ADVERTISEMENT

ಗುತ್ತಿಗೆದಾರರಿಗೆ ಹೊಸ ನಿಯಮ: ಕಾಯ್ದೆಗೆ ತಿದ್ದುಪಡಿ- ಶೋಭಾ

​ಪ್ರಜಾವಾಣಿ ವಾರ್ತೆ
Published 22 ಜನವರಿ 2012, 19:30 IST
Last Updated 22 ಜನವರಿ 2012, 19:30 IST

ಬೆಂಗಳೂರು: `ಬಹುಮಹಡಿ ಕಟ್ಟಡಗಳಿಗೆ ಗುಣಮಟ್ಟದ ವಿದ್ಯುತ್ ಸಂಪರ್ಕ ವ್ಯವಸ್ಥೆ ಮಾಡುವ ಉದ್ದೇಶದಿಂದ ಸಂಬಂಧಪಟ್ಟ ಕಾಯ್ದೆಗೆ ತಿದ್ದುಪಡಿ ತಂದು ಗುತ್ತಿಗೆದಾರರಿಗೆ ಹೊಸ ನಿಯಮಗಳನ್ನು ವಿಧಿಸಲಾಗುವುದು~ ಎಂದು ಇಂಧನ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.

ವಿದ್ಯುತ್ ಪರಿವೀಕ್ಷಣಾಲಯದ ಎಂಜಿನಿಯರ್‌ಗಳ ಸಂಘವು ನಗರದ ಖನಿಜ ಭವನದಲ್ಲಿರುವ ಗಣಿ ಮತ್ತು ಭೂಗರ್ಭ ಇಲಾಖೆ ಆವರಣದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ 2012ನೇ ಸಾಲಿನ ತಾಂತ್ರಿಕ ಡೈರಿಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.

`ರಾಜ್ಯದಲ್ಲಿ ದೊಡ್ಡ ಸಂಖ್ಯೆಯಲ್ಲಿ ಕೈಗಾರಿಕೆಗಳು ಸ್ಥಾಪನೆಯಾಗುತ್ತಿವೆ. ಬಹುಮಹಡಿ ಕಟ್ಟಡಗಳು ಸಹ ದೊಡ್ಡ ಪ್ರಮಾಣದಲ್ಲಿ ನಿರ್ಮಾಣವಾಗುತ್ತಿವೆ. ನಿಯಮಗಳ ಪ್ರಕಾರ ಕಟ್ಟಡ ಸುರಕ್ಷತಾ ಕ್ರಮಗಳನ್ನು ಗುತ್ತಿಗೆದಾರರು ಅನುಸರಿಸಬೇಕಿದೆ. ಒಂದೊಮ್ಮೆ ಅವುಗಳನ್ನು ಸಮರ್ಪಕವಾಗಿ ಪಾಲಿಸದಿದ್ದರೆ ಗುತ್ತಿಗೆದಾರರ ವಿರುದ್ಧ ಕಠಿಣ ಕ್ರಮ ಜರುಗಿಸಲು ಅವಕಾಶವಿಲ್ಲ. ವಿದ್ಯುತ್ ದುರ್ಘಟನೆ ಸಂಭವಿಸಿದರೆ ಆ ಸಂದರ್ಭದಲ್ಲಿ ಗುತ್ತಿಗೆದಾರರನ್ನು ಪತ್ತೆ ಹಚ್ಚುವುದು ಸಹ ಕಷ್ಟ ಸಾಧ್ಯ~ ಎಂದು ಹೇಳಿದರು.

`ಗುತ್ತಿಗೆದಾರರ ಲಾಬಿ ತೀವ್ರವಾಗಿರುವುದರಿಂದ ನಿಯಮಗಳು ಸರಿಯಾಗಿ ಪಾಲನೆಯಾಗುತ್ತಿಲ್ಲ. ಆ ಹಿನ್ನೆಲೆಯಲ್ಲಿ 1976ರ ಕರ್ನಾಟಕ ಎಲೆಕ್ಟ್ರಿಕಲ್ ಕಂಟ್ರಾಕ್ಟರ್ಸ್‌ (ಸೂಪರ್‌ವೈಸರ್‌ಗಳು ಹಾಗೂ ವೈರ್‌ಮನ್‌ಗಳ ಪರವಾನಗಿ) ನಿಯಮಕ್ಕೆ ತಿದ್ದುಪಡಿ ತರಲು ನಿರ್ಧರಿಸಲಾಗಿದೆ. ಕಟ್ಟಡ ಸುರಕ್ಷತಾ ಕ್ರಮಗಳಿಗೆ ಸಂಬಂಧಪಟ್ಟಂತೆ ಗುತ್ತಿಗೆದಾರರಿಗೆ ಕೆಲ ನಿಯಮಗಳನ್ನು ವಿಧಿಸಲಾಗುವುದು. ಈ ಸಂಬಂಧ ವಿದ್ಯುತ್ ಪರಿವೀಕ್ಷಕರು ಸಲಹೆ ನೀಡಿದಲ್ಲಿ ನಿಯಮಗಳನ್ನು ಅಳವಡಿಸಿಕೊಳ್ಳಲು ಪ್ರಯತ್ನಿಸಲಾಗುವುದು~ ಎಂದರು.

`ವಿದ್ಯುತ್ ಪರಿವೀಕ್ಷಣಾಲಯದಲ್ಲಿ ಒಟ್ಟು 382 ಮಂಜೂರಾದ ಹುದ್ದೆಗಳಿದ್ದು, 220 ಹುದ್ದೆಗಳಷ್ಟೇ ಭರ್ತಿಯಾಗಿವೆ. ಸಿಬ್ಬಂದಿ ಕೊರತೆಯಿಂದ ಹಾಲಿ ಇರುವ ಅಧಿಕಾರಿಗಳು ಹಾಗೂ ಸಿಬ್ಬಂದಿ ಮೇಲೆ ಕಾರ್ಯ ಒತ್ತಡ ಹೆಚ್ಚಾಗಿರುವುದು ಗಮನಕ್ಕೆ ಬಂದಿದೆ. ಶೀಘ್ರದಲ್ಲೇ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಕ್ರಮ ಕೈಗೊಳ್ಳಲಾಗುವುದು~ ಎಂದು ಭರವಸೆ ನೀಡಿದರು.

ಮುಖ್ಯ ವಿದ್ಯುತ್ ಪರಿವೀಕ್ಷಕ ಡಿ.ಎಚ್. ಬಸವರಾಜು, `ಇಲಾಖೆಯಲ್ಲಿ ಪಾರದರ್ಶಕತೆ ತರುವ ನಿಟ್ಟಿನಲ್ಲಿ ಸಾಕಷ್ಟು ಕ್ರಮ ಕೈಗೊಳ್ಳಲಾಗಿದೆ. ಜತೆಗೆ ಸಿಬ್ಬಂದಿಗೆ ಆಂತರಿಕ ತರಬೇತಿ ಕೂಡ ನೀಡಲಾಗುತ್ತಿದೆ~ ಎಂದರು.
ಇಂಧನ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಶಮೀಮ್ ಬಾನು, ತಾಂತ್ರಿಕ ಡೈರಿ ಸಮಿತಿ ಅಧ್ಯಕ್ಷ ಕೆ.ಬಿ. ಶಶಿರಾಜ್, ಸಂಘದ ಅಧ್ಯಕ್ಷ ಎಂ.ವಿ. ಶಶಿಧರ್ ಇತರರು ಉಪಸ್ಥಿತರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.