ADVERTISEMENT

ಜನಗಣತಿ: ಅಂಗವಿಕಲರ ಮಾಹಿತಿಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2011, 18:30 IST
Last Updated 9 ಫೆಬ್ರುವರಿ 2011, 18:30 IST

ಬೆಂಗಳೂರು: ‘ರಾಜ್ಯದಲ್ಲಿ ಅಂಗವಿಕಲರ ಸಂಖ್ಯೆ ಎಷ್ಟು ಎಂಬುದನ್ನು ನಿಖರವಾಗಿ ತಿಳಿದುಕೊಳ್ಳಲು ಈ ಸಾಲಿನ ಜನಗಣತಿಯಲ್ಲಿ ಅಂಗವಿಕಲರು, ಅವರ ಪೋಷಕರು ಹಾಗೂ ಗಣತಿದಾರರು ಮಾಹಿತಿಯನ್ನು ಕಡ್ಡಾಯವಾಗಿ ಭರ್ತಿ ಮಾಡಿಸಬೇಕು’ ಎಂದು ಕರ್ನಾಟಕ ಅಂಗವಿಕಲರ ರಾಜ್ಯ ಒಕ್ಕೂಟ ಆಗ್ರಹಿಸಿದೆ.

ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಅಂಗ ಸಂಸ್ಥೆ ಕರ್ನಾಟಕ ರಾಜ್ಯ ಅಂಗವಿಕಲರ, ಪಾಲಕರ ಒಕ್ಕೂಟದ ಅಧ್ಯಕ್ಷ ಜಿ.ಎನ್.ನಾಗರಾಜ್, ‘ಕಳೆದ ಸಾರಿಯ ಜನಗಣತಿಯಲ್ಲಿ ವಾಸ್ತವ ಸಂಖ್ಯೆಗಿಂತ ಕಡಿಮೆ ಅಂಗವಿಕಲರು ರಾಜ್ಯದಲ್ಲಿದ್ದಾರೆ ಎಂದು ದಾಖಲಾಗಿದೆ. ಈ ತಪ್ಪು ಪುನರಾವರ್ತನೆಯಾಗದಂತೆ ತಡೆಯಲು ಜನಗಣತಿ ಅರ್ಜಿಯಲ್ಲಿರುವ 9ನೇ ಸಂಖ್ಯೆ ಪ್ರಶ್ನೆಯನ್ನು ಕಡ್ಡಾಯವಾಗಿ ತಿಳಿದುಕೊಂಡು ಬರೆಯಬೇಕು. ವೃದ್ಧರು, ಬುದ್ಧಿಮಾಂದ್ಯರು ಅಂಗವಿಕಲರ ವ್ಯಾಪ್ತಿಗೆ ಬಂದಿಲ್ಲ. ಅವರನ್ನೂ ಈ ವ್ಯಾಪ್ತಿಗೆ ಸೇರಿಸಬೇಕು’ ಎಂದರು.

ರಾಜ್ಯ ಜನಗಣತಿ ಒಕ್ಕೂಟದ ಮುಖಂಡ ರಮೇಶ್ ಮಾತನಾಡಿ, ‘ಸಾರಿಗೆ ಸಂಸ್ಥೆಯು ಅಂಗವಿಕಲರಿಗೆ ನೀಡಲಾಗುತ್ತಿರುವ ಬಸ್‌ಪಾಸ್ ದರವನ್ನು ರೂ 550ಕ್ಕೆ ಹೆಚ್ಚಿಸಿದೆ. ಈ ಮೊತ್ತವನ್ನು ಅಂಗವಿಕಲರು ಪಾವತಿಸುವುದು ಆಗುವುದಿಲ್ಲ. ಆದ್ದರಿಂದ ಮೊದಲಿದ್ದ ದರ ರೂ 375ನ್ನೇ ಮುಂದುವರೆಸಬೇಕು’ ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.