ADVERTISEMENT

ಗಾರ್ಮೆಂಟ್ಸ್ ಕಾರ್ಮಿಕರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2011, 18:45 IST
Last Updated 8 ಮಾರ್ಚ್ 2011, 18:45 IST

ಬೆಂಗಳೂರು: ಗಾರ್ಮೆಂಟ್ಸ್‌ಗಳ ಮಾಲೀಕರಿಗೆ ಅನುಕೂಲ ಕಲ್ಪಿಸುವ ಸಲುವಾಗಿ ಸರ್ಕಾರ ಕಾರ್ಮಿಕ ಕಾನೂನುಗಳನ್ನು ಸಡಿಲಗೊಳಿಸಲು ಮುಂದಾಗಿದೆ ಎಂದು ಆರೋಪಿಸಿ ಗಾರ್ಮೆಂಟ್ಸ್ ಮತ್ತು ಟೆಕ್ಸ್‌ಟೈಲ್ ಕಾರ್ಮಿಕರ ಒಕ್ಕೂಟದ ಸದಸ್ಯರು ನಗರದ ಎಂ.ಜಿ.ರಸ್ತೆಯ ಮಹಾತ್ಮಗಾಂಧಿ ಪ್ರತಿಮೆ ಮುಂಭಾಗ ಮಂಗಳವಾರ ಪ್ರತಿಭಟನೆ ನಡೆಸಿದರು.

ಕಾರ್ಮಿಕರ ರಕ್ಷಣೆಗಾಗಿ ಇರುವ ಕಾನೂನುಗಳನ್ನು ಮಾಲೀಕರ ಹಿತಾಸಕ್ತಿಗೆ ಅನುಗುಣವಾಗಿ ಬದಲಾಯಿಸಲು ಮುಂದಾಗಿರುವುದು ಸರಿಯಲ್ಲ. ಕಾರ್ಮಿಕ ಕಾನೂನಿನ ಪ್ರಕಾರ ಒಂದು ಗಂಟೆ ಕಾಲ ಮಾಡಿಸಬಹುದಾಗಿದ್ದ ಹೆಚ್ಚುವರಿ ಕೆಲಸವನ್ನು ಇನ್ನು ಮುಂದೆ ಎರಡು ಗಂಟೆ ಮಾಡಿಸಬಹುದು ಎಂದು ಇತ್ತೀಚೆಗೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ. ಇಂತಹ ನಿರ್ಧಾರಗಳಿಂದ ಲಕ್ಷಾಂತರ ಮಹಿಳಾ ಕಾರ್ಮಿಕರಿಗೆ ತೊಂದರೆಯಾಗಲಿದೆ ಎಂದು ಪ್ರತಿಭಟನಾಕಾರರು ದೂರಿದರು.

ಗಾರ್ಮೆಂಟ್ಸ್ ಕಾರ್ಮಿಕರು ಗೌರವಯುತವಾಗಿ ಜೀವನ ಮಾಡುವಷ್ಟು ವೇತನವನ್ನೂ ಸಹ ನೀಡದೆ ಶೋಷಿಸಲಾಗುತ್ತಿದೆ. 2009ರಲ್ಲಿ ಸರ್ಕಾರವೇ ಕನಿಷ್ಠ ವೇತನವನ್ನು ಪರಿಷ್ಕರಿಸಿ ಆದೇಶ ಹೊರಡಿಸಿತ್ತು. ತದನಂತರ 2010ರಲ್ಲಿ ಈ ಆದೇಶವನ್ನು ಹಿಂಪಡೆದು, ವೇತನವನ್ನು ಕಡಿತಗೊಳಿಸಿ ಆದೇಶ ಹೊರಡಿಸಿದೆ. ಕಾರ್ಖಾನೆಗಳ ಮಾಲೀಕರ ಒತ್ತಡಕ್ಕೆ ಮಣಿದು ಈ ರೀತಿಯ ಆದೇಶಗಳನ್ನು ಹೊರಡಿಸಲಾಗುತ್ತಿದೆ ಎಂದು ಅವರು ಆರೋಪಿಸಿದರು.

ಉತ್ಪಾದನೆಯ ನೆಪದಲ್ಲಿ ದಿನನಿತ್ಯ ಕಾರ್ಮಿಕರ ಮೇಲೆ ದೌರ್ಜನ್ಯ, ಕಿರುಕುಳಗಳು ನಿರಂತರವಾಗಿ ನಡೆಯುತ್ತಿವೆ. ಮಹಿಳಾ ಕಾರ್ಮಿಕರಿಗೆ ಅಗತ್ಯ ರಕ್ಷಣೆಯನ್ನು ಕಲ್ಪಿಸಿಕೊಡಬೇಕು. ಕೆಲಸದ ಸ್ಥಳದಲ್ಲಿ ಗೌರವ, ಘನತೆ ಸಿಗುವಂತಾಗಬೇಕು. ಕಾರ್ಮಿಕ ಕಾನೂನುಗಳನ್ನು ಮಾಲೀಕರ ಹಿತಾಸಕ್ತಿಗಳಿಗೆ ಅನುಗುಣವಾಗಿ ಯಾವುದೇ ಕಾರಣಕ್ಕೂ ಸಡಿಲಗೊಳಿಸಬಾರದು ಎಂದು ಪ್ರತಿಭಟನಾನಿರತರು ಒತ್ತಾಯಿಸಿದರು.ಸಿಐಟಿಯು ಪ್ರಧಾನ ಕಾರ್ಯದರ್ಶಿ ವರಲಕ್ಷ್ಮಿ, ಒಕ್ಕೂಟದ ಉಪಾಧ್ಯಕ್ಷ ಕೆ.ಆರ್.ಜಯರಾಮ್, ಪದಾಧಿಕಾರಿಗಳಾದ ಯಮುನಾ, ಲಲಿತಾ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.