ADVERTISEMENT

ಚಾಕುವಿನಿಂದ ಕಾನ್‌ಸ್ಟೆಬಲ್‌ಗೆ ಇರಿತ: ರೌಡಿ ಕಾಲಿಗೆ ಗುಂಡೇಟು

ಜೈಲು ಶಿಕ್ಷೆ ಅನುಭವಿಸಿದ್ದ ಆರೋಪಿ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2017, 19:50 IST
Last Updated 15 ಅಕ್ಟೋಬರ್ 2017, 19:50 IST

ಬೆಂಗಳೂರು: ಬೈಕ್‌ ತಪಾಸಣೆ ನಡೆಸುತ್ತಿದ್ದ ಹಲಸೂರು ಠಾಣೆಯ ಕಾನ್‌ಸ್ಟೆಬಲ್‌ಗೆ ಚಾಕುವಿನಿಂದ ಇರಿದು ಪರಾರಿಯಾಗುತ್ತಿದ್ದ ರೌಡಿ ಕಾರ್ತಿಕ್‌ (27) ಮೇಲೆ ಇನ್‌ಸ್ಪೆಕ್ಟರ್‌ ಸುಬ್ರಹ್ಮಣ್ಯ ಗುಂಡು ಹಾರಿಸಿದ್ದಾರೆ.

ಕಾನ್‌ಸ್ಟೆಬಲ್‌ ಬಸವರಾಜ ಕಣಿಜಾರ್‌ ಅವರನ್ನು ಹಾಸ್‌ಮ್ಯಾಟ್‌ ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಲಗಾಲಿಗೆ ಗುಂಡೇಟು ಬಿದ್ದು ಗಾಯಗೊಂಡಿರುವ ಕಾರ್ತಿಕ್‌ಗೆ ಅದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

‘ಗೌತಮ ನಗರದ ಕಾರ್ತಿಕ್‌ ಶನಿವಾರ ರಾತ್ರಿ 2.30 ಗಂಟೆಗೆ ಬೈಕ್‌ನಲ್ಲಿ ಹಲಸೂರು ಮಾರ್ಗವಾಗಿ ಹೋಗುತ್ತಿದ್ದ. ಈ ವೇಳೆ ರಾತ್ರಿ ಗಸ್ತಿನಲ್ಲಿದ್ದ ಕಾನ್‌ಸ್ಟೆಬಲ್‌ ಬೈಕ್‌ ತಡೆದು ದಾಖಲೆ ತೋರಿಸುವಂತೆ ಹೇಳಿದ್ದರು. ಅಷ್ಟಕ್ಕೆ ಕೋಪಗೊಂಡ ಆತ ಜಗಳ ತೆಗೆದು ಚಾಕುವಿನಿಂದ ಕೈ ಹಾಗೂ ಹೊಟ್ಟೆ ಭಾಗಕ್ಕೆ ಇರಿದಿದ್ದ’

ADVERTISEMENT

‘ಬಳಿಕ ಆರೋಪಿ ಪರಾರಿಯಾಗಿದ್ದ. ಕಾನ್‌ಸ್ಟೆಬಲ್‌ ಕೂಡಲೇ ನಿಯಂತ್ರಣ ಕೊಠಡಿಗೆ ಮಾಹಿತಿ ನೀಡಿದ್ದರು. ಹೊಯ್ಸಳ ಗಸ್ತು ವಾಹನದ ಸಿಬ್ಬಂದಿ ಕಾನ್‌ಸ್ಟೆಬಲ್‌ ಅವರನ್ನು ಆಸ್ಪತ್ರೆಗೆ ಕರೆದೊಯ್ದಿದ್ದರು. ಅತ್ತ ಇನ್‌ಸ್ಪೆಕ್ಟರ್‌ ಸುಬ್ರಹ್ಮಣ್ಯ ಹಾಗೂ ಸಿಬ್ಬಂದಿ,  ಹಲಸೂರು ಸುತ್ತಮುತ್ತ ನಾಕಾಬಂದಿ ನಿರ್ಮಿಸಿದ್ದರು’ ಎಂದು ಹಿರಿಯ ಅಧಿಕಾರಿ ತಿಳಿಸಿದರು.

‘ಆರೋಪಿಯ ಬೈಕ್‌ ಅನ್ನು ಹಲಸೂರು ಸಮೀಪದ ಗುರುದ್ವಾರ ಬಳಿ ಕಂಡ ಇನ್‌ಸ್ಪೆಕ್ಟರ್‌ ನಿಲ್ಲಿಸಲು ಮುಂದಾಗಿದ್ದರು. ಶರಣಾಗುವಂತೆ ಕೂಗಿ ಹೇಳಿದ್ದರು. ಆಗ ಬೈಕ್‌ನಿಂದ ಇಳಿದಿದ್ದ ಆರೋಪಿ, ಚಾಕು ಹಿಡಿದುಕೊಂಡು ಇನ್‌ಸ್ಪೆಕ್ಟರ್‌ ಅವರ ಮೈಮೇಲೆ ಹೋಗಿದ್ದ. ಉಳಿದ ಸಿಬ್ಬಂದಿ ಆತನನ್ನು ಹಿಡಿಯಲು ಬಂದಾಗ ಸ್ಥಳದಿಂದ ಓಡಲು ಯತ್ನಿಸಿದ್ದ. ಆಗ ಇನ್‌ಸ್ಪೆಕ್ಟರ್ ಅವರು ಆತ್ಮರಕ್ಷಣೆಗಾಗಿ ಆರೋಪಿಯ ಬಲಗಾಲಿಗೆ ಗುಂಡು ಹಾರಿಸಿದ್ದರು’ ಎಂದು ಅಧಿಕಾರಿ ವಿವರಿಸಿದರು.

‘ಕಾರ್ತಿಕ್‌ ಹಲಸೂರು ಠಾಣೆಯ ರೌಡಿಶೀಟರ್‌ ಆಗಿದ್ದ. ಆತನ ವಿರುದ್ಧ ಕೊಲೆಗೆ ಯತ್ನ, ಅಪಹರಣ, ಅತ್ಯಾಚಾರ, ಸುಲಿಗೆ ಸೇರಿ ಹಲವು ಪ್ರಕರಣಗಳು ದಾಖಲಾಗಿದ್ದವು.
ಆತನ ವಿರುದ್ಧ ಸರ್ಕಾರಿ ಅಧಿಕಾರಿ ಕರ್ತವ್ಯಕ್ಕೆ ಅಡ್ಡಿ, ಅಧಿಕಾರಿ ಮೇಲೆ ಹಲ್ಲೆ (ಐಪಿಸಿ 353, 332) ಹಾಗೂ ಕೊಲೆಗೆ ಯತ್ನ (ಐಪಿಸಿ 307) ಆರೋಪದಡಿ ಪ್ರಕರಣ ದಾಖಲಿಸಿದ್ದೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.