ADVERTISEMENT

ಗುಂಡಿಮುಕ್ತ ರಸ್ತೆ ನಮ್ಮ ಹಕ್ಕು

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2017, 19:30 IST
Last Updated 8 ಅಕ್ಟೋಬರ್ 2017, 19:30 IST
ವರ್ತೂರು ಬಳಿಯ ತೂಬರಳ್ಳಿ ನಿವಾಸಿಗಳು ಭಾನುವಾರ ಪ್ರತಿಭಟನೆ ನಡೆಸಿದರು
ವರ್ತೂರು ಬಳಿಯ ತೂಬರಳ್ಳಿ ನಿವಾಸಿಗಳು ಭಾನುವಾರ ಪ್ರತಿಭಟನೆ ನಡೆಸಿದರು   

ಬೆಂಗಳೂರು: ‘ಮಳೆಯಿಂದಾಗಿ ರಸ್ತೆಗಳು ಹದಗೆಟ್ಟಿವೆ. ಇಲ್ಲಿ ನಾಲ್ಕು ದಿನಗಳಲ್ಲಿ 10 ಮಂದಿ ಇಲ್ಲಿ ಬೈಕ್‌ನಿಂದ ಉರುಳಿಬಿದ್ದು, ಆಸ್ಪತ್ರೆ ಸೇರಿದ್ದಾರೆ. ಜೀವ ಕೈಯಲ್ಲಿ ಹಿಡಿದುಕೊಂಡು ಪ್ರಯಾಣಿಸುವ ಪರಿಸ್ಥಿತಿ ನಿರ್ಮಾಣವಾಗಿದೆ’

ವರ್ತೂರು ಬಳಿಯ ತೂಬರಹಳ್ಳಿಯ ಶ್ರೀರಾಮ ಸಮೃದ್ಧಿ ಅಪಾರ್ಟ್‌ಮೆಂಟ್‌ ಸಮುಚ್ಚಯ ಬಳಿಯ ನಿವಾಸಿಗಳು ಸ್ಥಳೀಯ ರಸ್ತೆಗಳ ದುಸ್ಥಿತಿಯನ್ನು ಬಿಚ್ಚಿಟ್ಟಿದ್ದು ಹೀಗೆ.

ಮಳೆಯಿಂದ ಹದಗೆಟ್ಟಿರುವ ರಸ್ತೆಗಳನ್ನು ದುರಸ್ತಿ ಮಾಡುವಂತೆ ಆಗ್ರಹಿಸಿ ಅವರು ಭಾನುವಾರ ಪ್ರತಿಭಟನೆ ನಡೆಸಿದರು. ‘ಗುಂಡಿಮುಕ್ತ ರಸ್ತೆ ನಮ್ಮ ಹಕ್ಕು’ ಎಂದು ಫಲಕಗಳನ್ನು ಪ್ರದರ್ಶಿಸಿದರು. ಬಿಬಿಎಂಪಿ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಧಿಕ್ಕಾರ ಕೂಗಿದರು.

ADVERTISEMENT

‘ತೂಬರಹಳ್ಳಿ ವ್ಯಾಪ್ತಿಯಲ್ಲಿ ಸಾವಿರಾರು ಜನ ವಾಸವಿದ್ದಾರೆ. ಇವರಲ್ಲಿ ಹಲವರು ನಿತ್ಯವೂ ಕೆಲಸಕ್ಕೆ ಹೊರಗಡೆ ಹೋಗುತ್ತಾರೆ. ಆದರೆ, ಈಗ ಹದಗೆಟ್ಟ ರಸ್ತೆಗಳಿಂದ ಅವರ ಓಡಾಡಕ್ಕೆ ತೊಂದರೆ ಉಂಟಾಗಿದೆ’ ಎಂದು ಪ್ರತಿಭಟನಾಕಾರರು ತಿಳಿಸಿದರು.

‘ಕೆಲದಿನಗಳಿಂದ ನಗರದಲ್ಲಿ ನಿರಂತರವಾಗಿ ಮಳೆಯಾಗುತ್ತಿದ್ದು, ಇದರಿಂದ ರಸ್ತೆಯಲ್ಲಿ ಗುಂಡಿಗಳು ಬಿದ್ದಿದೆ. ಇದರಿಂದ ನೀರು ರಸ್ತೆಯಲ್ಲೇ ನಿಂತುಕೊಂಡು ಕೆರೆಯಂತಾಗಿದೆ. ಈ ಕೆಸರಿನ ರಸ್ತೆಯಲ್ಲಿ ಓಡಾಡುವ ಸವಾರ ಜೀವಕ್ಕೆ ಅಪಾಯವಿದೆ.’

‘ರಸ್ತೆಯ ಅಕ್ಕ–ಪಕ್ಕದ ಕಾಲುವೆಗಳಲ್ಲಿ ಹೂಳು ತುಂಬಿದೆ. ಇದರಿಂದಾಗಿ ನೀರು ರಸ್ತೆ ಮೇಲೆ ಹರಿಯುತ್ತಿದೆ. ಮಳೆ ಆರಂಭವಾದ ದಿನದಿಂದಲೂ ಈ ಬಗ್ಗೆ ಬಿಬಿಎಂಪಿ ಅಧಿಕಾರಿಗಳಿಗೆ ಮಾಹಿತಿ ನೀಡುತ್ತಿದ್ದೇವೆ. ಆದರೂ, ಅವರು ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದು  ಆಕ್ರೋಶ ವ್ಯಕ್ತಪಡಿಸಿದರು.

‘ದಿನದಿಂದ ದಿನಕ್ಕೆ ರಸ್ತೆಯು ಅಪಾಯಕಾರಿಯಾಗಿ ಮಾರ್ಪಡುತ್ತಿದೆ. ಯಾವುದೇ ಅನಾಹುತ ಸಂಭವಿಸಿದರೆ ಅದಕ್ಕೆ ಬಿಬಿಎಂಪಿ ಅಧಿಕಾರಿಗಳೇ ಹೊಣೆ’ ಎಂದು ಎಚ್ಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.