ ವೇಳೆ ಕಾರು ಡಿಕ್ಕಿ ಹೊಡೆದು ಗಾಯಗೊಂಡಿದ್ದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ (ಎಇಇ) ಕೆ.ಎಲ್.ವೆಂಕಟೇಶ್ (54) ಅವರು ಗುರುವಾರ ರಾತ್ರಿ ಸಾವನ್ನಪ್ಪಿದರು.

ನಾಗರಬಾವಿ ಎರಡನೇ ಹಂತದ ನಿವಾಸಿಯಾದ ವೆಂಕಟೇಶ್, ಬುಧವಾರ ಬೆಳಿಗ್ಗೆ (ಏ.9) 6.30ರ ಸುಮಾರಿಗೆ ಮನೆ ಸಮೀಪ ವಾಯು ವಿಹಾರ ಮಾಡುತ್ತಿದ್ದರು. ಈ ವೇಳೆ ಸುಮನಹಳ್ಳಿ - ನಾಗರಬಾವಿ ಮಾರ್ಗವಾಗಿ ಹೋಗುತ್ತಿದ್ದ ಕಾರು ಅವರಿಗೆ ಡಿಕ್ಕಿ ಹೊಡೆದಿತ್ತು. ತೀವ್ರವಾಗಿ ಗಾಯಗೊಂಡ ಅವರನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆದರೆ, ಚಿಕಿತ್ಸೆಗೆ ಸ್ಪಂದಿಸದ ಅವರು ಗುರುವಾರ ರಾತ್ರಿ 11.20ಕ್ಕೆ ಕೊನೆಯುಸಿರೆಳೆದರು ಎಂದು ಪೊಲೀಸರು ಮಾಹಿತಿ ನೀಡಿದರು.

ಕಾರು ಚಾಲಕ ಜೆ.ಕುಮಾರ್ ಎಂಬಾತನನ್ನು ಶುಕ್ರವಾರ ವಶಕ್ಕೆ ಪಡೆಯಲಾಗಿದೆ ಎಂದು ಕಾಮಾಕ್ಷಿಪಾಳ್ಯ ಸಂಚಾರ ಪೊಲೀಸರು ಹೇಳಿದ್ದಾರೆ. ಪ್ರಕರಣ ದಾಖಲಾಗಿದೆ.

ಬೈಕ್ ಡಿಕ್ಕಿ: ಪಾದಚಾರಿ ಸಾವು : ರಸ್ತೆ ದಾಟುತ್ತಿದ್ದ ವೇಳೆ ಬೈಕ್ ಡಿಕ್ಕಿ ಹೊಡೆದು ಕಾಳೀರಶೆಟ್ಟಿ (70) ಎಂಬುವರು ಸಾವನ್ನಪ್ಪಿರುವ ಘಟನೆ ಮಾರತ್ತಹಳ್ಳಿ ಮುಖ್ಯರಸ್ತೆಯಲ್ಲಿ ಗುರುವಾರ ರಾತ್ರಿ ನಡೆದಿದೆ.

ಕಾಳೀರಶೆಟ್ಟಿ ಅವರು ಸಂಜಯನಗರ ನಿವಾಸಿ ಎಂದು ಗೊತ್ತಾಗಿದೆ. ಆದರೆ, ಅವರ ಕುಟುಂಬ ಸದಸ್ಯರ ಬಗ್ಗೆ ಮಾಹಿತಿ ಇಲ್ಲ. ಘಟನೆ ನಂತರ ಬೈಕ್ ಸವಾರ ಪರಾರಿಯಾಗಿದ್ದು ಆತನ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಎಚ್‌ಎಎಲ್ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.