ADVERTISEMENT

ಚಿನ್ನಾಭರಣ ದರೋಡೆ

​ಪ್ರಜಾವಾಣಿ ವಾರ್ತೆ
Published 27 ಜನವರಿ 2012, 19:30 IST
Last Updated 27 ಜನವರಿ 2012, 19:30 IST

ಬೆಂಗಳೂರು: ನಗರದ ಕೆಂಗೇರಿ ಮತ್ತು ರಾಜರಾಜೇಶ್ವರಿನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಗುರುವಾರ ರಾತ್ರಿ ನಡೆದ ಪ್ರತ್ಯೇಕ ಪ್ರಕರಣಗಳಲ್ಲಿ ದುಷ್ಕರ್ಮಿಗಳು ಸಾರ್ವಜನಿಕರಿಗೆ ಬೆದರಿಸಿ ಚಿನ್ನಾಭರಣ ಹಾಗೂ 16 ಸಾವಿರ ರೂಪಾಯಿಗಳ ನಗದು ದರೋಡೆ ಮಾಡಿದ್ದಾರೆ.

ಮನೆಗೆ ನುಗ್ಗಿದ ದುಷ್ಕರ್ಮಿಗಳು ಮನೆ ಮಾಲೀಕ ಮತ್ತು ಅವರ ಸ್ನೇಹಿತರ ಮೇಲೆ ಹಲ್ಲೆ ನಡೆಸಿ ಚಿನ್ನಾಭರಣ, 15 ಸಾವಿರ ರೂಪಾಯಿ ನಗದು ಸೇರಿದಂತೆ ಸುಮಾರು ರೂ 85 ಸಾವಿರ ಮೌಲ್ಯದ ವಸ್ತುಗಳನ್ನು ದರೋಡೆ ಮಾಡಿರುವ ಘಟನೆ ರಾಜರಾಜೇಶ್ವರಿನಗರ ಸಮೀಪದ ಕೆರೆಕೋಡಿ ಬಳಿ ನಡೆದಿದೆ.

ಈ ಸಂಬಂಧ ಸುರೇಶ್ ಎಂಬುವರು ದೂರು ಕೊಟ್ಟಿದ್ದಾರೆ. ಅವೆನ್ಯೂ ರಸ್ತೆಯ ಚಿನ್ನಾಭರಣ ಮಳಿಗೆಯೊಂದರಲ್ಲಿ ಮಾರಾಟ ಪ್ರತಿನಿಧಿಯಾಗಿ ಕೆಲಸ ಮಾಡುವ ಸುರೇಶ್ ನೈಸ್ ರಸ್ತೆ ಸಮೀಪದ ಕೆರೆಕೋಡಿ ಬಳಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾರೆ ಎಂದು ಪೊಲೀಸರು  ತಿಳಿಸಿದ್ದಾರೆ.

ಸುರೇಶ್, ಸ್ನೇಹಿತರಾದ ಕೇಶವ್ ಮತ್ತು ಸತೀಶ್ ಎಂಬುವರ ಜತೆ ಮನೆಯಲ್ಲಿ ರಾತ್ರಿ ಟಿ.ವಿ ನೋಡುತ್ತಾ ಕುಳಿತಿದ್ದರು. ರಾತ್ರಿ 10 ಗಂಟೆ ಸುಮಾರಿಗೆ ಅವರ ಮನೆಯ ಬಳಿ ಬಂದ ದುಷ್ಕರ್ಮಿಗಳು ಬಾಗಿಲು ಬಡಿದಿದ್ದಾರೆ.

