ADVERTISEMENT

ಚಿನ್ನಾಭರಣ ಮಳಿಗೆಯಲ್ಲಿ ಕಳವು

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2013, 19:30 IST
Last Updated 3 ಸೆಪ್ಟೆಂಬರ್ 2013, 19:30 IST
ಮಲ್ಲೇಶ್ವರದ `ಸಂಪಿಗೆ ಜ್ಯುವೆಲರ್ಸ್‌' ಚಿನ್ನಾಭರಣ ಮಳಿಗೆಯಲ್ಲಿ ಕಳವು ನಡೆದಿರುವುದರಿಂದ ಬೆರಳಚ್ಚು ತಜ್ಞರು ಅಂಗಡಿಯಲ್ಲಿ ಮಂಗಳವಾರ ಪರಿಶೀಲನೆ ನಡೆಸಿದರು (ಎಡ ಚಿತ್ರ). ಕಳ್ಳರು ಮಳಿಗೆಯ ಹಿಂಭಾಗದ ಗೋಡೆಗೆ ಕನ್ನ ಕೊರೆದಿರುವುದು (ಬಲ ಚಿತ್ರ)	-ಪ್ರಜಾವಾಣಿ ಚಿತ್ರ
ಮಲ್ಲೇಶ್ವರದ `ಸಂಪಿಗೆ ಜ್ಯುವೆಲರ್ಸ್‌' ಚಿನ್ನಾಭರಣ ಮಳಿಗೆಯಲ್ಲಿ ಕಳವು ನಡೆದಿರುವುದರಿಂದ ಬೆರಳಚ್ಚು ತಜ್ಞರು ಅಂಗಡಿಯಲ್ಲಿ ಮಂಗಳವಾರ ಪರಿಶೀಲನೆ ನಡೆಸಿದರು (ಎಡ ಚಿತ್ರ). ಕಳ್ಳರು ಮಳಿಗೆಯ ಹಿಂಭಾಗದ ಗೋಡೆಗೆ ಕನ್ನ ಕೊರೆದಿರುವುದು (ಬಲ ಚಿತ್ರ) -ಪ್ರಜಾವಾಣಿ ಚಿತ್ರ   

ಬೆಂಗಳೂರು: ಮಲ್ಲೇಶ್ವರದ ಸಂಪಿಗೆ ರಸ್ತೆಯ ಹತ್ತನೇ ಅಡ್ಡರಸ್ತೆಯಲ್ಲಿರುವ `ಸಂಪಿಗೆ ಜ್ಯುವೆಲರ್ಸ್‌' ಚಿನ್ನಾಭರಣ ಮಳಿಗೆಯ ಗೋಡೆ ಕೊರೆದು ಒಳನುಗ್ಗಿದ ದುಷ್ಕರ್ಮಿಗಳು ಸುಮಾರು 20 ಕೆ.ಜಿ ಬೆಳ್ಳಿ ವಸ್ತುಗಳು ಮತ್ತು 100 ಗ್ರಾಂ ಚಿನ್ನಾಭರಣ ಕಳವು ಮಾಡಿದ್ದಾರೆ.

ಮಳಿಗೆಯ ಮಾಲೀಕ ಸುರೇಶ್, ಭಾನುವಾರ (ಸೆ.1) ರಾತ್ರಿ ವಹಿವಾಟು ಮುಗಿದ ಬಳಿಕ ಅಂಗಡಿಗೆ ಬೀಗ ಹಾಕಿಕೊಂಡು ಮನೆಗೆ ಹೋಗಿದ್ದರು. ನಂತರ ಅವರು ಸೋಮವಾರ ಮಳಿಗೆ ತೆರೆದಿರಲಿಲ್ಲ. ಮಂಗಳವಾರ ಬೆಳಿಗ್ಗೆ ಅವರು ಅಂಗಡಿಯ ಬಾಗಿಲು ತೆರೆದಾಗ ಕಳವು ನಡೆದಿರುವುದು ಗೊತ್ತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಳಿಗೆಯ ಹಿಂಭಾಗದ ಗೋಡೆ ಕೊರೆದು ಒಳನುಗ್ಗಿರುವ ಕಳ್ಳರು, ಕಪಾಟುಗಳಲ್ಲಿದ್ದ ಆಭರಣಗಳು ಹಾಗೂ ಬೆಳ್ಳಿ ವಸ್ತುಗಳನ್ನು ತೆಗೆದುಕೊಂಡು ಪರಾರಿಯಾಗಿದ್ದಾರೆ. ಅಂಗಡಿಯಲ್ಲಿ ಸಿ.ಸಿ ಟಿ.ವಿ ಕ್ಯಾಮೆರಾ ಅಳವಡಿಸಿರಲಿಲ್ಲ ಮತ್ತು ಭದ್ರತಾ ಸಿಬ್ಬಂದಿ ಸಹ ಇರಲಿಲ್ಲ. ಇದರಿಂದಾಗಿ ಆರೋಪಿಗಳ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

