ಬೆಂಗಳೂರು: ಕಾರ್ಮಿಕರ ದಿನದ ಅಂಗವಾಗಿ ನಗರದ ಕ್ರೆಡಯ್ (ಭಾರತೀಯ ರಿಯಲ್ ಎಸ್ಟೇಟ್ ಮತ್ತು ನಿರ್ಮಾಣಗಾರರ ಮಹಾಸಂಘ) ಸಂಸ್ಥೆ ಇಂದಿರಾನಗರ ರೋಟರಿ ಕ್ಲಬ್ ಸಹಯೋಗದಲ್ಲಿ ಭಾನುವಾರ ಕಾರ್ಮಿಕರ ದಿನ ಒಲಿಂಪಿಕ್ಸ್ ಆಯೋಜಿಸಿತ್ತು.
ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷ ಸುಶೀಲ್ ಮಂತ್ರಿ ಮಾತನಾಡಿ ‘ಸುಧಾರಣೆ ಮತ್ತು ಹೊಸತನ ಕಾಪಾಡಿಕೊಳ್ಳಲು ಶ್ರಮಿಸುತ್ತಿರುವ ಸಂಸ್ಥೆ ಕಾರ್ಮಿಕರಿಗಾಗಿ ಪ್ರಥಮ ಬಾರಿಗೆ ಇಂತಹ ಯೋಜನೆಯೊಂದನ್ನು ರೂಪಿಸಿದೆ. ಸಂಸ್ಥೆಯ ಸದಸ್ಯರಿಗೆ ಮತ್ತು ಕಾರ್ಮಿಕರಿಗೆ ಉತ್ತಮ ಸೌಲಭ್ಯಗಳನ್ನು ನೀಡಲು ಶ್ರಮಿಸಲಾಗುತ್ತಿದೆ’ ಎಂದರು.
‘ಹಗಲುರಾತ್ರಿ ವಿವಿಧ ಯೋಜನೆಗಳನ್ನು ಯಶಸ್ವಿಗೊಳಿಸಲು ಶ್ರಮಿಸುತ್ತಿರುವ ಕಾರ್ಮಿಕರಿಗೆ ಕ್ರೆಡಾಯ್ ಪರವಾಗಿ ನಾನು ಕೃತಜ್ಞತೆ ಸಲ್ಲಿಸುತ್ತೇನೆ’ ಎಂದು ಅವರು ಹೇಳಿದರು. ಕಾರ್ಯಕ್ರಮದ ಸಂಘಟನಾ ಅಧ್ಯಕ್ಷ ಸುರೇಶ್ ಹರಿ ಮಾತನಾಡಿ ‘ನಗರದ ವಿವಿಧ ಭಾಗಗಳಿಂದ ಈ ಕ್ರೀಡಾಕೂಟದಲ್ಲಿ ಸುಮಾರು 500 ಕಟ್ಟಡ ಕಾರ್ಮಿಕರು ಭಾಗವಹಿಸಿದ್ದಾರೆ’ ಎಂದರು.
ಇಂದಿರಾನಗರ ರೋಟರಿ ಸಂಸ್ಥೆ ಅಧ್ಯಕ್ಷ ಸುರೇಶ್ ಪಟೇಲ್, ‘ಪ್ರತಿವರ್ಷ ಸಂಸ್ಥೆಯು ಜಿ.ಎಸ್.ರಾಂಧವ್ ಹಾಕಿ ಟೂರ್ನ್‌ಮೆಂಟ್, ನಾನ್ ಮೆಡಲಿಸ್ಟ್ ಈಜು ಸ್ಪರ್ಧೆ, ಬ್ಯಾಸ್ಕೆಟ್ ಬಾಲ್ ಟೂರ್ನ್‌ಮೆಂಟ್, ಅಂತರ ಕಾಲೇಜು ಪೂಟ್‌ಬಾಲ್ ಟೂರ್ನ್‌ಮೆಂಟ್ ಮುಂತಾದವುಗಳನ್ನು ನಡೆಸುತ್ತಿದೆ’ ಎಂದು ಅವರು ತಿಳಿಸಿದರು.
ಸ್ಪರ್ಧೆಯಲ್ಲಿ ವಿಜೇತರಾದವರಿಗೆ ವಿವಿಧ ಬಹುಮಾನಗಳನ್ನು ವಿತರಿಸಲಾಯಿತು. ಮಲ್ಲೇಶ್ವರಂ ಶಾಸಕ ಡಾ.ಅಶ್ವತ್ಥನಾರಾಯಣ, ಸಂಸ್ಥೆಯ ಕಾರ್ಯದರ್ಶಿ ಶಂಕರ್ ಶಾಸ್ತ್ರಿ, ಕರ್ನಾಟಕ ಕಟ್ಟಡ ಮತ್ತು ಇತರ ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯ ಸಿಇಓ ವಸಂತ ಕುಮಾರ್ ಎನ್.ಹಿಟ್ಟಂಗಡಿ ಮತ್ತಿತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.