ADVERTISEMENT

ಗುಣಮಟ್ಟದ ಶಿಕ್ಷಣ ಅಗತ್ಯವಿದೆ: ಸುರೇಶ್ ಕುಮಾರ್

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2012, 19:30 IST
Last Updated 2 ಅಕ್ಟೋಬರ್ 2012, 19:30 IST
ಗುಣಮಟ್ಟದ ಶಿಕ್ಷಣ ಅಗತ್ಯವಿದೆ: ಸುರೇಶ್ ಕುಮಾರ್
ಗುಣಮಟ್ಟದ ಶಿಕ್ಷಣ ಅಗತ್ಯವಿದೆ: ಸುರೇಶ್ ಕುಮಾರ್   

ಬೆಂಗಳೂರು: `ಉತ್ತಮ ಸಮಾಜದ ನಿರ್ಮಾಣಕ್ಕಾಗಿ ಗುಣಮಟ್ಟದ ಶಿಕ್ಷಣ ಅಗತ್ಯವಿದೆ~ ಎಂದು ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಹೇಳಿದರು.

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಮತ್ತು ಸಪ್ತರ್ಷಿ ಪ್ರತಿಷ್ಠಾನವು ನಗರದಲ್ಲಿ ಮಂಗಳವಾರ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

`ಜಾಗತಿಕ ತಿಳಿವಳಿಕೆಗಾಗಿ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು. ಶಿಕ್ಷಣದ ಮೂಲಕ ಮಾತ್ರ ಮಾನವನ ಸರ್ವಾಂಗೀಣ ಅಭಿವೃದ್ಧಿ ಸಾಧ್ಯ. ಹೀಗಾಗಿ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕಾದದ್ದು ಸಮಾಜದ ಜವಾಬ್ದಾರಿ~ ಎಂದು ಅವರು ತಿಳಿಸಿದರು.

`ಬ್ರಾಹ್ಮಣ್ಯ ಜಾತಿಯಲ್ಲ. ಉತ್ತಮ ಜ್ಞಾನವನ್ನು ಹೊಂದುವ ಮೂಲಕ ಯಾರು ಬೇಕಾದರೂ ಬ್ರಾಹ್ಮಣತ್ವವನ್ನು ಪಡೆಯಬಹುದು. ಜಗತ್ತಿನ ಎಲ್ಲ ಜ್ಞಾನವನ್ನೂ ವೇದಗಳು ಒಳಗೊಂಡಿವೆ. ವೇದಗಳ ಜ್ಞಾನ ಅಪಾರವಾದುದು~ ಎಂದು ಅವರು ನುಡಿದರು.

ಕಾನೂನು ಸಚಿವ ಎಸ್.ಸುರೇಶ್ ಕುಮಾರ್ ಮಾತನಾಡಿ, `ಮಕ್ಕಳು ಭವಿಷ್ಯದಲ್ಲಿ ತಾವು ವೈದ್ಯರಾಗಬೇಕು, ಎಂಜಿನಿಯರ್‌ಗಳಾಗಬೇಕು ಎಂದು ಬಯಸುತ್ತಾರೆ. ಆದರೆ, ಮಕ್ಕಳು ಉತ್ತಮ ಮಾನವರಾಗಬೇಕಾದ್ದು ಮುಖ್ಯ. ಸಾಧನೆಯ ಮೂಲಕ ಆದರ್ಶ ಜೀವನವನ್ನು ಮಕ್ಕಳು ರೂಪಿಸಿಕೊಳ್ಳಬೇಕು. ಮಾದರಿ ವ್ಯಕ್ತಿಗಳ ಜೀವನವು ಮಕ್ಕಳಿಗೆ ಸ್ಫೂರ್ತಿಯಾಗಬೇಕು~ ಎಂದು ಆಶಿಸಿದರು.

`ದಕ್ಷಿಣ ಆಫ್ರಿಕಾದ ಹೋರಾಟದಲ್ಲಿ ನೆಲ್ಸನ್ ಮಂಡೇಲಾ ಅವರು 27 ವರ್ಷಗಳ ಕಾಲ ಜೈಲಿನಲ್ಲಿದ್ದರು. ತಮ್ಮ ಕಷ್ಟ ಸಹಿಷ್ಣುತೆಗೆ ಮಹಾತ್ಮ ಗಾಂಧಿ ಮಾದರಿ ಎಂದು ಅವರು ಹೇಳಿದ್ದರು. ಅವರ ಹೋರಾಟ ಮಕ್ಕಳಿಗೆ ಮಾದರಿಯಾಗಬೇಕು. ಆದರೆ, ಇಂದಿನ ನಮ್ಮ ಸಮಾಜದಲ್ಲಿ 27 ನಿಮಿಷಗಳ ಕಾಲ ಜೈಲಿನಲ್ಲಿದ್ದು ಹೊರಬಂದು ಸನ್ಮಾನ ಮಾಡಿಸಿಕೊಳ್ಳುವವರು ಹೆಚ್ಚಾಗಿದ್ದಾರೆ~ ಎಂದು ಅವರು ವಿಷಾದಿಸಿದರು.

ಸಮಾರಂಭದಲ್ಲಿ ಹಿರಿಯ ನಿಘಂಟು ತಜ್ಞ ಪ್ರೊ.ಜಿ.ವೆಂಕಟಸುಬ್ಬಯ್ಯ ಅವರನ್ನು ಸನ್ಮಾನಿಸಲಾಯಿತು. ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಿಸಲಾಯಿತು.

ಶಾಸಕರಾದ ಎಲ್.ಎ.ರವಿ ಸುಬ್ರಹ್ಮಣ್ಯ, ಬಿ.ಎನ್.ವಿಜಯ್‌ಕುಮಾರ್, ಸಿ.ಎನ್.ಅಶ್ವತ್ಥ ನಾರಾಯಣ, ಮಹಾಸಭಾದ ಅಧ್ಯಕ್ಷ ಬಿ.ಎನ್.ವಿ. ಸುಬ್ರಹ್ಮಣ್ಯ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.