ADVERTISEMENT

ಗುಪ್ತಚರ ವ್ಯವಸ್ಥೆ ಬಲಪಡಿಸಲು ಕ್ರಮ: ಶಿಂಧೆ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2013, 19:30 IST
Last Updated 14 ಡಿಸೆಂಬರ್ 2013, 19:30 IST

ಯಲಹಂಕ: ದೇಶದ ಆಂತರಿಕ ಭದ್ರತೆ ಮತ್ತು ಸುರಕ್ಷತೆಯನ್ನು ಕಾಪಾಡಿಕೊಳ್ಳಲು ಕೇಂದ್ರ ಸರ್ಕಾರ ವಿಶೇಷ ಆದ್ಯತೆ ನೀಡಿದ್ದು, ಗುಪ್ತಚರ ಮತ್ತು ಕಾನೂನು ರಕ್ಷಣಾ ಸಂಸ್ಥೆಗಳನ್ನು ಬಲಪಡಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಕೇಂದ್ರ ಗೃಹ ಸಚಿವ ಸುಶೀಲ್‌ಕುಮಾರ್‌ ಶಿಂಧೆ ಹೇಳಿದರು.

ಕಟ್ಟಿಗೇನಹಳ್ಳಿ ಸಮೀಪದ ಭಾರತೀಯ ಗಡಿ ಭದ್ರತಾ ಪಡೆ ಘಟಕದ ಆವರಣದಲ್ಲಿ ಕೇಂದ್ರ ಗೃಹ ಸಚಿವಾಲಯದ ವತಿಯಿಂದ ನಿರ್ಮಿಸಲು ಉದ್ದೇಶಿಸಿರುವ ರಾಷ್ಟ್ರೀಯ ವಿಪತ್ತು ನಿರ್ವಹಣಾ ಕೇಂದ್ರಕ್ಕೆ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು.

ಭಯೋತ್ಪಾದಕರ ಚಲನ–ವಲನಗಳಿಗೆ ಸಂಬಂಧಪಟ್ಟ ಮಾಹಿತಿಯನ್ನು ಜಾಗೃತ ಸಮಿತಿ ಮತ್ತು ಇತರೆ ಸಂಸ್ಥೆಗಳೊಂದಿಗೆ ವಿಚಾರ ವಿನಿ ಮಯ ಮಾಡಿಕೊಳ್ಳುವ ಉದ್ದೇಶದಿಂದ ಈ ಕೇಂದ್ರವನ್ನು ಸ್ಥಾಪಿಸಲಾಗುತ್ತಿದೆ ಎಂದರು.

ಸರ್ಕಾರದ ಎಲ್ಲ ಇಲಾಖೆಗಳ ಸಂಪರ್ಕ ಜಾಲವನ್ನು ಹೊಂದಿದ ರಾಷ್ಟ್ರೀಯ ಗುಪ್ತಚರ ಕೇಂದ್ರ (ನ್ಯಾಟ್‌ಗ್ರಿಡ್‌) ವ್ಯವಸ್ಥೆಯನ್ನು  ರಚಿಸಲು ಕೇಂದ್ರ ಸಚಿವ ಸಂಪುಟ ಅಂಗೀಕಾರ ನೀಡಿದ್ದು, ₨ 1000 ಕೋಟಿ ವೆಚ್ಚದಲ್ಲಿ ಈ ಕೇಂದ್ರೀಕೃತ ವ್ಯವಸ್ಥೆಯನ್ನು ಜಾರಿಗೊಳಿಸಲು ಉದ್ದೇಶಿ ಸಲಾಗಿದೆ’ ಎಂದರು. ‘ಬೆಂಗಳೂರಿನಲ್ಲಿ ಸುಮಾರು ₨ 100 ಕೋಟಿ ವೆಚ್ಚದಲ್ಲಿ ಈ ಕಟ್ಟಡವನ್ನು ನಿರ್ಮಿಸಲು ಉದ್ದೇಶಿಸಲಾಗಿದೆ’ ಎಂದು ಹೇಳಿದರು.

‘ಭಯೋತ್ಪಾದಕರ ಚಲನ–ವಲನಗಳ  ಬಗ್ಗೆ ಮಾಹಿತಿ ವಿನಿಮಯ ಮಾಡಿಕೊಳ್ಳುವಲ್ಲಿ ಆದ ವೈಫಲ್ಯದಿಂದಾಗಿ ಮುಂಬೈನಲ್ಲಿ ಭಯೋ ತ್ಪಾದಕರ ದಾಳಿ ನಡೆಯಿತು. ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಕೇಂದ್ರ ಸರ್ಕಾರ ಎಲ್ಲ ರೀತಿಯ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ’ ಎಂದು ತಿಳಿಸಿದರು.

‘22 ಮೂಲಗಳಿಂದ ಮಾಹಿತಿ ಕಲೆಹಾಕುವ ಸಾಮರ್ಥ್ಯವನ್ನು ಈ ವ್ಯವಸ್ಥೆಯು ಹೊಂದಿದೆ. ಬೆಂಗಳೂರು ಮಾಹಿತಿ ತಂತ್ರಜ್ಞಾನದ ಪ್ರಮುಖ ಕೇಂದ್ರವಾಗಿದ್ದು, ಈ ನ್ಯಾಟ್‌ಗ್ರಿಡ್‌ ವ್ಯವಸ್ಥೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವ ದಿಸೆ ಯಲ್ಲಿ ಇಲ್ಲಿನ ತಂತ್ರಜ್ಞರು ತಮ್ಮ ಸಲಹೆ ನೀಡಬಹುದಾಗಿದೆ’ ಎಂದು ಹೇಳಿದರು.

ಗೃಹ ಸಚಿವ ಕೆ.ಜೆ.ಜಾರ್ಜ್, ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್‌, ಸಂಸದ ಡಿ.ಬಿ. ಚಂದ್ರೇಗೌಡ, ಕೇಂದ್ರ ಗೃಹ ಸಚಿವಾ ಲಯದ ಕಾರ್ಯದರ್ಶಿ ಅನಿಲ್‌ ಗೋಸ್ವಾಮಿ, ಜಂಟಿ ಕಾರ್ಯದರ್ಶಿ ರಾಕೇಶ್‌ ಸಿಂಗ್‌, ನ್ಯಾಟ್‌ಗ್ರಿಡ್‌ ಸಂಸ್ಥೆಯ ಮುಖ್ಯ ಕಾರ್ಯನಿರ್ವ ಹಣಾಧಿಕಾರಿ ರಘುರಾಮನ್‌, ಹಿರಿಯ ಅಧಿಕಾರಿ ಎ.ಕೆ. ಮಿತ್ತಲ್‌ ಮೊದಲಾದವರು ಉಪಸ್ಥಿ ತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.