ADVERTISEMENT

ಚುರುಕಾಗದ ಕಾಮಗಾರಿ- ತಪ್ಪದ ಕಿರಿಕಿರಿ

​ಪ್ರಜಾವಾಣಿ ವಾರ್ತೆ
Published 16 ಜನವರಿ 2011, 7:30 IST
Last Updated 16 ಜನವರಿ 2011, 7:30 IST

ಬೆಂಗಳೂರು: ನಗರದ ಮೈಸೂರು ರಸ್ತೆಯಿಂದ ಮಾಗಡಿ ರಸ್ತೆಗೆ ಸಂಪರ್ಕ ಕಲ್ಪಿಸುವ ರೀಚ್- 2 ಮೆಟ್ರೊ ರೈಲು ಕಾಮಗಾರಿಯಿಂದ ಸ್ಥಳೀಯ ನಿವಾಸಿಗಳು ನಿತ್ಯ ಹತ್ತು ಹಲವು ಕಿರಿ ಕಿರಿ ಅನುಭವಿಸಬೇಕಾಗಿದೆ.ದೀಪಾಂಜಲಿನಗರ, ಹಂಪಿನಗರ, ವಿಜಯನಗರ ಸೇರಿದಂತೆ ಸುತ್ತಮುತ್ತಲಿನ ಅನೇಕ ಬಡ ವ್ಯಾಪಾರಿಗಳಲ್ಲಿ ಹತಾಶೆ, ದುಃಖ, ಆತಂಕ ಮೂಡಿಸಿದೆ. ಇನ್ನು ಕಾಮಗಾರಿಯ ಕಾರಣಕ್ಕಾಗಿ ಉಂಟಾಗುವ ಸದ್ದು- ಗದ್ದಲ, ಮಾಲಿನ್ಯ, ಅಪಘಾತಗಳಿಗೆ ಲೆಕ್ಕವೇ ಇಲ್ಲದಂತಾಗಿರುವುದು ಇಲ್ಲಿನ ನಿವಾಸಿಗಳನ್ನು ಕಂಗೆಡಿಸಿದೆ.

ಮಾಗಡಿರಸ್ತೆಯ ಟೋಲ್‌ಗೇಟ್ ಬಳಿಯಿಂದ ದೀಪಾಂಜಲಿ ನಗರದ ಮೈಸೂರು ರಸ್ತೆಯವರೆಗಿನ 6.2 ಕಿ.ಮೀ ಉದ್ದದ ರೀಚ್ 2 ಕಾಮಗಾರಿ ಆರಂಭವಾಗಿ ವರ್ಷವೇ ಕಳೆದಿದೆ. ವಿಜಯನಗರ 2ನೇ ಹಂತದ ರಸ್ತೆಯಿಂದ ಬಂಟರ ಸಂಘ ಕಟ್ಟಡದವರೆಗೆ ಸೇತುವೆ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ. ಆದರೆ ದೀಪಾಂಜಲಿನಗರ, ಅತ್ತಿಗುಪ್ಪೆ, ಚಂದ್ರಲೇಔಟ್ ಬಳಿ ಏರಿಳಿತವಿರುವ ರಸ್ತೆ ಸಣ್ಣಪುಟ್ಟ ತಿರುವುಗಳಿಂದ ಕೂಡಿದ್ದು ಇಲ್ಲಿ ಕಾಮಗಾರಿ ಚುರುಕಾಗಿ ನಡೆಯುತ್ತಿಲ್ಲ ಎನ್ನುವುದು ಸ್ಥಳೀಯ ನಿವಾಸಿಗಳ ಅಳಲು.

