ADVERTISEMENT

ಗಮನಸೆಳೆದ ಕಲಾಕೃತಿಗಳ ಅನಾವರಣ

ವೆಂಕಟಪ್ಪ ಆರ್ಟ್ ಗ್ಯಾಲರಿ ವತಿಯಿಂದ ಆಯೋಜನೆ

​ಪ್ರಜಾವಾಣಿ ವಾರ್ತೆ
Published 9 ಮೇ 2016, 19:45 IST
Last Updated 9 ಮೇ 2016, 19:45 IST

ಬೆಂಗಳೂರು: ವೆಂಕಟಪ್ಪ ಆರ್ಟ್ ಗ್ಯಾಲರಿಯಲ್ಲಿ ಕಲಾಕೃತಿಗಳ ಪ್ರದರ್ಶನವನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ವಿಎಜಿ  (ವೆಂಕಟಪ್ಪ ಆರ್ಟ್ ಗ್ಯಾಲರಿ) ಫೋರಂ ವತಿಯಿಂದ ಸೋಮವಾರ ‘ಕಲಾ ಮ್ಯಾರಥಾನ್’  ಆಯೋಜಿಸಲಾಗಿತ್ತು.

40 ಕಲಾವಿದರು ಗ್ಯಾಲರಿಯ ಆವರಣದಲ್ಲಿ ತಮ್ಮ ಕಲಾಕೃತಿಗಳನ್ನು ಪ್ರದರ್ಶಿಸಿದರು. ಪರಿಸರ ಸಂರಕ್ಷಣೆ, ನೀರಿನ ಸದ್ಬಳಕೆ, ಪ್ರಾಣಿ–ಮನುಷ್ಯನ ಸಂಘರ್ಷ, ಕೊಡಗಿನ ಮಹಿಳೆ ಮೊದಲಾದ ವಿಷಯಗಳನ್ನು ಇಟ್ಟುಕೊಂಡು ರಚಿಸಿದ ಕಲಾಕೃತಿಗಳು ಗಮನ ಸೆಳೆದವು.

‘ಓಟದಲ್ಲಿ ಮ್ಯಾರಥಾನ್‌ ಆಯೋಜನೆ ಮಾಡುವುದು ಸಹಜ. ಆದರೆ, ಇದೇ ಮೊದಲ ಬಾರಿಗೆ ಕಲಾ ಪ್ರಕಾರದಲ್ಲಿ ಮ್ಯಾರಥಾನ್ ಆಯೋಜಿಸಿದ್ದೇವೆ. ಯುವ ಕಲಾವಿದರಿಗೆ ಪ್ರೋತ್ಸಾಹ ನೀಡುವುದು ಇದರ ಉದ್ದೇಶವಾಗಿದೆ’ ಎಂದು ವಿಎಜಿ ಫೋರಂ ಸದಸ್ಯೆ ಸುರೇಖಾ ಹೇಳಿದರು.

ಕಲಾವಿದ ಸುರೇಶ್‌ ಕುಮಾರ್, ‘ಖಾಸಗಿ ಕಲಾ ಗ್ಯಾಲರಿಗಳಲ್ಲಿ ಕಲಾಕೃತಿಗಳ ಪ್ರದರ್ಶನಕ್ಕೆ ದುಬಾರಿ ಶುಲ್ಕ ನೀಡಬೇಕು. ವೆಂಕಟಪ್ಪ ಆರ್ಟ್ ಗ್ಯಾಲರಿಯಲ್ಲಿ ಪ್ರದರ್ಶನ ಮಾಡಲು ದಿನಕ್ಕೆ ಕೇವಲ ₹ 500 ಶುಲ್ಕ ಪಡೆಯಲಾಗುತ್ತದೆ. ಹೀಗಾಗಿ ಯುವ ಕಲಾವಿದರು ಹೆಚ್ಚು ಹೆಚ್ಚು ಪ್ರದರ್ಶನಗಳನ್ನು ಆಯೋಜಿಸಬೇಕು’ ಎಂದು  ಹೇಳಿದರು.

ಕಲಾವಿದೆ ಸಾರಾ ಜೋಸೆಫ್, ನಮ್ಮ ಕಾಫಿ ತೋಟದಲ್ಲಿ  85 ವರ್ಷದ ವೃದ್ಧೆಯೊಬ್ಬರು ಕೆಲಸ ಮಾಡುತ್ತಾರೆ. ಆ ಇಳಿವಯಸ್ಸಿನಲ್ಲೂ ಕೆಲಸ ಮಾಡಬೇಕು ಎನ್ನುವ  ಅವರ  ತುಡಿತ, ಹಂಬಲ, ಚೈತನ್ಯವನ್ನು ನೋಡಿ   ಇಷ್ಟವಾಯಿತು. ಆದ್ದರಿಂದ ಅವರ ನೈಜ ಚಿತ್ರವನ್ನು ರಚಿಸಿದೆ’ ಎಂದರು. ಕಲಾವಿದ ಬಿ.ಎಚ್.ಲೋಕೇಶ್ ಅವರು ಜನಪದ ಕಲೆ, ಸಂಪ್ರದಾಯ, ಆಚಾರ ವಿಚಾರಕ್ಕೆ ಸಂಬಂಧಿಸಿದ ಕಲಾಕೃತಿಗಳನ್ನು ಪ್ರದರ್ಶಿಸಿದ್ದರು.

ಕಲಾವಿದೆ ಸ್ಮಿತಾ ಕರಿಯಪ್ಪ ಅವರು ನೀಲಿ ಡೇನಿಮ್ ಜೀನ್ಸ್‌ನಲ್ಲಿ ಅಕ್ಷರಗಳನ್ನು ಹೋಲಿಗೆ  ಹಾಕಿದ್ದ  ಕಲಾಕೃತಿಗಳನ್ನು ಪ್ರದರ್ಶನ ಮಾಡಿದರು. ಕಲಾ ಮ್ಯಾರಥಾನ್ ಸೋಮವಾರದಿಂದ ಬುಧವಾರದವರೆಗೆ (ಮೇ 11) ಬೆಳಿಗ್ಗೆ 11 ರಿಂದ ಸಂಜೆ 7 ಗಂಟೆಯವರೆಗೆ ನಡೆಯಲಿದೆ. ಮೂರು ದಿನಗಳಲ್ಲಿ ನೂರಕ್ಕೂ ಹೆಚ್ಚು ಕಲಾವಿದರು  ವಿವಿಧ ಕಲಾಕೃತಿಗಳನ್ನು ಪ್ರದರ್ಶನ ಮಾಡಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.