ADVERTISEMENT

ಗೋರಕ್ಷಣೆ ಹೆಸರಲ್ಲಿ ಜೀವ ತೆಗೆಯಬೇಡಿ

​ಪ್ರಜಾವಾಣಿ ವಾರ್ತೆ
Published 9 ಜುಲೈ 2017, 19:30 IST
Last Updated 9 ಜುಲೈ 2017, 19:30 IST
ಡಿ.ವಿ.ಸದಾನಂದ ಗೌಡ ಅವರು ವಿ.ರಾಮ್ ಮಾಧವ್‌ ಅವರನ್ನು ವೇದಿಕೆಗೆ  ಕರೆದೊಯ್ದರು. ನಟ ಸಾಯಿಕುಮಾರ್‌, ಶಾಸಕವೈ.ಎ.ನಾರಾಯಣಸ್ವಾಮಿ, ಡಿ.ಪುರಂದೇಶ್ವರಿ ಇದ್ದಾರೆ  –ಪ್ರಜಾವಾಣಿ ಚಿತ್ರ
ಡಿ.ವಿ.ಸದಾನಂದ ಗೌಡ ಅವರು ವಿ.ರಾಮ್ ಮಾಧವ್‌ ಅವರನ್ನು ವೇದಿಕೆಗೆ ಕರೆದೊಯ್ದರು. ನಟ ಸಾಯಿಕುಮಾರ್‌, ಶಾಸಕವೈ.ಎ.ನಾರಾಯಣಸ್ವಾಮಿ, ಡಿ.ಪುರಂದೇಶ್ವರಿ ಇದ್ದಾರೆ –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಗೋವು ರಕ್ಷಣೆ ಹೆಸರಿನಲ್ಲಿ ಜೀವ ತೆಗೆಯುವ ಕೆಲಸಕ್ಕೆ ಯಾರೂ ಮುಂದಾಗಬಾರದು’ ಎಂದು ಬಿಜೆಪಿ ರಾಷ್ಟ್ರೀಯ  ಪ್ರಧಾನ ಕಾರ್ಯದರ್ಶಿ ವಿ.ರಾಮ್‌ ಮಾಧವ್‌ ಮನವಿ ಮಾಡಿದರು.

‘ಅವೇರ್‌ನೆಸ್‌ ಇನ್‌ ಆ್ಯಕ್ಷನ್‌’ ವತಿಯಿಂದ ಇಲ್ಲಿ ಭಾನುವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅವರು, ‘ಏಕಾತ್ಮ ಮಾನವತಾವಾದ– ಶಾಶ್ವತ ಮತ್ತು ಸಾರ್ವಕಾಲಿಕ ಚಿಂತನೆ’ ಕುರಿತು ಮಾತನಾಡಿದರು.

‘ನಾವು ಎಲ್ಲವನ್ನೂ ಪವಿತ್ರ ಹಾಗೂ ದೈವಿಕ ಭಾವದಿಂದ ನೋಡುತ್ತೇವೆ. ನಮಗೆ ಗೋವು ಪವಿತ್ರ. ಗೋರಕ್ಷಣೆ  ಕಾರ್ಯ ಇನ್ನೂ ಪವಿತ್ರ.  ಗೋವಿಗಿಂತಲೂ ಜೀವ ಪವಿತ್ರ ಎಂಬುದನ್ನೂ ನಾವು ಮರೆಯಬಾರದು’ ಎಂದು ಅವರು ಕಿವಿಮಾತು ಹೇಳಿದರು.

ADVERTISEMENT

‘ಕಮ್ಯುನಿಸಂ ಹಾಗೂ ಕ್ಯಾಪಿಟಲಿಸಂಗಳೆರಡೂ  ಜನರ ಆಶೋತ್ತರ ಈಡೇರಿಸುವಲ್ಲಿ ವಿಫಲವಾಗಿದ್ದರಿಂದ  ಏಕಾತ್ಮ ಮಾನವತಾವಾದ ರೂಪತಳೆಯಿತು.  20ನೇ ಶತಮಾನದಲ್ಲಿ  ಯೂರೋಪ್‌ ನಿರಂಕುಶ ಪ್ರಭುತ್ವದಿಂದ ಕಂಗೆಟ್ಟ ಸಂದರ್ಭದಲ್ಲಿ ಫ್ರಾನ್ಸ್‌ನ ಕೆಥೋಲಿಕ್‌ ತತ್ವಜ್ಞಾನಿ ಜಾಕ್ವೆಸ್‌ ಮೆರಿಟೈನ್‌ ಅವರು ಏಕಾತ್ಮ ಮಾನವತಾವಾದವನ್ನು ಮೊದಲು ಪ್ರತಿಪಾದಿಸಿದರು’ ಎಂದರು.

