ADVERTISEMENT

‘ಜನರಿಗೆ ಗುಂಡಿ ಭಾಗ್ಯ, ಕಾಂಗ್ರೆಸ್‌ಗೆ ಹುಂಡಿ ಭಾಗ್ಯ’

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2017, 19:30 IST
Last Updated 11 ಅಕ್ಟೋಬರ್ 2017, 19:30 IST
ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರು ಪಾಲಿಕೆ ಕೇಂದ್ರ ಕಚೇರಿ ಎದುರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಣಕು ಶವಯಾತ್ರೆ ನಡೆಸಿದರು –ಪ್ರಜಾವಾಣಿ ಚಿತ್ರ
ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರು ಪಾಲಿಕೆ ಕೇಂದ್ರ ಕಚೇರಿ ಎದುರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಣಕು ಶವಯಾತ್ರೆ ನಡೆಸಿದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ನಗರದ ರಸ್ತೆ ಗುಂಡಿಗಳನ್ನು ಮುಚ್ಚುವಂತೆ ಒತ್ತಾಯಿಸಿ ಬಿಜೆಪಿ ನಾಯಕರು ಬಿಬಿಎಂಪಿ ಕೇಂದ್ರ ಕಚೇರಿಗೆ ಬುಧವಾರ ಮುತ್ತಿಗೆ ಹಾಕಿ ಪ್ರತಿಭಟಿಸಿದರು.

ಸಂಸದರಾದ ಪಿ.ಸಿ.ಮೋಹನ್‌, ಶೋಭಾ ಕರಂದ್ಲಾಜೆ, ಶಾಸಕರಾದ ಆರ್‌.ಅಶೋಕ, ಅರವಿಂದ ಲಿಂಬಾವಳಿ, ಡಾ. ಸಿ.ಎನ್‌. ಅಶ್ವತ್ಥನಾರಾಯಣ, ಸತೀಶ್‌ ರೆಡ್ಡಿ, ಎಸ್‌.ಮುನಿರಾಜು, ವೈ.ಎ.ನಾರಾಯಣಸ್ವಾಮಿ, ಎಸ್‌.ಆರ್‌.ವಿಶ್ವನಾಥ್‌, ಮುಖಂಡ ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಬಿಬಿಎಂಪಿ ವಿರೋಧ ಪಕ್ಷದ ನಾಯಕ ಪದ್ಮನಾಭ ರೆಡ್ಡಿ ಹಾಗೂ ಪಾಲಿಕೆಯ ಬಿಜೆಪಿ ಸದಸ್ಯರು ಸೇರಿ ನೂರಾರು ಕಾರ್ಯಕರ್ತರು ಮುತ್ತಿಗೆ ಹಾಕಿದರು. ಇದೇ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಣಕು ಶವಯಾತ್ರೆಯನ್ನೂ ನಡೆಸಿದರು.

‘ಜನಾದೇಶಕ್ಕೆ ಬ್ರೇಕ್‌ ಮಾಡಿ ಬಂದ್ರು, ಬೆಂಗಳೂರಿಗೆ ಗುಂಡಿ ಭಾಗ್ಯ ತಂದ್ರು’, ‘ಬೆಂಗಳೂರಿನ ರಸ್ತೆಗಳಿಗೆ ಗುಂಡಿ ಭಾಗ್ಯ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ’, ‘ಜನರಿಗೆ ಗುಂಡಿ ಭಾಗ್ಯ, ಕಾಂಗ್ರೆಸ್‌ಗೆ ಹುಂಡಿ ಭಾಗ್ಯ’, ‘ಗುಂಡಿಗಳಿಂದ ಬೀಳುತ್ತಿದೆ ಹೆಣ, ಗುತ್ತಿಗೆದಾರರ ಜೇಬಿಗೆ ಝಣ, ಝಣ’, ‘ಬಿಬಿಎಂಪಿ ಮುಚ್ಚಲಾಗಿದೆ, ಅಡಚಣೆಗಾಗಿ ಕ್ಷಮಿಸಿ– ಇಂತಿ ಸಿದ್ದರಾಮಯ್ಯ’ ಎಂಬ ಘೋಷಣೆಗಳ ಫಲಕಗಳನ್ನು ಹಿಡಿದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

