ADVERTISEMENT

ಛತ್ತೀಸ್‌ಗಡ ಸಚಿವರ ಪ್ರವಾಸ ರದ್ದು

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2013, 19:30 IST
Last Updated 8 ಏಪ್ರಿಲ್ 2013, 19:30 IST

ಬೆಂಗಳೂರು:  `ನ್ಯೂ ಇಂಟರ್‌ನ್ಯಾಷನಲ್ ಕ್ರಿಶ್ಚಿಯನ್ ಯುನಿರ್ವಸಿಟಿ'ಯಿಂದ ಗೌರವ ಡಾಕ್ಟರೇಟ್ ಪದವಿಯನ್ನು ಸ್ವೀಕರಿಸಲು ಸೋಮವಾರ ಬೆಂಗಳೂರಿಗೆ ಬರಬೇಕಿದ್ದ ಛತ್ತೀಸ್‌ಗಡ ಕೃಷಿ ಮತ್ತು ಕಾರ್ಮಿಕ ಸಚಿವ ಚಂದ್ರಶೇಖರ್ ಸಾಹು ಕೊನೆ ಕ್ಷಣದಲ್ಲಿ ಪ್ರವಾಸ ರದ್ದುಗೊಳಿಸಿದ್ದಾರೆ.

`ಅಕಾಡೆಮಿಕ್ ಆಫ್ ಯುನಿವರ್ಸಲ್ ಗ್ಲೋಬಲ್ ಪೀಸ್' (ಎಯುಜಿಪಿ) ಪರವಾಗಿ ಹಂಪಿನಗರ ಮೂಲದ `ನ್ಯೂ ಇಂಟರ್‌ನ್ಯಾಷನಲ್ ಕ್ರಿಶ್ಚಿಯನ್ ಯುನಿರ್ವಸಿಟಿ'ಯು ಸಚಿವ ಚಂದ್ರಶೇಖರ್ ಸಾಹು ಅವರ ಸಮಾಜಸೇವೆ ಮತ್ತು ರೈತ ಪರ ಕಾಳಜಿಗಾಗಿ ಡಾಕ್ಟರೇಟ್ ಪದವಿ ನೀಡುವುದಾಗಿ ಘೋಷಿಸಿತ್ತು. ಪ್ರಾರಂಭದಲ್ಲಿ ಡಾಕ್ಟರೇಟ್ ಸ್ವೀಕರಿಸಲು ಬೆಂಗಳೂರಿಗೆ ಆಗಮಿಸಲು ಅನಾರೋಗ್ಯ ಮತ್ತು ಸಮಯದ ಅಭಾವದಿಂದ ತಿರಸ್ಕರಿಸಿದ್ದ ಸಚಿವರು, ಕೊನೆ ಕ್ಷಣದಲ್ಲಿ ಒಪ್ಪಿದ್ದರು.

`ಎಯುಜಿಪಿ' ಮತ್ತು `ನ್ಯೂ ಇಂಟರ್‌ನ್ಯಾಷನಲ್ ಕ್ರಿಶ್ಚಿಯನ್ ಯುನಿರ್ವಸಿಟಿ' ವಿಶ್ವವಿದ್ಯಾಲಯ ಧನ ಸಹಾಯ ಆಯೋಗ (ಯುಜಿಸಿ) ಅಥವಾ ಯಾವುದೇ ಭಾರತೀಯ ಶಿಕ್ಷಣ ಸಂಸ್ಥೆಯಿಂದ ಮಾನ್ಯತೆ ಹೊಂದಿಲ್ಲದ ಬಗ್ಗೆ ಸೋಮವಾರ ವರದಿಯಾಗಿತ್ತು. ಈ ಬಗ್ಗೆ ಮಾಹಿತಿ ಪಡೆದ ಸಚಿವ ಚಂದ್ರಶೇಖರ್ ಸಾಹು ಅವರು ಕೊನೆ ಕ್ಷಣದಲ್ಲಿ ಪ್ರವಾಸವನ್ನು ರದ್ದುಗೊಳಿಸಿದ್ದಾರೆ.

ಬೆಂಗಳೂರಿನ ವಿಶ್ವವಿದ್ಯಾಲಯವೊಂದು ಸಚಿವರಿಗೆ ಗೌರವ ಡಾಕ್ಟರೇಟ್ ನೀಡುವ ಬಗ್ಗೆ ಪರಿಶೀಲನೆಗೆ ನಾಲ್ಕು ದಿನದ ಹಿಂದೆ ಛತ್ತೀಸ್‌ಗಡ ಸರ್ಕಾರ ನಾಲ್ಕು ಮಂದಿ ಅಧಿಕಾರಿಗಳ ತಂಡವನ್ನು ರಾಜ್ಯಕ್ಕೆ ಕಳುಹಿಸಿತ್ತು. ಅದರೆ ಆ ತಂಡದ ಸದಸ್ಯರು ಈ ಅವಕಾಶವನ್ನು ಮೈಸೂರಿನ ಪ್ರವಾಸಿ ತಾಣಗಳನ್ನು ಸುತ್ತಲು ಬಳಸಿಕೊಂಡಿದ್ದರು.

ಕಾನೂನು ಬಾಹಿರ ಡಾಕ್ಟರೇಟ್ ವಿಚಾರದ ವರದಿ ಪ್ರಕಟವಾಗುತ್ತಿದ್ದಂತೆ ಎಚ್ಚೆತ್ತ ಅಧಿಕಾರಿಗಳು ಸಚಿವರ ಕಚೇರಿಗೆ ವರದಿ ಕಳುಹಿಸಿದ್ದಾರೆ.  `ಕೃಷಿ ಮತ್ತು ಪೊಲೀಸ್ ಇಲಾಖೆಗೆ ಸೇರಿದ ನಾಲ್ಕು ಅಧಿಕಾರಿಗಳ ತಂಡವನ್ನು `ನ್ಯೂ ಇಂಟರ್‌ನ್ಯಾಷನಲ್ ಕ್ರಿಶ್ಚಿಯನ್ ಯುನಿರ್ವಸಿಟಿ'ಯ ಹಿನ್ನೆಲೆಯನ್ನು ತಿಳಿಯಲು ರಾಜ್ಯಕ್ಕೆ ಕಳುಹಿಸಲಾಗಿತ್ತು.

ಸೋಮವಾರ ಬೆಳಗ್ಗೆ ವರದಿಯನ್ನು ಕಳುಹಿಸಿದ್ದು, ಅದರ ಅನ್ವಯ ಪ್ರವಾಸವನ್ನು ಕೈಬಿಟ್ಟಿದ್ದೇನೆ' ಎಂದು ಸಚಿವ ಚಂದ್ರಶೇಖರ್ ಸಾಹು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.