ಬೆಂಗಳೂರು: ಉತ್ತರ ಕನ್ನಡ ಜಿಲ್ಲೆ ಗೇರುಸೊಪ್ಪದ ಶರಾವತಿ ಕೊಳ್ಳ ವೀಕ್ಷಣಾ ಗೋಪುರದ ಬಳಿ ಇದ್ದ ಅನಧಿಕೃತ ಗೂಡಂಗಡಿಯನ್ನು ಪರಿಸರವಾದಿಯೊಬ್ಬರ ಹೋರಾಟದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ತೆರವುಗೊಳಿಸಿದೆ.
ಈ ಅರಣ್ಯ ಪ್ರದೇಶವು ಸಿಂಗಳಿಕದಂತಹ ಅತಿ ವಿರಳ ಜೀವಸಂಕುಲಗಳಿಗೆ ಆಶ್ರಯ ತಾಣ. ಅನಧಿಕೃತ ಗೂಡಂಗಡಿಯಿಂದಾಗಿ ಆಹಾರಗಳನ್ನು ಅರಸಿ ಬರುತ್ತಿದ್ದ ಮಂಗಗಳ ಸಂತತಿ ಇತ್ತೀಚಿನ ದಿನಗಳಲ್ಲಿ ಹೆಚ್ಚಿತ್ತು. ಇದರಿಂದ ಸಿಂಗಳಿಕಗಳ ಇರುವಿಕೆಗೆ ಅಡ್ಡಿ ಆಗಿತ್ತು. ಈ ಬಗ್ಗೆ ನಿಮ್ಹಾನ್ಸ್ ಸಂಶೋಧನಾ ಅಭ್ಯರ್ಥಿ ರವಿ ಹೆಗಡೆ ಅವರು ಉತ್ತರ ಕನ್ನಡ ಜಿಲ್ಲಾಡಳಿತಕ್ಕೆ ಲಿಖಿತ ದೂರು ಸಲ್ಲಿಸಿದ್ದರು.
‘ಗೂಡಂಗಡಿಯಿಂದಾಗಿ ಅರಣ್ಯ ಪ್ರದೇಶದಲ್ಲಿ ಬೀದಿ ನಾಯಿಗಳ ಸಂತತಿ ಹೆಚ್ಚಿದೆ. ಇದರಿಂದಾಗಿ ರೇಬಿಸ್‌ನಂತಹ ರೋಗ ವನ್ಯಜೀವಿಗಳಿಗೆ ಹರಡುವ ಸಾಧ್ಯತೆ ಇದೆ’ ಎಂದು ಉಲ್ಲೇಖಿಸಿದ್ದರು. ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಜಿಲ್ಲಾಡಳಿತ ಅತಿಕ್ರಮಣ ತೆರವುಗೊಳಿಸಲು ಹೊನ್ನಾವರದ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ. ರಮೇಶ್ ಅವರಿಗೆ ನಿರ್ದೇಶನ ನೀಡಿತ್ತು.
ಬಳಿಕ ಗೂಡಂಗಡಿ ತೆರವುಗೊಳಿಸಲಾಗಿತ್ತು. ಅದೇ ಸ್ಥಳದಲ್ಲಿ ಗೂಡಂಗಡಿ ಮತ್ತೆ ತಲೆ ಎತ್ತಿತ್ತು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಹೆಗಡೆ ಅವರು ರಾಜ್ಯ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ವಿನಯ್ ಲೂತ್ರ ಅವರಿಗೆ ದೂರು ಸಲ್ಲಿಸಿದ್ದರು. ಲೂತ್ರ ಅವರ ಆದೇಶದಂತೆ ಇದೀಗ ಗೂಡಂಗಡಿ ಮತ್ತೆ ತೆರವುಗೊಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.