ADVERTISEMENT

ಗಣ್ಯರಿಂದ ಬಿಎಸ್‌ವೈ ಆರೋಗ್ಯ ವಿಚಾರಣೆ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2011, 19:30 IST
Last Updated 17 ಅಕ್ಟೋಬರ್ 2011, 19:30 IST

ಬೆಂಗಳೂರು: ನಗರದ ಬನ್ನೇರುಘಟ್ಟ ರಸ್ತೆಯ ಜಯದೇವ ಆಸ್ಪತ್ರೆಗೆ ದಾಖಲಾಗಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿಯಾಗಲು ಖಾದಿಧಾರಿಗಳೊಂದಿಗೆ ಕಾವಿ ಧಾರಿಗಳೂ ಸೋಮವಾರ ಭೇಟಿ ನೀಡಿ ತಮ್ಮ `ಶುಭ ಹಾರೈಕೆ~ ಮತ್ತು `ಆಶೀರ್ವಾದ~ಗಳನ್ನು ನೀಡಿದರು.

ಸಚಿವರಾದ ಗೋವಿಂದ ಕಾರಜೋಳ, ವಿ.ಸೋಮಣ್ಣ, ಬಸವರಾಜ ಬೊಮ್ಮಾಯಿ, ಎಸ್.ಎ.ರಾಮದಾಸ್, ಎಂ.ಪಿ.ರೇಣುಕಾಚಾರ್ಯ, ವಿಧಾನಪರಿಷತ್ ಸದಸ್ಯ ಎಂ.ವಿ.ರಾಜಶೇಖರನ್, ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷ ಜಿ.ಟಿ.ದೇವೇಗೌಡ, ಶಾಸಕರಾದ ಬಿ.ಪಿ.ಹರೀಶ್, ಆನಂದ್‌ಸಿಂಗ್, ಹರತಾಳು ಹಾಲಪ್ಪ, ಬೇಳೂರು ಗೋಪಾಲಕೃಷ್ಣ ಭೇಟಿ ನೀಡಿದ ಪ್ರಮುಖರು.

ಮಠಾಧೀಶರ ಪಟ್ಟಿಯಲ್ಲಿ ರಂಭಾಪುರಿ ಬಾಳೆಹೊನ್ನೂರ ಮಠದ ವೀರಸೋಮೇಶ್ವರ ಸ್ವಾಮೀಜಿ, ವಿಭೂತಿಪುರ, ಯಡಿಯೂರು, ಶಿವಗಂಗೆ, ಹೆಮ್ಮಿಗನೂರು, ಯಲಸೂರು ಮಠಗಳ ಸ್ವಾಮೀಜಿಗಳು ಆಗಮಿಸಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ರಂಭಾಪುರಿ ಶ್ರೀಗಳು, `ಮಾನವೀಯತೆ ದೃಷ್ಟಿಯಿಂದ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಆಶೀರ್ವದಿಸಲು ಬಂದಿದ್ದೆವು. ಅವರಿಗೆ ದೇವರು ಶ್ರೇಯಸ್ಸು ನೀಡಲಿ~ ಎಂದರು.ಎಸ್.ಎ.ರಾಮದಾಸ್, `ಯಡಿಯೂರಪ್ಪ ಅವರಿಗೆ ದೇವರು ಆರೋಗ್ಯ ನೀಡಲಿ ಎಂದು ಪ್ರಾರ್ಥಿಸುವುದನ್ನು ಹೊರತುಪಡಿಸಿ ಬೇರೇನೂ ಮಾಡಲಾಗುವುದಿಲ್ಲ~ ಎಂದರು.

ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿರುವುದರಿಂದ ಮತ್ತು ಮಾಜಿ ಮುಖ್ಯಮಂತ್ರಿಯೂ ಆಗಿದ್ದರಿಂದ ಯಡಿಯೂರಪ್ಪ ಅವರ ಭದ್ರತೆಗಾಗಿ 150ಕ್ಕೂ ಅಧಿಕ ಸಿವಿಲ್ ಮತ್ತು ಮೀಸಲು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.

ಬೆಂಬಲಿಗರ ಬಲವಂತದ ಪ್ರವೇಶ!

ಪ್ರಜಾವಾಣಿ ವಾರ್ತೆ
ಬೆಂಗಳೂರು:
ಆಸ್ಪತ್ರೆಯಲ್ಲಿರುವ ಮಾಜಿ ಸಿಎಂ ಯಡಿಯೂರಪ್ಪ ಅವರನ್ನು ಭೇಟಿ ಮಾಡುವುದಕ್ಕಾಗಿ ಸಚಿವ ರೇಣುಕಾಚಾರ್ಯ ವಾರ್ಡ್ ಪ್ರವೇಶಿಸಿದರು.

ಅವರ ಹಿಂದಿದ್ದ ಹಲವು ಬೆಂಬಲಿಗರಿಗೆ ಸ್ಥಳದಲ್ಲಿದ್ದ ಪೊಲೀಸರು ಪ್ರವೇಶ ನಿರಾಕರಿಸಿದರು. ಆದರೆ ಇದನ್ನು ಲೆಕ್ಕಿಸದ `ಬೆಂಬಲಿಗರು~ ವಾರ್ಡ್ ಪ್ರವೇಶಿಸಿಯೇ ಬಿಟ್ಟರು. ಇದಕ್ಕೆ ಪೂರಕವಾಗಿ ರೇಣುಕಾಚಾರ್ಯ ತಮ್ಮ ಬೆಂಬಲಿಗರನ್ನು ಒಳಬಿಡುವಂತೆ ಸನ್ನೆ ಮಾಡಿದರು!