‘ನಗರದ ರಸ್ತೆಗಳಲ್ಲಿ ಬಿದ್ದಿರುವ ಗುಂಡಿಗಳಿಗೆ ಎಂಟು ಮಂದಿ ಬಲಿಯಾಗಿದ್ದಾರೆ. ಕಾಂಗ್ರೆಸ್‌ ಸರ್ಕಾರ ತೋಡಿದ ಗುಂಡಿಗಳಿಂದ ಜನರು ಸಾಯುವಂತಾಗಿದೆ. ಬಿಬಿಎಂಪಿ ಮೈತ್ರಿ ಆಡಳಿತ ಹಾಗೂ ರಾಜ್ಯ ಸರ್ಕಾರದ ದುರಾಡಳಿತವೇ ಇದಕ್ಕೆ ಕಾರಣ. ಐ.ಟಿ, ಬಿ.ಟಿ ನಗರವು ಗುಂಡಿಗಳ ನಗರವಾಗಿ ಮಾರ್ಪಟ್ಟಿದೆ. ಬೈಕ್‌ ಸವಾರರು ಮನೆಗೆ ವಾಪಸ್‌ ಹೋಗುತ್ತಾರೆ ಎಂಬ ಗ್ಯಾರಂಟಿ ಇಲ್ಲ’ ಎಂದು ಆರ್‌.ಅಶೋಕ ದೂರಿದರು.

‘ರಸ್ತೆ ಅಭಿವೃದ್ಧಿ ಮತ್ತು ಗುಂಡಿ ಮುಚ್ಚಲು ₹4,500 ಕೋಟಿ ನೀಡಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳುತ್ತಿದ್ದಾರೆ. ಸಾರ್ವಜನಿಕರ ತೆರಿಗೆ ಹಣ ಎಲ್ಲಿ ಹೋಗಿದೆ. ಅದರ ಲೆಕ್ಕ ಕೊಡಬೇಕು’ ಎಂದು ಒತ್ತಾಯಿಸಿದರು.

‘ಮೈಸೂರು ರಸ್ತೆಯ ಬಾಲಗಂಗಾಧರನಾಥ ಸ್ವಾಮೀಜಿ ಮೇಲ್ಸೇತುವೆ, ಪಂತರಪಾಳ್ಯದಲ್ಲಿ ಸಂಭವಿಸಿದ ಅಪಘಾತಗಳಿಗೆ ಗುಂಡಿಗಳು ಕಾರಣವಲ್ಲ. ಹಿಂದಿನಿಂದ ಬಂದ ಬಸ್‌ ಹಾಗೂ ಲಾರಿ ಗುದ್ದಿ ಈ ಅವಘಡಗಳು ಸಂಭವಿಸಿವೆ ಎಂಬ ಬೇಜವಾಬ್ದಾರಿ ಹೇಳಿಕೆಗಳನ್ನು ಮೇಯರ್‌, ಬಿಬಿಎಂಪಿ ಆಯುಕ್ತರು ನೀಡಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಕಾಂಗ್ರೆಸ್‌ ಸರ್ಕಾರವು ಅಭಿವೃದ್ಧಿ ವಿಷಯದಲ್ಲಿ ಮಲತಾಯಿ ಧೋರಣೆ ಅನುಸರಿಸುತ್ತಿದೆ. ಪಾಲಿಕೆಯ ಬಿಜೆಪಿ ಸದಸ್ಯರ ಕ್ಷೇತ್ರಗಳಿಗೆ ನೀಡುವ ಅನುದಾನದಲ್ಲಿ ತಾರತಮ್ಯ ಮಾಡಲಾಗುತ್ತಿದೆ’ ಎಂದು ದೂರಿದರು.

ಈ ವೇಳೆ ಪಾಲಿಕೆಯ ಕೇಂದ್ರ ಕಚೇರಿ, ವಿವಿಧ ಕಚೇರಿಗಳಿಗೆ ಬೀಗ ಜಡಿದ ಪ್ರತಿಭಟನಾಕಾರರನ್ನು ಹಲಸೂರು ಗೇಟ್‌ ಪೊಲೀಸರು ವಶಕ್ಕೆ ಪಡೆದರು. ಬಳಿಕ ಬಿಡುಗಡೆ ಮಾಡಿದರು.

**

ಸಿಂಗಪುರ ಆಗಬೇಕಿದ್ದ ಬೆಂಗಳೂರನ್ನು ಗುಂಡಿ, ಕಸದ ನಗರವನ್ನಾಗಿ ಪರಿವರ್ತಿಸಿದ ಅಪಕೀರ್ತಿ ಬಿಬಿಎಂಪಿ ಮೈತ್ರಿ ಆಡಳಿತಕ್ಕೆ ಸಲ್ಲಬೇಕು. ಸಾರ್ವಜನಿಕರ ಶಾಪ ಸರ್ಕಾರ, ಬಿಬಿಎಂಪಿಗೆ ತಟ್ಟಲಿದೆ.
–ಶೋಭಾ ಕರಂದ್ಲಾಜೆ, ಸಂಸದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.