ADVERTISEMENT

ಗೃಹರಕ್ಷಕ ದಳದಿಂದ ಪೊಲೀಸರ ಹೊರೆ ಕಡಿಮೆ

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2012, 18:30 IST
Last Updated 11 ನವೆಂಬರ್ 2012, 18:30 IST

ಬೆಂಗಳೂರು: `ಗೃಹರಕ್ಷಕ ದಳವು ಪೊಲೀಸ್ ಇಲಾಖೆಯ ಪೂರಕ ಪಡೆಯಾಗಿ ಕಾರ್ಯ ನಿರ್ವಹಿಸುತ್ತಿದೆ~ ಎಂದು ವಿಧಾನಪರಿಷತ್ ಸಭಾಪತಿ ಡಿ.ಎಚ್. ಶಂಕರಮೂರ್ತಿ  ಅವರು ಅಭಿಪ್ರಾಯಪಟ್ಟರು.

ನಗರದ ಮೈಸೂರು ರಸ್ತೆಯಲ್ಲಿರುವ ನಗರ ಸಶಸ್ತ್ರ ಮೀಸಲು ಪೊಲೀಸ್ ಪಡೆ (ಸಿಎಆರ್) ಮೈದಾನದಲ್ಲಿ ಇತ್ತೀಚೆಗೆ ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ಗೃಹರಕ್ಷಕ ವೃತ್ತಿಪರ ಕ್ರೀಡಾಕೂಟ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

`ಸಮಾಜದ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಗೃಹರಕ್ಷಕ ದಳದ ಸಿಬ್ಬಂದಿ ನಿರ್ಣಾಯಕ ಪಾತ್ರ ನಿರ್ವಹಿಸುತ್ತಿದ್ದಾರೆ. ಆ ಮೂಲಕ ಅವರು ಪೊಲೀಸರ ಒತ್ತಡವನ್ನು ಕಡಿಮೆ ಮಾಡುತ್ತಿದ್ದಾರೆ. ಸದಾ ಒತ್ತಡದಲ್ಲಿರುವ ಸಿಬ್ಬಂದಿ ಇಂತಹ ಕ್ರೀಡಾಕೂಟಗಳಲ್ಲಿ ಭಾಗವಹಿಸುವುದರಿಂದ ಸೇವಾ ಮನೋಭಾವ ಹೆಚ್ಚುತ್ತದೆ~ ಎಂದರು.

ನಂತರ ಮಾತನಾಡಿದ ಗೃಹ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಎಚ್.ಔರಾದ್‌ಕರ್, `ಹಲವು ಇಲಾಖೆಗಳಲ್ಲಿ ಗೃಹರಕ್ಷಕ ಸಿಬ್ಬಂದಿಯ ಅವಶ್ಯಕತೆ ಇದೆ. ಹೀಗಾಗಿ, ಇಲಾಖೆಗೆ ಹೆಚ್ಚಿನ ನೇಮಕಾತಿ ನಡೆಯಬೇಕಿದೆ. ಸಿಬ್ಬಂದಿಯ ದಿನಭತ್ಯೆ, ಮೂಲ ಸವಲತ್ತುಗಳನ್ನು ಹೆಚ್ಚಿಸುವ ಅಗತ್ಯವಿದೆ~ ಎಂದರು.

ಗೃಹರಕ್ಷಕ ದಳದ ಬೆಂಗಳೂರು ಗ್ರಾಮಾಂತರ ಜಿಲ್ಲಾ ಕಮಾಡೆಂಟ್ ಬಿ.ಅಮರನಾಥ್, ಸಿಎಆರ್ ಡಿಸಿಪಿ ಡಾ.ತ್ಯಾಗರಾಜನ್ ಸೇರಿದಂತೆ ಹಲವರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.