ಸುರೇಶ್ ಬಾಗಿಲು ತೆರೆಯುತ್ತಿದ್ದಂತೆ ಏಕಾಏಕಿ ಒಳ ನುಗ್ಗಿದ ಏಳು ಮಂದಿ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಬೆದರಿಸಿ ಚಿನ್ನಾಭರಣ ಕೊಡುವಂತೆ ಕೇಳಿದ್ದಾರೆ. ಈ ವೇಳೆ ಪ್ರತಿರೋಧ ತೋರಿದ ಕೇಶವ್ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದಾರೆ. ಆ ಮೂವರ ಬಳಿ ಇದ್ದ ಚಿನ್ನದ ಎರಡು ಸರಗಳು, ಎರಡು ಉಂಗುರಗಳು, ಹಣ ಹಾಗೂ ಮೂರು ಮೊಬೈಲ್ ಫೋನ್‌ಗಳನ್ನು ಕಿತ್ತುಕೊಂಡಿದ್ದಾರೆ. ಬಳಿಕ ಅವರೆಲ್ಲರನ್ನು ಕೊಠಡಿಯೊಂದರಲ್ಲಿ ಕೂಡಿ ಹಾಕಿ ಪರಾರಿಯಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ರಾಜರಾಜೇಶ್ವರಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮತ್ತೊಂದು ಪ್ರಕರಣ: ಡ್ರಾಪ್ ತೆಗೆದುಕೊಳ್ಳುವ ನೆಪದಲ್ಲಿ ಕಾರಿಗೆ ಹತ್ತಿಕೊಂಡ ದುಷ್ಕರ್ಮಿಗಳು ಚಾಲಕನ ಮೇಲೆ ಹಲ್ಲೆ ನಡೆಸಿ ಕಾರು, ಒಂದು ಸಾವಿರ ನಗದು ಮತ್ತು ಮೊಬೈಲ್ ಫೋನ್ ದರೋಡೆ ಮಾಡಿರುವ ಘಟನೆ ನಾಯಂಡಹಳ್ಳಿ ಜಂಕ್ಷನ್ ಬಳಿ ನಡೆದಿದೆ.

ಭುವನೇಶ್ವರಿನಗರ ನಿವಾಸಿ ರಘುಕುಮಾರ್ ದರೋಡೆಗೆ ಒಳಗಾದವರು. ಅವರು ಸಾಫ್ಟ್‌ವೇರ್ ಕಂಪೆನಿಯೊಂದರ ಉದ್ಯೋಗಿಗಳನ್ನು ಡ್ರಾಪ್ ಮಾಡಿ ಮನೆಗೆ ಹೋಗುತ್ತಿದ್ದ ಸಂದರ್ಭದಲ್ಲಿ ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದಾರೆ.

 ನಾಯಂಡಹಳ್ಳಿ ಜಂಕ್ಷನ್ ಬಳಿ ನಿಂತಿದ್ದ ನಾಲ್ವರು ಅಪರಿಚಿತ ವ್ಯಕ್ತಿಗಳು ಡ್ರಾಪ್ ತೆಗೆದುಕೊಳ್ಳುವ ನೆಪದಲ್ಲಿ ರಘುಕುಮಾರ್ ಅವರ ವಾಹನಕ್ಕೆ ಹತ್ತಿಕೊಂಡಿದ್ದಾರೆ. ನಂತರ ಅವರನ್ನು ಜ್ಞಾನಭಾರತಿ ಒಳಗೆ ಕರೆದೊಯ್ದು ಕಣ್ಣಿಗೆ ಕಾರದ ಪುಡಿ ಎರಚಿ ಹಲ್ಲೆ ನಡೆಸಿದ್ದಾರೆ. ಬಳಿಕ ಹಣ ಮತ್ತು ಮೊಬೈಲ್ ಫೋನ್ ಕಿತ್ತುಕೊಂಡು ಹಲವೆಡೆ ಸುತ್ತಾಡಿಸಿದ್ದಾರೆ. ರಾತ್ರಿ ಒಂದು ಗಂಟೆ ಸುಮಾರಿಗೆ ಕೆಂಗೇರಿ ಬಳಿ ಬಂದ ದುಷ್ಕರ್ಮಿಗಳು ಅವರನ್ನು ವಾಹನದಿಂದ ಕೆಳಗೆ ತಳ್ಳಿ ಕಾರಿನೊಂದಿಗೆ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಕೆಂಗೇರಿ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.