ADVERTISEMENT

ಜಯದೇವ ವೃತ್ತದ ಮೇಲ್ಸೇತುವೆ ನೆಲಸಮ ಸದ್ಯಕ್ಕಿಲ್ಲ

ಆರ್‌.ವಿ.ರಸ್ತೆ– ಬೊಮ್ಮಸಂದ್ರ ಮಾರ್ಗದ ‘ನಮ್ಮ ಮೆಟ್ರೊ’ ಕಾಮಗಾರಿ

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2018, 20:12 IST
Last Updated 28 ಮಾರ್ಚ್ 2018, 20:12 IST
ಜಯದೇವ ವೃತ್ತದ ಮೇಲ್ಸೇತುವೆ ನೆಲಸಮ ಸದ್ಯಕ್ಕಿಲ್ಲ
ಜಯದೇವ ವೃತ್ತದ ಮೇಲ್ಸೇತುವೆ ನೆಲಸಮ ಸದ್ಯಕ್ಕಿಲ್ಲ   

ಬೆಂಗಳೂರು: ‘ನಮ್ಮ ಮೆಟ್ರೊ’ ಎರಡನೇ ಹಂತದಲ್ಲಿ ಇಂಟರ್‌ಚೇಂಜ್‌ ಮೆಟ್ರೊ ನಿಲ್ದಾಣದ ಕಾಮಗಾರಿಯ ಸಲುವಾಗಿ ಜಯದೇವ ವೃತ್ತದ ಬಳಿಯ ಮೇಲ್ಸೇತುವೆ ಕೆಡಹುವುದನ್ನು ಬೆಂಗಳೂರು ಮೆಟ್ರೊ ರೈಲು ನಿಗಮವು (ಬಿಎಂಆರ್‌ಸಿಎಲ್‌) ಮುಂದೂಡಿದೆ.

ಆರ್‌.ವಿ.ರಸ್ತೆ ನಿಲ್ದಾಣ–ಬೊಮ್ಮಸಂದ್ರ ಮಾರ್ಗ ಹಾಗೂ ಗೊಟ್ಟಿಗೆರೆ–ನಾಗವಾರ ಮಾರ್ಗಗಳು ಈ ವೃತ್ತದ ಮೂಲಕವೇ ಹಾದುಹೋಗುತ್ತದೆ. ಇವೆರಡೂ ಎತ್ತರಿಸಿದ ಮಾರ್ಗಗಳು. ಎರಡು ಮೆಟ್ರೊ ಮಾರ್ಗಗಳು ಹಾಗೂ ಮೂರು ಗ್ರೇಡ್‌ ಸಪರೇಟರ್‌ಗಳನ್ನು ಒಳಗೊಂಡ ಐದು ಹಂತಗಳ ಸಂಚಾರ ವ್ಯವಸ್ಥೆ ಇಲ್ಲಿ ನಿರ್ಮಾಣವಾಗಲಿದೆ.

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (ಬಿಡಿಎ) ₹21 ಕೋಟಿ ವೆಚ್ಚದಲ್ಲಿ ಈ ಮೇಲ್ಸೇತುವೆ ನಿರ್ಮಿಸಿತ್ತು. 12 ವರ್ಷಗಳಷ್ಟು ಹಳೆಯ ಮೇಲ್ಸೇತುವೆಯನ್ನು ಈ ತಿಂಗಳ ಅಂತ್ಯದೊಳಗೆ ನೆಲಸಮ ಮಾಡಲು ನಿಗಮವು ನಿರ್ಧರಿಸಿತ್ತು. ಡೇರಿ ವೃತ್ತ–ಬನ್ನೇರುಘಟ್ಟ ರಸ್ತೆಯ ಕೆಳಸೇತುವೆಯನ್ನು ಹಾಗೆಯೇ ಉಳಿಸಿಕೊಳ್ಳಲು ಬಯಸಿತ್ತು.

ADVERTISEMENT

‘ಲಕ್ಷಾಂತರ ಮಂದಿ ಬಳಸುತ್ತಿರುವ ಈ ಮೇಲ್ಸೇತುವೆಯನ್ನು ಕೆಡವಿದ ಬಳಿಕ ಮುಂದಿನ ಕಾಮಗಾರಿ ಆರಂಭಿಸಲು ಗುತ್ತಿಗೆದಾರರು ಇನ್ನೂ ಸಿದ್ಧತೆ ಮಾಡಿಕೊಂಡಿಲ್ಲ. ತ್ವರಿತಗತಿಯಲ್ಲಿ ಈ ಕಾಮಗಾರಿ ಪೂರ್ಣಗೊಳಿಸಲು ಸಾಧ್ಯವಾಗದಿದ್ದರೆ ಸಾರ್ವಜನಿಕರಿಗೆ ಅನನುಕೂಲ ಉಂಟಾಗುತ್ತದೆ. ಹಾಗಾಗಿ ಸೇತುವೆಯನ್ನು ಸದ್ಯಕ್ಕೆ ನೆಲಸಮಗೊಳಿಸದಿರಲು ನಿರ್ಧರಿಸಿದ್ದೇವೆ’ ಎಂದು ಹೆಸರು ಹೇಳಲಿಚ್ಛಿಸದ ನಿಗಮದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

‘ಸೇತುವೆಯನ್ನು ಕೆಡವದೆಯೇ ನಡೆಸಬಹುದಾದ ಕೆಲಸವನ್ನು ಮೊದಲು ಕೈಗೆತ್ತಿಕೊಳ್ಳುವಂತೆ ಹಾಗೂ ಪೂರಕ ಕೆಲಸಗಳನ್ನು ಆದಷ್ಟು ಬೇಗ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಸೂಚಿಸಿದ್ದೇವೆ’ ಎಂದರು.

