ADVERTISEMENT

ಗುಂಪು ಘರ್ಷಣೆ: ವಾಹನ ಜಖಂ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2011, 19:05 IST
Last Updated 1 ಫೆಬ್ರುವರಿ 2011, 19:05 IST

ಬೊಮ್ಮನಹಳ್ಳಿ: ಹುಡುಗಿಯೊಬ್ಬಳನ್ನು ಕೆಣಕಿದ ಕಾರಣಕ್ಕಾಗಿ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದು 25ಕ್ಕೂ ಹೆಚ್ಚು ವಾಹನಗಳನ್ನು ಜಖಂಗೊಳಿಸಿ ಹಲವು ದ್ವಿಚಕ್ರ ವಾಹನಗಳಿಗೆ ಬೆಂಕಿಯಿಟ್ಟಿರುವ ಘಟನೆ ಹೊಸೂರು ರಸ್ತೆಯ ಅತ್ತಿಬೆಲೆಯಲ್ಲಿ ಮಂಗಳವಾರ ನಡೆದಿದೆ.

ಎರಡು ಗುಂಪುಗಳ ನಡುವೆ ನಡೆದ ಈ ಘರ್ಷಣೆಯಿಂದಾಗಿ ಅತ್ತಿಬೆಲೆ ಕಾಲೊನಿಯಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿತ್ತು. ಕಿಡಿಗೇಡಿಗಳು ಕೈಯಲ್ಲಿ ಮಚ್ಚು, ದೊಣ್ಣೆ, ಪಿಕಾಸಿ, ಕೊಡಲಿಗಳನ್ನು ಹಿಡಿದು ಹಲ್ಲೆ ನಡೆಸುತ್ತಿದ್ದ ದೃಶ್ಯ ಕಂಡುಬಂದಿತು.

ಘಟನೆಯಿಂದ ಭಯಗೊಂಡ ಜನ ದಿಕ್ಕಾಪಾಲಾಗಿ ಓಡಿದರು. ಪರಿಸ್ಥಿತಿಯನ್ನು ನಿಯಂತ್ರಿಸಲು ಬಂದ ಪೊಲೀಸರ ಮೇಲೂ ಹಲ್ಲೆ ನಡೆಯಿತು. ಕೊನೆಗೆ ಲಾಠಿ ಪ್ರಹಾರ ನಡೆಸಿ ಗಲಭೆಯನ್ನು ನಿಯಂತ್ರಿಸಲಾಯಿತು.

ಘಟನೆ ವಿವರ: ಅತ್ತಿಬೆಲೆ ಖಾಸಗಿ ಶಾಲೆಯ ಶಾಲಾ ಕಾರ್ಯಕ್ರಮವೊಂದರಲ್ಲಿ ಹುಡುಗಿಯೊಬ್ಬಳನ್ನು ಕೆಣಕಿದ್ದಾನೆಂದು ಅತ್ತಿಬೆಲೆ ಕಾಲೋನಿಯ ಪ್ರಸನ್ನ ಎಂಬುವನ ಮೇಲೆ ಗುಂಪೊಂದು ದಾಳಿ ನಡೆಸಿದೆ. ನಂತರ ಪ್ರಸನ್ನನ ಕಡೆಯವರು ವಿರೋಧಿ ಗುಂಪಿನ ಮೇಲೆ ಪ್ರತಿದಾಳಿ ನಡೆಸಿದರು.

ಅತ್ತಿಬೆಲೆ ಪೊಲೀಸರು ಮಂಗಳವಾರ ಬೆಳಿಗ್ಗೆ ಎರಡು ಗುಂಪುಗಳನ್ನು ಠಾಣೆಗೆ ಕರೆಯಿಸಿ ರಾಜಿ ಮಾಡಿಸಿದರು. ಆದರೂ ಅತ್ತಿಬೆಲೆ ಸರ್ಕಲ್ ಬಳಿ ಮಧ್ಯಾಹ್ನ ದ್ವಿಚಕ್ರ ವಾಹನದಲ್ಲಿ ಬಂದ ಗುಂಪೊಂದು ಹುಡುಗನೊಬ್ಬನ ಮೇಲೆ ಹಲ್ಲೆ ನಡೆಸಿದೆ ಎನ್ನಲಾಗಿದೆ.

ಇದರಿಂದ ಮತ್ತೆ ಪರಿಸ್ಥಿತಿ ಉದ್ವಿಗ್ನಗೊಂಡು ಎರಡು ಗುಂಪುಗಳು ಮಾರಕ ಅಸ್ತ್ರಗಳಿಂದ ಹಲ್ಲೆ ಮಾಡಿವೆ. ದ್ವಿಚಕ್ರ ವಾಹನಗಳಲ್ಲಿ ಬಂದವರೇ ಹಲ್ಲೆ ನಡೆಸಿದ್ದಾರೆಂದು ತಿಳಿದು ರಸ್ತೆ ಬದಿ ನಿಲ್ಲಿಸಿದ್ದ ಸಾರ್ವಜನಿಕರ ವಾಹನಗಳನ್ನು ಜಖಂಗೊಳಿಸಿ ಬೆಂಕಿಯಿಟ್ಟಿದ್ದಾರೆ.

ಪರಿಸ್ಥಿತಿ ನಿಯಂತ್ರಣ: ಅತ್ತಿಬೆಲೆಯಲ್ಲಿ ನಡೆದ ಗುಂಪು ಘರ್ಷಣೆ ನಿಯಂತ್ರಣದಲ್ಲಿದೆ. ಮುಂದೆ ಇಂಥ ಘಟನೆಗಳು ಮರುಕಳಿಸದಂತೆ ಸ್ಥಳೀಯ ಮುಖಂಡರು ಯುವಕರಿಗೆ ಮಾರ್ಗದರ್ಶನ ನೀಡಬೇಕು ಎಂದು ಸ್ಥಳಕ್ಕೆ ಭೇಟಿ ನೀಡಿದ್ದ ಜಿಲ್ಲಾ ಎಸ್ಪಿ ಡಾ.ಬಿ.ಎ ಮಹೇಶ್ ನುಡಿದರು.

ಈ ಘಟನೆಗೆ ಸಂಬಂಧಿಸಿದಂತೆ ವಿ.ಕಲ್ಲಹಳ್ಳಿಯ ಭುವನೇಶ್‌ರೆಡ್ಡಿ ಮತ್ತು ಮರಸೂರು ಬಾಬು ಎಂಬುವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.