ADVERTISEMENT

ಗೃಹ ಸಚಿವರ ಪುತ್ರನೆಂದು ಸುಳ್ಳು ಹೇಳಿ ಕ್ರಿಕೆಟ್ ವೀಕ್ಷಣೆ: ಇಬ್ಬರ ಬಂಧನ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2012, 19:30 IST
Last Updated 16 ಏಪ್ರಿಲ್ 2012, 19:30 IST

ಬೆಂಗಳೂರು: ಗೃಹ ಸಚಿವ ಆರ್.ಅಶೋಕ ಅವರ ಪುತ್ರನೆಂದು ಸುಳ್ಳು ಹೇಳಿಕೊಂಡು ಚಿನ್ನಸ್ವಾಮಿ ಕ್ರೀಡಾಂಗಣದ ಅತಿ ಗಣ್ಯ ವ್ಯಕ್ತಿಗಳ ಗ್ಯಾಲರಿಯ (ಪಿ-2 ಸ್ಟ್ಯಾಂಡ್) ಟಿಕೆಟ್ ಪಡೆದು ಐಪಿಎಲ್ ಕ್ರಿಕೆಟ್ ಪಂದ್ಯ ವೀಕ್ಷಿಸುತ್ತಿದ್ದ ಆರೋಪದ ಮೇಲೆ ರಾಕೇಶ್‌ಗೌಡ (23) ಹಾಗೂ ಆತನ ಸ್ನೇಹಿತ ಸತೀಶ್ (36) ಎಂಬಾತನನ್ನು ಕಬ್ಬನ್‌ಪಾರ್ಕ್ ಪೊಲೀಸರು ಬಂಧಿಸಿದ್ದಾರೆ.

ಜಯನಗರ ಒಂಬತ್ತನೇ ಬ್ಲಾಕ್ ನಿವಾಸಿಯಾದ ರಾಕೇಶ್‌ಗೌಡ ಉರುಫ್ ಉಮೇಶ್ ಮನೆಯ ಸಮೀಪವೇ ಗ್ರಂಧಿಗೆ ಅಂಗಡಿ ಇಟ್ಟುಕೊಂಡಿದ್ದ. ರಿಯಲ್ ಎಸ್ಟೇಟ್ ಉದ್ಯಮಿಯಾದ ಸತೀಶ್ ಅಲಿಯಾಸ್ ವರುಣ್ ಕನಕಪುರ ರಸ್ತೆ ಸಮೀಪದ ಅಪಾರ್ಟ್‌ಮೆಂಟ್ ಒಂದರಲ್ಲಿ ವಾಸವಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಸತೀಶ್ ಜತೆ ಕಾರಿನಲ್ಲಿ ಭಾನುವಾರ ಸಂಜೆ ಕ್ರೀಡಾಂಗಣದ ಬಳಿ ಬಂದಿದ್ದ ರಾಕೇಶ್‌ಗೌಡ, `ತಾನು ಸಚಿವ ಆರ್.ಅಶೋಕ ಅವರ ಮಗ~ ಎಂದು ಪ್ರವೇಶದ್ವಾರದಲ್ಲಿದ್ದ ಭದ್ರತಾ ಸಿಬ್ಬಂದಿಗೆ ಹೇಳಿದ. ಇದನ್ನು ನಂಬಿದ ಭದ್ರತಾ ಸಿಬ್ಬಂದಿ, ಐಪಿಎಲ್ ಪಂದ್ಯಗಳ ಟಿಕೆಟ್ ಮಾರಾಟ ಪ್ರಕ್ರಿಯೆಯ ಜವಾಬ್ದಾರಿ ಹೊತ್ತಿರುವ ಡಿಎನ್‌ಎ ನೆಟ್‌ವರ್ಕ್ಸ್ ಸಂಸ್ಥೆಯ ಪ್ರತಿನಿಧಿಗಳಿಗೆ ಆತನನ್ನು ಪರಿಚಯಿಸಿದರು.
 
ನಂತರ ಪ್ರತಿನಿಧಿಗಳು, ಆರೋಪಿಗಳಿಬ್ಬರಿಗೂ ಕ್ರೀಡಾಂಗಣದ ಅತಿ ಗಣ್ಯ ವ್ಯಕ್ತಿಗಳ (ವಿವಿಐಪಿ) ಗ್ಯಾಲರಿಯಲ್ಲಿ ಕುಳಿತು ಪಂದ್ಯ ವೀಕ್ಷಿಸಲು ಅವಕಾಶ ಮಾಡಿಕೊಟ್ಟಿದ್ದರು.
 
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ (ಆರ್‌ಸಿಬಿ) ಮಾಲೀಕ ಸಿದ್ದಾರ್ಥ ಮಲ್ಯ ಅವರ ಸೀಟಿನ ಪಕ್ಕದಲ್ಲೇ ಕುಳಿತು ಪಂದ್ಯ ನೋಡುತ್ತಿದ್ದ ಆರೋಪಿಗಳು ಅಸಭ್ಯವಾಗಿ ವರ್ತಿಸುತ್ತಿದ್ದರು.

ಅವರ ವರ್ತನೆಯಿಂದ ಅನುಮಾನಗೊಂಡ ಡಿಎನ್‌ಎ ಪ್ರತಿನಿಧಿಗಳು, ಕ್ರೀಡಾಂಗಣದಲ್ಲೇ ಇದ್ದ ಪೊಲೀಸರಿಗೆ ಮಾಹಿತಿ ನೀಡಿದರು.

