ADVERTISEMENT

ಗಣೇಶ ವಿಸರ್ಜನೆ: ಕೆರೆಯಲ್ಲಿ ಮುಳುಗಿ ಸಾವು

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2013, 19:59 IST
Last Updated 16 ಸೆಪ್ಟೆಂಬರ್ 2013, 19:59 IST

ನೆಲಮಂಗಲ: ತಾಲ್ಲೂಕಿನ ತ್ಯಾಗನ­ಹಳ್ಳಿಯಲ್ಲಿ ಗಣೇಶನ ಮೂರ್ತಿ ವಿಸರ್ಜನೆಗೆ ತೆರಳಿದ್ದ ವ್ಯಕ್ತಿಯೊಬ್ಬ ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಭಾನುವಾರ ರಾತ್ರಿ ಸಂಭವಿಸಿದೆ.

ಸುಮಾರು 100 ಜನರಿದ್ದ ತಂಡ ಗಣೇಶ ವಿಸರ್ಜನೆಗೆ ಭಾನುವಾರ ರಾತ್ರಿ ತ್ಯಾಗನಹಳ್ಳಿ ಕೆರೆಗೆ ಹೋಗಿದೆ. ಗಣೇಶನನ್ನು ವಿಸರ್ಜಿಸಿ ಮನೆಗೆ ತೆರಳುತ್ತಿದ್ದಾಗ ಮಾಯಪ್ಪ(40) ಇಲ್ಲ ಎಂಬುದು ತಿಳಿದು ಕೆರೆ ಬಳಿ ಹೋದಾಗ ಅವರು ಕೆರೆಯಲ್ಲಿ ಮುಳುಗಿರುವುದು ತಿಳಿದುಬಂದಿದೆ.

ಭಾನುವಾರ ಮಧ್ಯರಾತ್ರಿ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಸುದ್ದಿ ತಿಳಿದ ಕೂಡಲೇ ಕಾರ್ಯಾಚರಣೆ ನಡೆಸಿದ ಪೊಲೀಸರು ಶವವನ್ನು ಹೊರತೆಗೆದಿದ್ದಾರೆ.

ಈಜಲು ಹೋದ ವಿದ್ಯಾರ್ಥಿ ನೀರು ಪಾಲು
ನೆಲಮಂಗಲ:
ತಾಲ್ಲೂಕಿನ ದೇಗನಹಳ್ಳಿ ಕೆರೆಯಲ್ಲಿ ಈಜಲು ಹೋದ ವಿದ್ಯಾರ್ಥಿಯೊಬ್ಬ ನೀರಿನಲ್ಲಿ ಮುಳುಗಿ ಸತ್ತಿರುವ ಘಟನೆ ಭಾನುವಾರ ನಡೆದಿದೆ.

ಮೃತ ವಿದ್ಯಾರ್ಥಿ ದೇಗನಹಳ್ಳಿಯ ಬಸವರಾಜು ಅವರ ಪುತ್ರ ವಿನೋದ್(13) ಎಂದು ತಿಳಿದು­ಬಂದಿದೆ.

ಸರ್ಕಾರಿ ಶಾಲೆಯಲ್ಲಿ 7ನೇ ತರಗತಿ ವ್ಯಾಸಂಗ ಮಾಡುತ್ತಿದ್ದ ವಿನೋದ್ ತನ್ನ ಇಬ್ಬರು ಸ್ನೇಹಿತ­ರೊಂದಿಗೆ ಗ್ರಾಮದ ಹೊರವಲ­ಯದಲ್ಲಿರುವ ಕೆರೆಗೆ ಮಧ್ಯಾಹ್ನ ಈಜಲು ಹೋಗಿದ್ದ. ಈಜಬೇಕಾದರೆ ಕೆಸರಿನಲ್ಲಿ ಸಿಲುಕಿ ಮೇಲೇಳಲಾಗದೆ ಮೃತನಾ­ಗಿದ್ದಾನೆ ಎಂದು ತಿಳಿದುಬಂದಿದೆ.

ಈಜಲು ಜೊತೆಯಲ್ಲಿ ತೆರಳಿದ್ದ ಸ್ನೇಹಿತರು ಭಯಭೀತರಾಗಿ ಪೋಷಕರಿಗೆ ತಿಳಿಸಿದ್ದಾರೆ. ವಿನೋದನ ಪೋಷಕರು ಮತ್ತು ಗ್ರಾಮಸ್ಥರು ಎಷ್ಟು ಹೊತ್ತು ಹುಡುಕಿದರೂ ಶವ ಸಿಗದಿದ್ದಾಗ ಪೊಲೀಸರಿಗೆ ತಿಳಿಸಿದ್ದಾರೆ.

ಪೊಲೀಸರು ಮತ್ತು ಅಗ್ನಿಶಾಮಕ ದಳದವರು ಪ್ರಯಾಸಪಟ್ಟು ಸಂಜೆ ವೇಳೆಗೆ ಶವವನ್ನು ಹೊರತೆಗೆದು ಪೋಷಕರಿಗೆ ಒಪ್ಪಿಸಿದ್ದಾರೆ. ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ವಿನೋದನನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟುವಂತಿತ್ತು. ಮೂರು ದಿನಗಳಿಂದ ಸುರಿದ ಧಾರಾಕಾರ ಮಳೆಯಿಂದಾಗಿ ಕೆರೆಯು ತುಂಬಿದ್ದು, ಯಾರು ಕೆರೆಗೆ ಇಳಿಯದಂತೆ ಪೊಲೀಸರು ಸೂಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.