ಭದ್ರತೆ ದೃಷ್ಟಿಯಿಂದ ಅಂಗಡಿಯಲ್ಲಿ ಸಿ.ಸಿ ಕ್ಯಾಮೆರಾ ಅಳವಡಿಸುವಂತೆ ಸುರೇಶ್ ಅವರಿಗೆ ಮೂರು ತಿಂಗಳ ಹಿಂದೆಯೇ ಸೂಚನೆ ನೀಡಲಾಗಿತ್ತು. ಆದರೆ, ಅವರು ಅಂಗಡಿಯನ್ನು ನವೀಕರಣ ಮಾಡಿದ ನಂತರ ಕ್ಯಾಮೆರಾ ಅಳವಡಿಸುವುದಾಗಿ ಹೇಳಿದ್ದರು. ಮಳಿಗೆಯ ಹಿಂದೆ ಖಾಲಿ ಮೈದಾನವಿದೆ. ಆ ಭಾಗದಿಂದ ಮಳಿಗೆ ಬಳಿ ಬಂದಿರುವ ಕಳ್ಳರು, ವ್ಯಕ್ತಿಯೊಬ್ಬ ನುಸುಳುವಷ್ಟು ಗೋಡೆಗೆ ಕನ್ನ ಕೊರೆದಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಮಲ್ಲೇಶ್ವರ ಠಾಣೆಯಲ್ಲಿ ದೂರು ದಾಖಲಾಗಿದೆ.

ದೇವಸ್ಥಾನದಲ್ಲಿ ಕಳವು: ಕೆಂಪೇಗೌಡನಗರ ಸಮೀಪದ ಆರ್.ಕೆ.ಮಠ ಬಡಾವಣೆಯಲ್ಲಿರುವ ಶನೇಶ್ವರಸ್ವಾಮಿ ದೇವಸ್ಥಾನಕ್ಕೆ ನುಗ್ಗಿರುವ ದುಷ್ಕರ್ಮಿಯೊಬ್ಬ ಹುಂಡಿ ಒಡೆದು ಹಣ ಕಳವು ಮಾಡಿರುವ ಘಟನೆ ಸೋಮವಾರ ರಾತ್ರಿ ನಡೆದಿದೆ.

ರಾತ್ರಿ 1 ಗಂಟೆ ಸುಮಾರಿಗೆ ದೇವಸ್ಥಾನದ ಹಿಂಬಾಗಿಲ ಬೀಗ ಮುರಿದು ಒಳ ಬಂದಿರುವ ಕಳ್ಳ, ಗರ್ಭಗುಡಿ ಭಾಗದಲ್ಲಿದ್ದ ಎರಡು ಹುಂಡಿಗಳನ್ನು ಕಬ್ಬಿಣದ ಸಲಾಕೆಯಿಂದ ಜಖಂಗೊಳಿಸಿ ನೋಟುಗಳನ್ನು ಮಾತ್ರ ಕಳವು ಮಾಡಿದ್ದಾನೆ. ಹುಂಡಿಗಳಲ್ಲಿದ್ದ ನಾಣ್ಯಗಳನ್ನು ಆತ ತೆಗೆದುಕೊಂಡು ಹೋಗಿಲ್ಲ. ದೇವಸ್ಥಾನದ ಅರ್ಚಕರು ಮಂಗಳವಾರ ಬೆಳಿಗ್ಗೆ ದೇವಸ್ಥಾನಕ್ಕೆ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ ಎಂದು ಪೊಲೀಸರು ಹೇಳಿದ್ದಾರೆ.

ದೇವಸ್ಥಾನದ ಹಿಂಭಾಗದಲ್ಲಿ ಮತ್ತು ಗರ್ಭಗುಡಿಯಲ್ಲಿ ಅಳವಡಿಸಿರುವ ಸಿ.ಸಿ ಟಿ.ವಿ ಕ್ಯಾಮೆರಾಗಳಲ್ಲಿ ಆರೋಪಿಯ ದೃಶ್ಯ ಸೆರೆಯಾಗಿದೆ. ಆತನ ವಯಸ್ಸು ಸುಮಾರು 25 ವರ್ಷ. ಕಳವಾಗಿರುವ ಹಣದ ಬಗ್ಗೆ ಮಾಹಿತಿ ಸಿಕ್ಕಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಕೆಂಪೇಗೌಡನಗರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.