 ಈ ಹಿನ್ನೆಲೆಯಲ್ಲಿ ಅವರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದಾಗ ವಂಚನೆ ಪ್ರಕರಣ ಬಯಲಿಗೆ ಬಂತು ಎಂದು ಹಿರಿಯ ಅಧಿಕಾರಿಗಳು ಹೇಳಿದ್ದಾರೆ.

ವಿವಿಐಪಿ ಗ್ಯಾಲರಿಯ ಟಿಕೆಟ್ ದರ 55 ಸಾವಿರ ರೂಪಾಯಿ. ಡಿಎನ್‌ಎ ಪ್ರತಿನಿಧಿಗಳು ರಾಕೇಶ್‌ಗೌಡನನ್ನು ಸಚಿವರ ಪುತ್ರನೆಂದು ಭಾವಿಸಿ ಆ ಗ್ಯಾಲರಿಗೆ ಉಚಿತವಾಗಿ ಪ್ರವೇಶಾವಕಾಶ ಕಲ್ಪಿಸಿಕೊಟ್ಟಿದ್ದರು. ಎಂಟನೇ ತರಗತಿ ಓದಿರುವ ರಾಕೇಶ್‌ಗೌಡ ಸುಲಲಿತವಾಗಿ ಇಂಗ್ಲಿಷ್ ಮಾತನಾಡುತ್ತಾನೆ. ಆತ ಈ ಸಾಮರ್ಥ್ಯವನ್ನೇ ಬಂಡವಾಳ ಮಾಡಿಕೊಂಡು ಶ್ರೀಮಂತ ಜನರ ಸ್ನೇಹ ಸಂಪಾದಿಸಿದ್ದ. ಮತ್ತೊಬ್ಬ ಆರೋಪಿ ಸತೀಶ್ ಬಿ.ಕಾಂ ಪದವೀಧರ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಎಸಿಪಿಗೂ ವಂಚಿಸಿದ ಕಿಲಾಡಿ: ಆರೋಪಿ ರಾಕೇಶ್‌ಗೌಡ ಭಾನುವಾರ ಕ್ರೀಡಾಂಗಣದ ಭದ್ರತಾ ಕಾರ್ಯಕ್ಕೆ ನಿಯೋಜನೆಗೊಂಡಿದ್ದ ಎಸಿಪಿ ದರ್ಜೆಯ ಪೊಲೀಸ್ ಅಧಿಕಾರಿಯೊಬ್ಬರ ಮೊಬೈಲ್‌ಗೆ ಕರೆ ಮಾಡಿ, `ನಾನು ಸಚಿವ ಅಶೋಕ ಅವರ ಪುತ್ರ. ಕ್ರಿಕೆಟ್ ಪಂದ್ಯ ನೋಡಲು ಸ್ನೇಹಿತನ ಜತೆ ಕ್ರೀಡಾಂಗಣಕ್ಕೆ ಬಂದಿದ್ದೇನೆ~ ಎಂದು ಇಂಗ್ಲಿಷ್‌ನಲ್ಲಿ ಸಂಭಾಷಣೆ ನಡೆಸಿದ. ಇದನ್ನು ನಂಬಿದ ಎಸಿಪಿ, ರಾಕೇಶ್‌ಗೌಡ ಇದ್ದ ಸ್ಥಳಕ್ಕೆ ಖುದ್ದು ತೆರಳಿ ಆತನನ್ನು ಆತ್ಮೀಯವಾಗಿ ಬರ ಮಾಡಿಕೊಂಡು ವಿವಿಐಪಿ ಗ್ಯಾಲರಿಗೆ ಕರೆದೊಯ್ದಿದ್ದರು. ನಂತರ ಆ ಎಸಿಪಿಯೇ ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದಾಗ ವಂಚನೆ ಸಂಗತಿ ಬೆಳಕಿಗೆ ಬಂತು.

ನ್ಯಾಯಾಂಗ ಬಂಧನ: `ಏ.10ರಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದಿದ್ದ ಆರ್‌ಸಿಬಿ ಮತ್ತು ಕೋಲ್ಕತ್ತ ನೈಟ್ ರೈಡರ್ಸ್ ತಂಡಗಳ ನಡುವಿನ ಪಂದ್ಯಕ್ಕೂ ಆರೋಪಿಗಳು ಇದೇ ರೀತಿ ಪ್ರವೇಶ ಪಡೆದುಕೊಂಡು ಪಂದ್ಯ ವೀಕ್ಷಿಸಿದ್ದರು~ ಎಂದು ಕೇಂದ್ರ ವಿಭಾಗದ ಡಿಸಿಪಿ ಬಿ.ಆರ್.ರವಿಕಾಂತೇಗೌಡ `ಪ್ರಜಾವಾಣಿ~ಗೆ ತಿಳಿಸಿದರು.

`ಬಂಧಿತರ ವಿರುದ್ಧ ವಂಚನೆ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ. ಆರೋಪಿಗಳನ್ನು ನಗರದ ಎಂಟನೇ ಎಸಿಎಂಎಂ ನ್ಯಾಯಾಲಯದ ನ್ಯಾಯಾಧೀಶರ ಎದುರು ಸೋಮವಾರ ಹಾಜರುಪಡಿಸಲಾಯಿತು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರು ಅವರಿಬ್ಬರನ್ನೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶಿಸಿದರು. ಈ ಹಿನ್ನೆಲೆಯಲ್ಲಿ ಅವರನ್ನು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಯಿತು~ ಎಂದು ಹೇಳಿದರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.