‘ಮೆರಿಟೈನ್‌ ಅವರ ಸಿದ್ಧಾಂತ ಮಾನವ ಕೇಂದ್ರಿತವಾಗಿತ್ತು. ಪ್ರಜಾಪ್ರಭುತ್ವ ಮೌಲ್ಯಗಳ ಪುನರುತ್ಥಾನ ಇದರ ಉದ್ದೇಶವಾಗಿತ್ತು. ಒಳ್ಳೆಯ ಮನುಷ್ಯರ ನಿರ್ಮಾಣಕ್ಕೆ ಪ್ರಜಾಪ್ರಭುತ್ವ ಹಾಗೂ ಕ್ರಿಶ್ಚಿಯಾನಿಟಿ ಬೇಕು ಎಂದು ಅವರು ವಾದಿಸಿದ್ದರು’ ಎಂದರು.
‘ಪಂಡಿತ್‌ ದೀನದಯಾಳ್‌ ಉಪಾಧ್ಯಾಯ ಅವರೂ  ಏಕಾತ್ಮ ಮಾನವತಾವಾದವನ್ನು ಪ್ರತಿಪಾದಿಸಿದ್ದಾರೆ. ಆದರೆ, ಇವರ ಸಿದ್ಧಾಂತ ಕೇವಲ ಮನುಷ್ಯ ಕೇಂದ್ರಿತವಲ್ಲ.   ಮನುಷ್ಯನ ಜೊತೆಗೆ ಸಮುದಾಯ, ನಿಸರ್ಗ ಹಾಗೂ ದೈವತ್ವಕ್ಕೂ ಸ್ಥಾನವಿದೆ.  ಇದು ಸನಾತನ ಧರ್ಮದ 20ನೇ ಶತಮಾನದ ಆವೃತ್ತಿಯಂತಿದೆ. ಇದು ಒಂದರ್ಥದಲ್ಲಿ ಸನಾತನ ಧರ್ಮದ ಸಮಕಾಲೀನ ವ್ಯಾಖಾನವಿದ್ದಂತೆ’ ಎಂದು ವಿಶ್ಲೇಷಿಸಿದರು.
‘ಘನತೆ, ಸ್ವಾತಂತ್ರ್ಯ ಹಾಗೂ ಏಕತೆ ಏಕತ್ಮಾ ಮಾನವತಾವಾದದ ಮೂರು ಸ್ತಂಬಗಳಿದ್ದಂತೆ. ಅನನ್ಯತೆಯಿಂದ ಘನತೆ ದಕ್ಕುತ್ತದೆ. ಭಾರತೀಯತೆ ನಮ್ಮ ಗುರುತು.   ನಮ್ಮ ಗುರುತು ಹೇಳಿಕೊಂಡರೆ ಘನತೆ ಸಿಗುವುದಿಲ್ಲ ಎಂಬ ಭಾವನೆ ಇತ್ತು. ಈಗ ಪರಿಸ್ಥಿತಿ ಹಾಗಿಲ್ಲ’ ಎಂದರು.
‘ಅವೇರ್‌ನೆಸ್‌ ಇನ್‌ ಆ್ಯಕ್ಷನ್‌’ ಪುಸ್ತಕ ಬಿಡುಗಡೆ ಮಾಡಿದ  ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ, ‘ಚುನಾವಣೆ ಸಂದರ್ಭದಲ್ಲಿ ಭರವಸೆ ನೀಡುವುದು ಮುಖ್ಯವಲ್ಲ. ಕಾರ್ಯಕ್ರಮ ಅನುಷ್ಠಾನ ಸಮರ್ಪಕವಾಗಿ ನಡೆಯುವಂತೆ ನೋಡಿಕೊಳ್ಳುವುದು ಮುಖ್ಯ’ ಎಂದರು.
ರಾಜ್ಯ ಬಿಜೆಪಿ ಸಹ ಉಸ್ತುವಾರಿ ಡಿ.ಪುರಂದೇಶ್ವರಿ ಮಾತನಾಡಿ, ‘ಅನೇಕ  ಬಾರಿ ದಾಳಿಗೊಳಗಾದ ಬಳಿಕವೂ ನಮ್ಮ ಸಂಸ್ಕೃತಿ ದೃಢವಾಗಿ ನಿಂತಿದೆ. ಸಂಸ್ಕೃತಿ ಮೌಲ್ಯಗಳನ್ನು ಎತ್ತಿಹಿಡಿಯುವ ಕೆಲಸ ಆಗಬೇಕಿದೆ’ ಎಂದರು.

‘ದೇಶಭಕ್ತರಿಗೆ ಮೂರು ಲಕ್ಷಣ’

‘ನಿಜವಾದ ದೇಶಭಕ್ತರಲ್ಲಿ ಮೂರು ಲಕ್ಷಣಗಳಿರುತ್ತವೆ. ಅವರು  ಇತಿಹಾಸದ ಬಗ್ಗೆ ಹೆಮ್ಮೆ, ವರ್ತಮಾನದ ಬಗ್ಗೆ ನೋವು ಹಾಗೂ ಭವಿಷ್ಯದ ಬಗ್ಗೆ ಕನಸುಗಳನ್ನು ಹೊಂದಿರುತ್ತಾರೆ’ ಎಂದು ರಾಮ್‌ ಮಾಧವ್‌ ಅಭಿಪ್ರಾಯಪಟ್ಟರು.

ಬಡತನ, ಜಾತಿ, ಭಾಷಾ ಕಲಹಗಳಿಂದ ನಮ್ಮ ಗುರುತಿನ ಬಗ್ಗೆ ಹೆಮ್ಮೆಪಡುವ ಪರಿಸ್ಥಿತಿ ಹೊಂದಿಲ್ಲ. ಕನ್ನಡಿಗರು ಇತ್ತೀಚಿಗೆ ಭಾಷಾ ಕಲಹದಿಂದ ಗುರುತಿಸಿಕೊಳ್ಳುತ್ತಿದ್ದಾರೆ
ವಿ. ರಾಮ್‌ ಮಾಧವ್‌
ಬಿಜೆಪಿ ಪ್ರಧಾನ ಕಾರ್ಯದರ್ಶಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.