ADVERTISEMENT

ಗಂಡನ ಕೊಲೆಗೆ ಹೆಂಡತಿಯ ಸಂಚು

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2012, 19:30 IST
Last Updated 18 ಏಪ್ರಿಲ್ 2012, 19:30 IST

ಚನ್ನಪಟ್ಟಣ: ಕೆಲದಿನಗಳ ಹಿಂದೆ ತಾಲ್ಲೂಕಿನ ಮಾರ್ಚನಹಳ್ಳಿ ಗ್ರಾಮದ ಬಳಿ ಪತ್ತೆಯಾಗಿದ್ದ ಅಪರಿಚಿತ ವ್ಯಕ್ತಿಯ ನಿಗೂಢ ಕೊಲೆ ಪ್ರಕರಣವನ್ನು ಭೇದಿಸುವಲ್ಲಿ ಗ್ರಾಮಾಂತರ ಪೊಲೀಸರು ಯಶಸ್ವಿಯಾಗಿದ್ದಾರೆ.

ಬೆಂಗಳೂರಿನ ಕೆ.ಆರ್.ಪುರಂನ ಗುಣಶೇಖರ ಎಂಬುವರೇ ಕೊಲೆಯಾದ ವ್ಯಕ್ತಿಯಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತನ ಪತ್ನಿ ಶೋಭಾ, ನಾದಿನಿ ಶ್ವೇತಾ, ಶ್ವೇತಾಳ ಪ್ರಿಯಕರ ಸುಧೀರ್ ಹಾಗೂ ಈತನ ಸ್ನೇಹಿತರಾದ ಹರ್ಷ ಹಾಗೂ ಸುಜಿತ್ ಎಂಬುವರನ್ನು ಬಂಧಿಸಲಾಗಿದೆ.

ಗುಣಶೇಖರ್‌ನ ನಾದಿನಿ ಶ್ವೇತಾ, ಸುಧೀರ್ ಎಂಬ ವ್ಯಕ್ತಿಯನ್ನು ಪ್ರೀತಿಸುತ್ತಿದ್ದಳು. ಶ್ವೇತಾ ಮತ್ತು ಸುಧೀರ್ ನಡುವಿನ ಪ್ರೀತಿಗೆ ಗುಣಶೇಖರ್ ಅಡ್ಡಿಯಾಗಿದ್ದ. ಇದೇ ವೇಳೆ ಪತ್ನಿ ಶೋಭಾಳೊಂದಿಗೆ ಸಹ ಗುಣಶೇಖರ್‌ಗೆ ವೈಮನಸ್ಸು ಉಂಟಾಗಿತ್ತು. ತಂಗಿಯ ಪ್ರೀತಿಗೆ ಗುಣಶೇಖರ್ ಅಡ್ಡಿ ಮಾಡುತ್ತಿದ್ದಾನೆ ಎಂದು ಕ್ರೋಧಗೊಂಡಿದ್ದ ಶೋಭಾ ಗುಣಶೇಖರನನ್ನು ಕೊಲೆ ಮಾಡಲು ಸಂಚು ರೂಪಿಸಿದ್ದಳು.

ಸುಧೀರ್ ಈ ಸಂಚನ್ನು ಜಾರಿಗೊಳಿಸಲು ಉದ್ಯುಕ್ತನಾದ. ಅಂತಿಮವಾಗಿ ಬೆಂಗಳೂರಿನಲ್ಲಿರುವ ಗುಣಶೇಖರನ ಮನೆಯಲ್ಲಿಯೇ ಕೊಲೆ ಮಾಡಲಾಯಿತು. ತದನಂತರ ಚನ್ನಪಟ್ಟಣ ತಾಲ್ಲೂಕಿನ ಮಾರ್ಚನಹಳ್ಳಿಯ ಬಳಿಯಲ್ಲಿರುವ ಮೋರಿಗೆ ಶವವನ್ನು ಎಸೆದು ಆರೋಪಿಗಳು ಪರಾರಿಯಾಗಿದ್ದರು.

ಕೊಲೆಯಾದ ಮೂರು ದಿನಗಳ ಬಳಿಕ ಗ್ರಾಮಾಂತರ ಪೊಲೀಸ್ ಠಾಣೆಗೆ ಬಂದ ಶೋಭಾ ಶವದ ಗುರುತು ಪತ್ತೆ ಹಚ್ಚಿದ್ದಳು. `ಈತ ನನ್ನ ಗಂಡ, ಯಾರೋ ಕೊಲೆ ಮಾಡಿದ್ದಾರೆ~ ಎಂದು ಪೊಲೀಸರಿಗೆ ದೂರು ನೀಡಿದ್ದಳು.
ಶೋಭಾಳ ನಡವಳಿಕೆಯ ಬಗ್ಗೆ ಸಂದೇಹಗೊಂಡ ಸಿಪಿಐ ಸಂಪತ್‌ಕುಮಾರ್ ಆಕೆಯ ಮೊಬೈಲ್ ಕರೆಗಳನ್ನು ವಿವರವಾಗಿ ಪರಿಶೀಲಿಸಿದ್ದು ಬಳಿಕ ಆಕೆ ಸುಧೀರ್‌ನೊಂದಿಗೆ ಹೆಚ್ಚು ಮಾತನಾಡಿರುವ ಅಂಶ ಬೆಳಕಿಗೆ ಬಂದಿತು.
ಸಿಪಿಐ ಸಂಪತ್‌ಕುಮಾರ್, ಎಂ.ಕೆ.ದೊಡ್ಡಿ ಠಾಣೆ ಎಸೈ ವಸಂತ್‌ಕುಮಾರ್, ಗ್ರಾಮಾಂತರ ಠಾಣೆ ಎಸೈ ನರಸಿಂಹ ಮೂರ್ತಿ ತನಿಖಾ ತಂಡದಲ್ಲಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.