ಗೊಂದಲ: ದೀಪಾಂಜಲಿ ನಗರದ ವ್ಯಾಪಾರಿಗಳಿಗೆ ನೊಟೀಸ್ ನೀಡದೆಯೇ ಅಂಗಡಿಯನ್ನು ಕೆಲ ತಿಂಗಳ ಕಾಲ ಬಂದ್ ಮಾಡುವಂತೆ ಬಿಎಂಆರ್‌ಸಿಎಲ್ ಅಧಿಕಾರಿಗಳು ಸೂಚಿಸಿದ್ದಾರೆ. ಕಾಮಗಾರಿ ಕೆಲವೇ ತಿಂಗಳಲ್ಲಿ ಮುಕ್ತಾಯವಾಗುತ್ತದೆ ಎನ್ನುವ ಭರವಸೆ ಇಲ್ಲದಿರುವುದರಿಂದ ಇಲ್ಲಿನ ವ್ಯಾಪಾರಿಗಳು ಕಂಗಾಲಾಗಿದ್ದಾರೆ. ಅಲ್ಲದೇ ಅಂಗಡಿಗಳ ಎದುರೇ ನಿಲ್ದಾಣಕ್ಕಾಗಿ ಸ್ಥಂಭಗಳು ಏಳುವುದರಿಂದ ಶಾಶ್ವತವಾಗಿ ವ್ಯಾಪಾರ ಕುಸಿಯುವ ಆತಂಕದಲ್ಲಿದ್ದಾರೆ. ನಿರ್ದಿಷ್ಟವಾಗಿ ಅಧಿಕಾರಿಗಳು ಏನನ್ನೂ ತಿಳಿಸದೇ ಇರುವುದರಿಂದ ಯಾವಾಗ ಅಂಗಡಿಯನ್ನು ತೆರವುಗೊಳಿಸುತ್ತಾರೆ. ಯಾವ ಅಂಗಡಿ ಉಳಿಯುತ್ತದೆ ಎಂಬುದು ತಿಳಿಯದ ಗೊಂದಲಮಯ ವಾತಾವರಣ ನಿರ್ಮಾಣವಾಗಿದೆ.

‘ಅಂಗಡಿ ತೆರವುಗೊಳಿಸಬೇಕು ಎಂದು ಹೇಳುವ ಅಧಿಕಾರಿಗಳು ಪರಿಹಾರದ ಭರವಸೆ ನೀಡುತ್ತಿಲ್ಲ. ಕೆಲವು ಕಡೆ ಕೆಲವೇ ಸಾವಿರ ರೂಪಾಯಿ ಪರಿಹಾರ ನೀಡಿದ್ದಾರೆ, ಅಷ್ಟು ಹಣದಿಂದ ಏನೂ ಉಪಯೋಗವಿಲ್ಲ’ ಎನ್ನುತ್ತಾರೆ ಬೇಕರಿ ಉದ್ಯಮಿ ಸಂತೋಷ್ ಶೆಟ್ಟಿ.ಬ್ಯಾರಿಕೇಡ್‌ಗಳನ್ನು ನಿರ್ಮಿಸಿರುವುದರಿಂದ ರಸ್ತೆಯಲ್ಲಿ ಸಾರ್ವಜನಿಕರ ಓಡಾಟ ಗಣನೀಯವಾಗಿ ಕಡಿಮೆಯಾಗಿದೆ. ಹಿಂದೆ ದಿನಕ್ಕೆ ಎರಡು ಸಾವಿರ ರೂಪಾಯಿ ಆದಾಯ ಗಳಿಸುತ್ತಿದ್ದ ವ್ಯಾಪಾರಿಗಳು ಈಗ 300 ರೂಪಾಯಿ ಗಳಿಸುವುದು ಕೂಡ ಕಷ್ಟದ ಸಂಗತಿಯಾಗಿದೆ.

