ADVERTISEMENT

ಚಪ್ಪಲಿಯಿಂದ ಸಿಕ್ಕಿಬಿದ್ದ ಆರೋಪಿ

​ಪ್ರಜಾವಾಣಿ ವಾರ್ತೆ
Published 26 ಮೇ 2018, 19:30 IST
Last Updated 26 ಮೇ 2018, 19:30 IST

ಬೆಂಗಳೂರು: ಬಟ್ಟೆ ಅಂಗಡಿಯಲ್ಲಿ ಕಳ್ಳತನ ಮಾಡಿ ಪರಾರಿಯಾಗಿದ್ದ ಆರೋಪಿಯೊಬ್ಬ, ತಾನು ಧರಿಸಿದ್ದ ಚಪ್ಪಲಿಯಿಂದ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.

ಭರತ್‌ ರಾಥೋಡ್‌ ಎಂಬುವರಿಗೆ ಸೇರಿದ್ದ ಪುನಾಗರ್ ಫ್ಯಾಷನ್ಸ್ ಮಳಿಗೆಯಲ್ಲಿ ಇತ್ತೀಚೆಗೆ ನುಗ್ಗಿದ್ದ ಕಳ್ಳನೊಬ್ಬ, ₹25 ಸಾವಿರ ನಗದು ಕದ್ದೊಯ್ದಿದ್ದ. ಕೃತ್ಯದ ದೃಶ್ಯವು ಮಳಿಗೆಯ ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಅದರ ಸಮೇತ ಭರತ್, ಸಿಟಿ ಮಾರ್ಕೆಟ್ ಪೊಲೀಸರಿಗೆ ದೂರು ನೀಡಿದ್ದರು.

‘ದೂರುದಾರರು ಕೊಟ್ಟಿದ್ದ ದೃಶ್ಯಗಳನ್ನು ಪರಿಶೀಲಿಸಿದಾಗ, ಆರೋಪಿಯ ಮುಖ ಸ್ಪಷ್ಟವಾಗಿ ಗೋಚರಿಸಿರಲಿಲ್ಲ. ಬಟ್ಟೆ, ಚಪ್ಪಲಿ ಹಾಗೂ ನಡೆದಾಡುವ ಶೈಲಿ ಮಾತ್ರ ಸ್ಪಷ್ಟವಾಗಿತ್ತು. ಅಂಥ ವ್ಯಕ್ತಿಯನ್ನು ಕಂಡರೆ ವಶಕ್ಕೆ ಪಡೆಯುವಂತೆ ಸಿಬ್ಬಂದಿಗೆ ಹೇಳಿದ್ದೆವು’ ಎಂದು ಪೊಲೀಸರು ತಿಳಿಸಿದರು.

ADVERTISEMENT

‘ಮೇ 24ರಂದು ಆರೋಪಿ ಜೆ.ಜೆ.ನಗರದಲ್ಲಿ ಸುತ್ತಾಡುತ್ತಿದ್ದ. ಆತನನ್ನು ಗುರುತು ಹಿಡಿದಿದ್ದ ಸಿಬ್ಬಂದಿ, ವಶಕ್ಕೆ ಪಡೆದು ಠಾಣೆಗೆ ಕರೆತಂದಿದ್ದರು.  ವಿಚಾರಣೆ ನಡೆಸಿದಾಗ ಕಳ್ಳತನ ಎಸಗಿದ್ದನ್ನು ಒಪ್ಪಿಕೊಂಡಿದ್ದಾನೆ. ಕೆಲ ಪುರಾವೆಗಳನ್ನು ಸಂಗ್ರಹಿಸಬೇಕಿರುವುದರಿಂದ ಆತನ ಹೆಸರನ್ನು ಸದ್ಯಕ್ಕೆ ಬಹಿರಂಗಪಡಿಸಲು ಆಗದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.