ADVERTISEMENT

ಗಣ್ಯರಿಗೆ ಕೆಂಪೇಗೌಡ ಪ್ರಶಸ್ತಿ ಪ್ರದಾನ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2011, 19:45 IST
Last Updated 18 ಏಪ್ರಿಲ್ 2011, 19:45 IST
ಗಣ್ಯರಿಗೆ ಕೆಂಪೇಗೌಡ ಪ್ರಶಸ್ತಿ ಪ್ರದಾನ
ಗಣ್ಯರಿಗೆ ಕೆಂಪೇಗೌಡ ಪ್ರಶಸ್ತಿ ಪ್ರದಾನ   

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಕೆಂಪೇಗೌಡರ 500ನೇ ವರ್ಷದ ದಿನಾಚರಣೆ ಪ್ರಯುಕ್ತ ಪಾಲಿಕೆ ಕೇಂದ್ರ ಕಚೇರಿ ಆವರಣದಲ್ಲಿ ಸೋಮವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು 276 ಗಣ್ಯರಿಗೆ ಕೆಂಪೇಗೌಡ ಪ್ರಶಸ್ತಿ ಪ್ರದಾನ ಮಾಡಿದರು.

ಬಳಿಕ ಮಾತನಾಡಿದ ಅವರು, ‘ರಾಜಧಾನಿಯ ಜನಸಂಖ್ಯೆ ಸುಮಾರು ಕೋಟಿ ಇದ್ದು, ಇಷ್ಟು ದೊಡ್ಡ ಸಂಖ್ಯೆಯ ಜನರಿಗೆ ಅಗತ್ಯ ಮೂಲ ಸೌಕರ್ಯ ಕಲ್ಪಿಸುವ ಸವಾಲಿನ ಕೆಲಸವನ್ನು ಸಮರ್ಪಕವಾಗಿ ನಿರ್ವಹಿಸಲು ಪ್ರಯತ್ನಿಸಲಾಗುವುದು’ ಎಂದರು.

‘ಉದ್ಯಾನನಗರಿ, ನಿವೃತ್ತರ ಸ್ವರ್ಗ ಎಂಬ ಹೆಗ್ಗಳಿಕೆಗೆ ಪಾತ್ರವಾದ ನಗರದ ಗತವೈಭವ ಕ್ಷೀಣಿಸುತ್ತಿದೆ ಎಂಬ ಆರೋಪ ಕೇಳಿ ಬರುತ್ತಿದ್ದು, ನಗರದ ಹಿರಿಮೆ ಹಾಳಾಗದಂತೆ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗುವುದು. ಜನರ ನಿರೀಕ್ಷೆಗೆ ಸ್ಪಂದಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು’ ಎಂದರು.

ಕೆಲವೇ ದಿನಗಳಲ್ಲಿ ‘ಮೆಟ್ರೊ’: ‘ಈ ವೇಳೆಗಾಗಲೇ ಮೆಟ್ರೊ ರೈಲು ಸಂಚಾರ ಆರಂಭವಾಗಬೇಕಿತ್ತು. ಆದರೆ ತಾಂತ್ರಿಕ ಕಾರಣದಿಂದ ಇದು ಸಾಧ್ಯವಾಗಲಿಲ್ಲ. ಇನ್ನು ಕೆಲವೇ ದಿನಗಳಲ್ಲಿ ಮೆಟ್ರೊ ಸಂಚಾರ ಆರಂಭವಾಗಲಿದೆ. ಬೆಂಗಳೂರಿಗೆ 500 ದಶಲಕ್ಷ ಲೀಟರ್ ನೀರು ತರುವ ಯೋಜನೆ ಕೂಡ ತ್ವರಿತಗತಿಯಲ್ಲಿ ನಡೆಯುತ್ತಿದೆ. ಕೆಂಪೇಗೌಡರು ನಿರ್ಮಿಸಿದ ಬೆಂಗಳೂರಿನಲ್ಲಿ ಜಾಗತಿಕ ಮಟ್ಟದ ಸೌಲಭ್ಯ ಕಲ್ಪಿಸಲು ಶ್ರಮಿಸಲಾಗುವುದು’ ಎಂದರು.