ತೂಗುಗತ್ತಿ: ಇತ್ತ ಕಟ್ಟಡ ಮಾಲೀಕರ ಮೇಲೆಯೂ ಸದಾ ಮೆಟ್ರೊ ತೂಗುಗತ್ತಿ ನೇತಾಡುತ್ತಲೇ ಇರುತ್ತದೆ. ಒಮ್ಮೆಲೇ ಕಟ್ಟಡವನ್ನು ಧ್ವಂಸಗೊಳಿಸದೆ ‘ಬೇಕಾದಾಗ ಬೇಕಾದಷ್ಟು’ ಒಡೆಯುವ ಪ್ರವೃತ್ತಿಯಿಂದಾಗಿ ಕೆಲ ಕಟ್ಟಡ ಮಾಲೀಕರು ಉಳಿದ ಭಾಗವನ್ನಾದರೂ ಮರು ನಿರ್ಮಿಸುವ ಧೈರ್ಯ ಮಾಡುತ್ತಿಲ್ಲ. ಅರ್ಧ ಒಡೆದ ಮನೆಯಲ್ಲಿಯೇ ಜೀವನ ಮಾಡುವ ಸ್ಥಿತಿಯಲ್ಲಿ ಅವರಿದ್ದಾರೆ.

ದೀಪಾಂಜಲಿ ನಗರದ ಒಂದೇ ಸಾಲಿನಲ್ಲಿರುವ ಎಂಟು ಕಟ್ಟಡಗಳ ಮಾಲೀಕರಿಗೆ ‘ಇವು ಅನಧಿಕೃತ ಕಟ್ಟಡಗಳು’ ಎಂದು ಹಣೆಪಟ್ಟಿ ಹಚ್ಚಿ ಅಧಿಕಾರಿಗಳು ಅವುಗಳನ್ನು ವಶಪಡಿಸಿಕೊಳ್ಳಲು ಯತ್ನಿಸಿ ವಿಫಲರಾಗಿದ್ದಾರೆ. ಮಾಲೀಕರ ಪರವಾಗಿ ಕೋರ್ಟ್ ತೀರ್ಪು ನೀಡಿದ್ದರಿಂದ ಬಿಎಂಆರ್‌ಸಿಎಲ್ ಸಂಧಾನ ಯತ್ನ ನಡೆಸುತ್ತಿದೆ ಎಂದು ತಿಳಿದು ಬಂದಿದೆ.

ಸದ್ದು, ಹೊಗೆ, ದೂಳು: ಪೀಕ್ ಅವರ್‌ಗಳಲ್ಲಿ ಗಂಟೆಗಟ್ಟಲೆ ನಿಲ್ಲುವ ವಾಹನಗಳಿಂದಾಗಿ ಹಾಗೂ ಕಾಮಗಾರಿಯಿಂದ ಏಳುವ ದೂಳಿನಿಂದಾಗಿ ಇಡೀ ಪ್ರದೇಶ ಮಾಲಿನ್ಯಮಯವಾಗಿದೆ. ವಾಹನಗಳೊಂದಿಗೆ ಹೊರಡುವ ಹೊಗೆಯಿಂದಾಗಿ ಬ್ಯಾರಿಕೇಡ್‌ಗಳು ಮಸಿಗಟ್ಟಿರುವುದನ್ನು ಸ್ಥಳೀಯರು ತೋರಿಸುತ್ತಾರೆ. ‘ಇಷ್ಟಾದರೂ ಮಾಲಿನ್ಯ ನಿಯಂತ್ರಣ ಮಂಡಳಿ ಏಕೆ ಮೂಕವಾಗಿದೆ?’ ಎಂದು ಪ್ರಶ್ನಿಸ್ತುತಾರೆ ಸಾಫ್ಟ್‌ವೇರ್ ಉದ್ಯೋಗಿ ರವಿಶಂಕರ್.ಮತ್ತೊಂದೆಡೆ ಕಾಮಗಾರಿಯಿಂದ ಉಂಟಾಗುವ ಶಬ್ದ ಮಾಲಿನ್ಯದ ಪ್ರಮಾಣ ಅಪಾರಮಟ್ಟದ್ದಾಗಿದೆ ಎಂದು ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಹೃದ್ರೋಗಿಗಳು, ವೃದ್ಧರು ತಿಳಿಸಿದರು. ರಾತ್ರಿ ವೇಳೆ ಮೆಟ್ರೊ ಕಾಮಗಾರಿ ನಡೆಯುವುದಕ್ಕೆ ಅನೇಕರು ಆಕ್ಷೇಪ ವ್ಯಕ್ತಪಡಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.