ಇನ್ನೊಂದು ಸಂದರ್ಭದಲ್ಲಿ, ಕೆಲವೇ ನಿಮಿಷಗಳ ಅಂತರದಲ್ಲಿ `ಗರಿಗರಿ ಬಟ್ಟೆ~ ತೊಟ್ಟ ಹಲವರು ಯಾರಿಗೂ ಹೇಳದೇ ಕೇಳದೇ ವಾರ್ಡ್ ಒಳಗೆ ನಡೆದರು. ಪೊಲೀಸರು ಅಡ್ಡಿಪಡಿಸುವುದಿರಲಿ, ಯಾರೆಂದು ಕೇಳುವ ಯತ್ನವನ್ನೂ ಮಾಡಲಿಲ್ಲ. ಆದರೆ ಹಾಗೆ ಹೋದವರನ್ನು ಸಿಟ್ಟಿನಿಂದ ಮನಸ್ಸಿನಲ್ಲೇ ಶಪಿಸುತ್ತಿದ್ದರು.

ಮಾಜಿ ಮುಖ್ಯಮಂತ್ರಿಯೊಬ್ಬರು ದಾಖಲಾಗಿದ್ದರಿಂದ ಆಸ್ಪತ್ರೆಗೆ ಬರುವವರಿಗೆ ಇದು ಕುತೂಹಲದ ಕೇಂದ್ರವಾಗಿತ್ತು. ಹಲವು ನರ್ಸ್‌ಗಳು ಹಾಗೂ ಇತರ ಸಿಬ್ಬಂದಿ ತಮ್ಮ ಕೆಲಸದ ಪಾಳಿ ಮುಗಿದಿದ್ದರೂ ಮುಂದೆ ಏನಾಗುತ್ತದೋ ನೋಡೋಣ ಎಂದು ಕಾಯುತ್ತಿದ್ದರು.

ಯಡಿಯೂರಪ್ಪ ಆರೋಗ್ಯದ ಬಗ್ಗೆ ಮಾಹಿತಿ ನೀಡುವ ವೈದ್ಯರ ಮತ್ತು ಅವರನ್ನು ಭೇಟಿಯಾಗಿ ಯೋಗಕ್ಷೇಮ ವಿಚಾರಿಸಿದ ಮುಖಂಡರ `ಬೈಟ್~ ಪಡೆಯಲು ಕಾಯುತ್ತಿದ್ದ ಎಲೆಕ್ಟ್ರಾನಿಕ್ ಮಾಧ್ಯಮದ ಪ್ರತಿನಿಧಿಗಳು, ರೋಗಿಗಳನ್ನು ಕೊಂಡೊಯ್ಯುವ ಸ್ಟ್ರೆಚರ್ ಅನ್ನೇ ತಮ್ಮ ಮೈಕ್‌ಗಳನ್ನು ಇಡುವುದಕ್ಕಾಗಿ ಬಳಸಿಕೊಂಡಿದ್ದರು!

ಯಡಿಯೂರಪ್ಪ ಪುತ್ರ, ಸಂಸದ ಬಿ.ವೈ.ರಾಘವೇಂದ್ರ ಅವರು ವಾರ್ಡ್‌ನಲ್ಲೇ ಬಹುಹೊತ್ತಿನ ತನಕ ಇದ್ದು, ತಂದೆಯ ಯೋಗಕ್ಷೇಮ ವಿಚಾರಿಸಿದರು. ಒಟ್ಟು 20 ವಾರ್ಡ್‌ಗಳಿರುವ ಮೂರನೇ ಮಹಡಿಯ ತೀವ್ರ ನಿಗಾ ಘಟಕದ 304ನೇ ವಾರ್ಡ್‌ನಲ್ಲಿ 275041ನೇ ಸಂಖ್ಯೆಯ ಒಳರೋಗಿಯಾಗಿ ಯಡಿಯೂರಪ್ಪ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇತರ ರೋಗಿಗಳು ಹಾಗೂ ಸಂಬಂಧಿಕರಿಗೆ ಅಂಥ ತೊಂದರೆಯೇನು ಆಗಲಿಲ್ಲ. ಆದರೆ ರಾಜಕೀಯ ಮತ್ತು ಧಾರ್ಮಿಕ ಮುಖಂಡರು ನಿರಂತರವಾಗಿ ಬರುತ್ತಿದ್ದುದರಿಂದ ಆಸ್ಪತ್ರೆಯ ಆವರಣದಲ್ಲಿ ನಿಂತಿದ್ದ ರೋಗಿಗಳ ಸಂಬಂಧಿಕರನ್ನು ಪೊಲೀಸರು ಪಕ್ಕಕ್ಕೆ ಸರಿಸಿ ದಾರಿ ಮಾಡಿಕೊಡುತ್ತಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.