ಆರ್‌.ವಿ.ರಸ್ತೆ– ಬೊಮ್ಮಸಂದ್ರ (ರೀಚ್‌–5) ಮಾರ್ಗದ ಕಾಮಗಾರಿಯನ್ನು ಮೂರು ಪ್ಯಾಕೇಜ್‌ಗಳನ್ನಾಗಿ ವಿಂಗಡಿಸಿ ನಿಗಮವು ಗುತ್ತಿಗೆ ನೀಡಿತ್ತು. ಈ ಪೈಕಿ ಆರ್‌.ವಿ.ರಸ್ತೆ– ಎಚ್‌.ಎಸ್‌.ಆರ್‌ ಬಡಾವಣೆವರೆಗಿನ ಕಾಮಗಾರಿಯ ಗುತ್ತಿಗೆದಾರರು ರಸ್ತೆ ವಿಸ್ತರಣೆ ಕೆಲಸವನ್ನು ಇನ್ನೂ ಪೂರ್ಣಗೊಳಿಸಿಲ್ಲ.

‘ಮೇಲ್ಸೇತುವೆಯನ್ನು ನೆಲಸಮಗೊಳಿಸುವ ಮುನ್ನ ರಸ್ತೆ ವಿಸ್ತರಣೆ ಕಾರ್ಯ ಪೂರ್ಣಗೊಳಿಸಬೇಕಾಗುತ್ತದೆ. ಈ ರಸ್ತೆಯಲ್ಲಿ ಕಾಮಗಾರಿ ನಡೆಯುವಾಗ ಸಂಚಾರ ದಟ್ಟಣೆ ಉಂಟಾಗುವುದನ್ನು ತಡೆಯುವ ಸಲುವಾಗಿ ಮಾರೇನಹಳ್ಳಿ ರಸ್ತೆಯನ್ನು ಪರ್ಯಾಯವಾಗಿ ಬಳಸಿಕೊಳ್ಳಲು ನಿರ್ಧರಿಸಲಾಗಿದೆ’ ಎಂದು ಅಧಿಕಾರಿ ತಿಳಿಸಿದರು.

ರಾಜಕೀಯ ಒತ್ತಡ ಕಾರಣ
ಚುನಾವಣೆಗೆ ಮುನ್ನ ಜಯದೇವ ವೃತ್ತದ ಮೇಲ್ಸೇತುವೆಯನ್ನು ಕೆಡವದಂತೆ ರಾಜಕೀಯ ಒತ್ತಡವಿದೆ ಎಂದು ಬಿಎಂಆರ್‌ಸಿಎಲ್‌ ಮೂಲಗಳು ತಿಳಿಸಿವೆ.

‘ಸೇತುವೆಯನ್ನು ಕೆಡವಿ ಚುನಾವಣೆ ಸಂದರ್ಭದಲ್ಲಿ ಜನರಿಗೆ ಕಿರಿಕಿರಿ ಉಂಟು ಮಾಡುವುದು ಬೇಡ ಎಂದು ಹಿರಿಯ ರಾಜಕೀಯ ಮುಖಂಡರೊಬ್ಬರು ಸೂಚಿಸಿದ್ದಾರೆ’ ಎಂದು ಹೆಸರು ಹೇಳಲು ಇಚ್ಛಿಸದ ನಿಗಮದ ಅಧಿಕಾರಿಯೊಬ್ಬರು ತಿಳಿಸಿದರು. ಆದರೆ, ನಿಗಮದ ಇನ್ನೊಬ್ಬ ಹಿರಿಯ ಅಧಿಕಾರಿ ಇದನ್ನು ಅಲ್ಲಗಳೆದಿದ್ದು, ‘ಮೆಟ್ರೊ ಕಾಮಗಾರಿಗಳ ಪೈಕಿ ಈ ಇಂಟರ್‌ಚೇಂಜ್‌ ನಿಲ್ದಾಣದ ಕೆಲಸವು ಅತ್ಯಂತ ಕಠಿಣವಾದುದು’ ಎಂದು ತಿಳಿಸಿದರು.

ಮೇಲ್ಸೇತುವೆ ಕೆಡಹುವುದನ್ನು ಮುಂದೂಡಿದರೆ ಕಾಮಗಾರಿ ವಿಳಂಬವಾಗುವುದಿಲ್ಲವೇ ಎಂಬ ಪ್ರಶ್ನೆಗೆ, ‘ನಾವು ಈ ಕಾಮಗಾರಿಯ ಕಾರ್ಯಾದೇಶ ನೀಡಿ ಆಗಿದೆ. ನಿಗದಿತ ಗಡುವಿನೊಳಗೆ ಇದು ಪೂರ್ಣಗೊಳ್ಳಲಿದೆ’ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.