ADVERTISEMENT

ಚಿತ್ರರಂಗದಿಂದ ನಿವೃತ್ತಿ ಇಲ್ಲ- ನಾರಾಯಣ್

​ಪ್ರಜಾವಾಣಿ ವಾರ್ತೆ
Published 27 ಜೂನ್ 2012, 19:30 IST
Last Updated 27 ಜೂನ್ 2012, 19:30 IST

ಬೆಂಗಳೂರು: ಚಿತ್ರರಂಗದಿಂದ ದೂರ ಉಳಿಯುವುದಾಗಿ ಘೋಷಿಸಿದ್ದ ನಿರ್ಮಾಪಕ- ನಿರ್ದೇಶಕ ಎಸ್.ನಾರಾಯಣ್ ನಿವೃತ್ತಿಯನ್ನು ಹಿಂದಕ್ಕೆ ಪಡೆದುಕೊಂಡಿದ್ದಾರೆ. ಬುಧವಾರ ನೀಡಿರುವ ಪತ್ರಿಕಾ ಹೇಳಿಕೆಯಲ್ಲಿ ಎಸ್.ನಾರಾಯಣ್ ತಮ್ಮ ನಿವೃತ್ತಿ ಘೋಷಣೆಯನ್ನು ವಾಪಸು ಪಡೆದುಕೊಂಡಿರುವುದಾಗಿ ತಿಳಿಸಿದ್ದಾರೆ.

ಉದ್ಯಮದಲ್ಲಿ ಶಿಸ್ತು ಕಂಡು ಬರುತ್ತಿಲ್ಲ, ವಾತಾವರಣವೂ ಚೆನ್ನಾಗಿಲ್ಲ. ಈ ನೋವಿನಿಂದಾಗಿ ತಾವು ಚಿತ್ರರಂಗದಿಂದ ಸಂಪೂರ್ಣವಾಗಿ ಹಿಂದಕ್ಕೆ ಸರಿಯುತ್ತಿರುವುದಾಗಿ ಎಸ್. ನಾರಾಯಣ್ ಏಪ್ರಿಲ್ ಮೊದಲ ವಾರದಲ್ಲಿ ಪ್ರಕಟಿಸಿದ್ದರು. ಚಿತ್ರರಂಗದ ಹಿರಿಯರ ಒತ್ತಡದ ಕಾರಣ ಮತ್ತೆ ಚಿತ್ರರಂಗಕ್ಕೆ ಪ್ರವೇಶಿಸಲು ಒಪ್ಪಿಕೊಂಡಿರುವುದಾಗಿ ನಾರಾಯಣ್ ತಿಳಿಸಿದ್ದಾರೆ.

`ನನ್ನ ನಿವೃತ್ತಿ ನಿರ್ಧಾರಕ್ಕೆ ಸತತ ಸೋಲುಗಳು ಕಾರಣವಲ್ಲ. ವೃತ್ತಿ ಬದುಕಿನಲ್ಲಿ ಹಲವು ಸೋಲು ಗೆಲುವುಗಳನ್ನು ಕಂಡಿದ್ದೇನೆ. ಆದರೆ ಉದ್ಯಮದಲ್ಲಿ ಪ್ರಮುಖವಾಗಿ ಕಾಡುತ್ತಿದ್ದ ಶಿಸ್ತಿನ ಕೊರತೆ ನನಗೆ ನೋವುಂಟು ಮಾಡಿತ್ತು. ಶಿಸ್ತಿನ ವ್ಯಕ್ತಿಯಾದ ನಾನು ಉದ್ಯಮದಲ್ಲಿ ಶಿಸ್ತು ಇರಬೇಕೆಂದು ಸ್ವಾರ್ಥಕ್ಕಾಗಿ ಹೇಳುತ್ತಿಲ್ಲ. ಉದ್ಯಮದ ಹಿತದೃಷ್ಟಿಯಿಂದ ಹೇಳುತ್ತಿದ್ದೇನೆ. ಮುಂದಿನ ದಿನಗಳಲ್ಲಿ ಉತ್ತಮ ಶಿಸ್ತು ಬೆಳೆಸಲು ಪ್ರಯತ್ನಿಸುವುದಾಗಿ ಅಂಬರೀಷ್ ಸೇರಿದಂತೆ ಚಿತ್ರರಂಗದ ಹಿರಿಯರು ಭರವಸೆ ನೀಡಿದ್ದಾರೆ~ ಎಂದು ಅವರು `ಪ್ರಜಾವಾಣಿ~ಗೆ ತಿಳಿಸಿದರು.

`ನನ್ನ ಬದುಕಿನಲ್ಲಿ ಒಮ್ಮೆ ತೆಗೆದುಕೊಂಡ ನಿರ್ಧಾರವನ್ನು ಹಿಂದಕ್ಕೆ ಪಡೆದದ್ದೇ ಇರಲಿಲ್ಲ. ಆದರೆ ಚಿತ್ರರಂಗದವರ ಪ್ರೀತಿಯ ಒತ್ತಡಕ್ಕೆ ಮಣಿಯಬೇಕಾಯಿತು. ನಿರ್ಧಾರ ಬದಲಿಸುತ್ತಿರುವುದರ ಬಗ್ಗೆ ನನಗೆ ಬೇಸರ, ಮುಜುಗರ ಎರಡೂ ಆಗುತ್ತಿದೆ. ಇದನ್ನು ಇನ್ನೂ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಎಲ್ಲಾ ಗೊಂದಲಗಳಿಂದ ಹೊರಬಂದ ಬಳಿಕವಷ್ಟೇ ಮುಂದಿನ ನಡೆಯ ಬಗ್ಗೆ ತೀರ್ಮಾನ ತೆಗೆದುಕೊಳ್ಳುತ್ತೇನೆ ಎಂದು ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.