ADVERTISEMENT

ಚಾರಿತ್ರಿಕ ಪ್ರಯಾಣದ ಕುತೂಹಲ...

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2011, 19:30 IST
Last Updated 20 ಅಕ್ಟೋಬರ್ 2011, 19:30 IST

ಬೆಂಗಳೂರು: ಅದನ್ನೊಮ್ಮೆ ನೋಡಬೇಕು, ಅದರೊಳಗೆ ಕುಳಿತು ವಿಹರಿಸಬೇಕು. ಚಾರಿತ್ರಿಕ ಮೊದಲ ಯಾನದ ಭಾಗವಾಗಬೇಕು ಎನ್ನುವ ಕಾತರ. ಆ ಉತ್ಸಾಹದೊಂದಿಗೆ ಅಲ್ಲಿ ಸೇರಿದ್ದು ಸಾವಿರಾರು ಜನ.

ಎಂ.ಜಿ.ರಸ್ತೆ ಮೆಟ್ರೊ ರೈಲು ನಿಲ್ದಾಣದಲ್ಲಿ ಮೊದಲ ಸಾರ್ವಜನಿಕ ಸೇವೆ ಆರಂಭವಾದದ್ದು ಸಂಜೆ ನಾಲ್ಕಕ್ಕೆ. ಆದರೆ ಮಧ್ಯಾಹ್ನ ಎರಡರಿಂದಲೇ ಟಿಕೆಟ್ ಖರೀದಿಸಲು ಜನರು ಸರತಿಯಲ್ಲಿ ನಿಂತಿದ್ದರು. ಪುಟ್ಟ ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೆ ಎಲ್ಲರೂ ಅಲ್ಲಿ ಸೇರಿದ್ದರು. ನಿಲ್ದಾಣದ ಒಂದು ಭಾಗದಲ್ಲಿ ಬಿಸಿಲಲ್ಲೇ ನಿಂತು ಟಿಕೆಟ್‌ಗಾಗಿ ಕಾದರು.

3.30ರ ಸುಮಾರಿಗೆ ಬಿಎಂಆರ್‌ಸಿಎಲ್ ಸಿಬ್ಬಂದಿ ಟಿಕೆಟ್ ನೀಡಲು ಆರಂಭಿಸಿದರು. ಒಂದು ರೂಪಾಯಿ ನಾಣ್ಯದಂತಿರುವ ಟೋಕನ್ ಅನ್ನು ಪಂಚಿಂಗ್ ಯಂತ್ರಕ್ಕೆ ತೋರಿಸುವ ಪ್ರಕ್ರಿಯೆ. ಒಳಾಂಗಣದಲ್ಲಿ ಅನೇಕರು ಬಸ್ ನಿಲ್ದಾಣಕ್ಕೂ ಮೆಟ್ರೊ ನಿಲ್ದಾಣಕ್ಕೂ ಇರುವ ವ್ಯತ್ಯಾಸಗಳನ್ನು ತಾಳೆ ಹಾಕುತ್ತಿದ್ದರು. ಮೆಟ್ಟಿಲುಗಳ ಜತೆಗೆ ಅಲ್ಲಿ ಲಿಫ್ಟ್, ಎಸ್ಕಲೇಟರ್‌ಗಳ ವ್ಯವಸ್ಥೆ ಕಂಡು ಖುಷಿ ಪಟ್ಟರು.

ಸರಿಯಾಗಿ ಸಂಜೆ 4ಕ್ಕೆ ರೈಲು ನಿಲ್ದಾಣಕ್ಕೆ ಆಗಮಿಸಿತು. ರೈಲು ಬರುತ್ತಿದ್ದಂತೆ ಎಲ್ಲೆಲ್ಲೂ ಹರ್ಷೋದ್ಘಾರ, ಭಾರಿ ಕರತಾಡನ. ಸೀಟಿ ಹೊಡೆಯುವ ಮೂಲಕ ನೆಚ್ಚಿನ ಗಾಡಿಗೆ ಸ್ವಾಗತ! ರೈಲಿನೊಳಗೆ ಪ್ರಯಾಣಿಕರ ಗಮನ ಸೆಳೆದದ್ದು ಹವಾನಿಯಂತ್ರಿತ ವ್ಯವಸ್ಥೆ, ಹಾಗೂ ಸುರಕ್ಷತಾ ಕ್ರಮಗಳು.

`ಸುಮಾರು 7 ಕಿ.ಮೀ ಅಂತರವನ್ನು ಕೇವಲ ಹತ್ತು ಹದಿನೈದು ನಿಮಿಷದಲ್ಲಿ ತಲುಪುವುದೇ ಖುಷಿಯ ವಿಚಾರ. ಆಟೊದರಕ್ಕೆ ಹೋಲಿಸಿದರೆ ಇದರ ಪ್ರಯಾಣದರ ತುಂಬಾ ಕಡಿಮೆ ಇದೆ. ಕಂಡಕ್ಟರ್ ಕಿರಿಕಿರಿ ಇಲ್ಲದೇ ಇರುವುದು ಮತ್ತೊಂದು ಉತ್ತಮ ವಿಚಾರ~ ಎಂದು ಯಶವಂತಪುರದ ನಿವಾಸಿ ಪುರುಷೋತ್ತಮ್ ತಿಳಿಸಿದರು. 
 
ಬೆಳೆಯುತ್ತಿರುವ ನಗರವನ್ನು ರೈಲಿನ ಕಿಟಕಿಗಳ ಮೂಲಕ ಕಂಡು ಖುಷಿಪಟ್ಟರು. ಎತ್ತರದ ಕಟ್ಟಡಗಳು, ಮೆಟ್ರೊ ಮಾರ್ಗದ ಕೆಳಗೆ ಸಂಚರಿಸುವ ವಾಹನಗಳು ಜನ ಕುತೂಹಲದಿಂದ ನೋಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಮೆಟ್ರೊ ನೋಡಲೆಂದೇ ಬಂದಿದ್ದ ಗಿರಿಜಾ ಅವರ ಸಂತೋಷಕ್ಕೆ ಎಲ್ಲೆಯೇ ಇರಲಿಲ್ಲ.

`ನಾವು ಸಂಚರಿಸುತ್ತಿರುವ ರೈಲಿನ ಕೆಳಗೆ ಹಳಿ ಇದೆ. ಅದರ ಕೆಳಗೆ ಸೇತುವೆ, ಅದರ ಕೆಳಗೆ ರಸ್ತೆಗಳು ಜನಗಳು. ಇದೆಲ್ಲಾ ಒಂದು ವಿಸ್ಮಯದಂತೆ ಕಾಣುತ್ತಿದೆ~ ಎಂದು ಅವರು ಅಚ್ಚರಿ ವ್ಯಕ್ತಪಡಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.