ಸಂಸದ ಅನಂತಕುಮಾರ್ ಮಾತನಾಡಿ, ‘ಬೆಂಗಳೂರು ಅಂತರರಾಷ್ಟ್ರೀಯ ವಿಮಾನನಿಲ್ದಾಣಕ್ಕೆ (ಬಿಐಎಎಲ್) ಕೆಂಪೇಗೌಡರ ಹೆಸರನ್ನಿಡುವಂತೆ ಕೇಂದ್ರದ ಮೇಲೆ ಒತ್ತಡ ಹೇರಲು ಬೆಂಗಳೂರಿನ ಸಂಸದರು, ಬೆಂಗಳೂರಿನ ಶಾಸಕರು ಹಾಗೂ ಪಾಲಿಕೆ ಸದಸ್ಯರ ಸರ್ವ ಪಕ್ಷ ನಿಯೋಗವನ್ನು ಮುಖ್ಯಮಂತ್ರಿ ದೆಹಲಿಗೆ ಕೊಂಡೊಯ್ಯಬೇಕು. ಚಳಿಗಾಲದ ಅಧಿವೇಶನ ಆರಂಭಕ್ಕೂ ಮುನ್ನವೇ ಬಿಐಎಎಲ್‌ಗೆ ಕೆಂಪೇಗೌಡರ ಹೆಸರನ್ನಿಡುವಂತೆ ಕೇಂದ್ರವನ್ನು ಒತ್ತಾಯಿಸಬೇಕು’ ಎಂದರು.

‘ಬೆಂಗಳೂರಿಗೆ ನಿರಂತರ ವಿದ್ಯುತ್ ಪೂರೈಕೆಗಾಗಿ 5,000 ಮೆಗಾವಾಟ್ ಸಾಮರ್ಥ್ಯದ ವಿದ್ಯುತ್ ಸ್ಥಾವರ ನಿರ್ಮಿಸುವತ್ತ ಚಿಂತಿಸಬೇಕು. ಕನಕಪುರ ಬಳಿಯ ಮೇಕೆದಾಟು ಪ್ರದೇಶದ ಬಳಿಕ ಕಿರು ಜಲಾಶಯ ನಿರ್ಮಿಸಿ ಆ ನೀರನ್ನು ನಗರಕ್ಕೆ ಪೂರೈಸುವ ಸಾಧ್ಯತೆಯನ್ನು ಗಂಭೀರವಾಗಿ ಪರಿಗಣಿಸಬೇಕು’ ಎಂದು ಸಲಹೆ ನೀಡಿದರು.

ಸಚಿವೆ ಶೋಭಾ ಕರಂದ್ಲಾಜೆ, ಸಂಸದ ಡಿ.ಬಿ. ಚಂದ್ರೇಗೌಡ, ವಿಧಾನ ಪರಿಷತ್ ಉಪಸಭಾಪತಿ ವಿಮಲಾಗೌಡ, ಶಾಸಕರಾದ ಬಿ.ಎನ್. ವಿಜಯಕುಮಾರ್, ಎಲ್.ಎ. ರವಿಸುಬ್ರಹ್ಮಣ್ಯ, ಡಾ.ಸಿ.ಎನ್. ಅಶ್ವತ್ಥನಾರಾಯಣ, ಅಶ್ವತ್ಥನಾರಾಯಣ, ಮೇಯರ್ ಎಸ್.ಕೆ. ನಟರಾಜ್, ಉಪಮೇಯರ್ ಎನ್. ದಯಾನಂದ್, ಆಡಳಿತ ಪಕ್ಷದ ನಾಯಕ ಬಿ.ಎಸ್. ಸತ್ಯನಾರಾಯಣ, ವಿರೋಧ ಪಕ್ಷದ ನಾಯಕ ಎಂ.ನಾಗರಾಜ್, ಜೆಡಿಎಸ್ ನಾಯಕ ಪದ್ಮನಾಭರೆಡ್ಡಿ, ಪಾಲಿಕೆ ಆಯುಕ್ತ ಸಿದ್ದಯ್ಯ, ವಿವಿಧ ಸ್ಥಾಯಿ ಸಮಿತಿಗಳ ಅಧ್ಯಕ್ಷರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.