ADVERTISEMENT

ಜಯಶ್ರೀ ಕಚೇರಿಗೆ ಲೈಂಗಿಕ ಅಲ್ಪಸಂಖ್ಯಾತ ಕಾವೇರಿ

​ಪ್ರಜಾವಾಣಿ ವಾರ್ತೆ
Published 12 ಜುಲೈ 2012, 19:30 IST
Last Updated 12 ಜುಲೈ 2012, 19:30 IST
ಜಯಶ್ರೀ ಕಚೇರಿಗೆ ಲೈಂಗಿಕ ಅಲ್ಪಸಂಖ್ಯಾತ ಕಾವೇರಿ
ಜಯಶ್ರೀ ಕಚೇರಿಗೆ ಲೈಂಗಿಕ ಅಲ್ಪಸಂಖ್ಯಾತ ಕಾವೇರಿ   

ಬೆಂಗಳೂರು: ಹಿರಿಯ ರಂಗನಟಿ ಹಾಗೂ ರಾಜ್ಯಸಭಾ ಸದಸ್ಯೆ ಬಿ. ಜಯಶ್ರೀ ಅವರ ಕಚೇರಿಯಲ್ಲಿ `ಡಿ~ ದರ್ಜೆಯ ನೌಕರರನ್ನಾಗಿ ಲೈಂಗಿಕ ಅಲ್ಪಸಂಖ್ಯಾತರಾದ ಕಾವೇರಿ ಅವರನ್ನು ನೇಮಿಸಿಕೊಳ್ಳಲಾಗಿದೆ.

ಈ ಮೂಲಕ ಇವರು ರಾಜ್ಯದಲ್ಲಿ ಸರ್ಕಾರಿ ಕಚೇರಿಯಲ್ಲಿ ಉದ್ಯೋಗ ಪಡೆದ ಎರಡನೇ ಲೈಂಗಿಕ ಅಲ್ಪಸಂಖ್ಯಾತರು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.  ಸಿ. ಅನು ಎಂಬುವರನ್ನು ಸುಮಾರು ಆರು ತಿಂಗಳ ಹಿಂದೆ ಹೈಕೋರ್ಟ್‌ನಲ್ಲಿ `ಡಿ~ ದರ್ಜೆ ನೌಕರರನ್ನಾಗಿ ನೇಮಿಸಿಕೊಳ್ಳಲಾಗಿತ್ತು.

ಕಾವೇರಿ ಅವರ ಮೂಲ ಹೆಸರು ಸ್ಟ್ಯಾನಿ ಡಿಸೋಜ. ಜಯಶ್ರೀ ಅವರ ಕಚೇರಿಯಲ್ಲಿ ಜುಲೈ 1ರಿಂದ ಕಾರ್ಯನಿರ್ವಹಿಸುತ್ತಿದ್ದು, ಜುಲೈ 5ರಂದು ನೇಮಕದ ಅಧಿಕೃತ ಆದೇಶ ಹೊರಬಿದ್ದಿದೆ.

ಲೈಂಗಿಕ ಅಲ್ಪಸಂಖ್ಯಾತರ ಪರವಾಗಿ ನಿರಂತರ ಹೋರಾಟ ನಡೆಸುತ್ತಿರುವ ನಗರದ `ಸಮರ~ ಸಂಘಟನೆಯಲ್ಲಿ ಎಂಟು ವರ್ಷಗಳಿಂದ ಸಕ್ರಿಯ ಕಾರ್ಯಕರ್ತೆಯಾಗಿರುವ ಕಾವೇರಿ ಬಾಳಿನಲ್ಲಿ ಈಗ ಹೊಸ ಕನಸು ಚಿಗುರೊಡೆದಿದೆ. ಸಂಸದರ ಕಚೇರಿಯನ್ನು ಶುಚಿಯಾಗಿಡುವುದು, ಕಚೇರಿಗೆ ಬಂದವರನ್ನು ಸ್ವಾಗತಿಸಿ ವಿಚಾರಿಸುವುದು, ಸರ್ಕಾರಿ ಕಚೇರಿಗಳು ಹಾಗೂ ಹೈಕೋರ್ಟ್‌ಗಳಿಗೆ ತೆರಳುವುದು, ಬ್ಯಾಂಕ್‌ಗೆ ಹಣ ತುಂಬುವುದು, ಕಡತಗಳನ್ನು ಒಪ್ಪವಾಗಿಡುವುದು ಸೇರಿದಂತೆ ವಿವಿಧ ಬಗೆಯ ಕಾರ್ಯಗಳನ್ನು ಕಾವೇರಿ ನಿರ್ವಹಿಸುತ್ತಿದ್ದಾರೆ. 

ಉಡುಪಿ ಜಿಲ್ಲೆಯ ಬ್ರಹ್ಮಾವರದ ಪೇತ್ರಿ ಸಮೀಪದ ನೂಜಿನಬೈಲು ಗ್ರಾಮದ ಸಾಲೋಡರ್ ಡಿಸೋಜ ಹಾಗೂ ಕಾರ್ಮಿನ್ ಡಿಸೋಜ ಅವರು ಕಾವೇರಿಯ ಪೋಷಕರು. ಹೆತ್ತವರು ಕೃಷಿಕರು. ದಂಪತಿಗೆ ಕಾವೇರಿ, ಐದು ಜನ ಪುತ್ರರು ಹಾಗೂ ಮೂವರು ಪುತ್ರಿಯರು ಇದ್ದಾರೆ. ಎಂಟನೇ ತರಗತಿಯಲ್ಲಿ ಕಲಿಯುತ್ತಿದ್ದ ವೇಳೆ ಕಾವೇರಿ ಅವರಲ್ಲಿ ದೈಹಿಕ ಬದಲಾವಣೆ ಕಾಣಲಾರಂಭಿಸಿತು. ಊರಿನಲ್ಲೇ ಎಸ್ಸೆಸ್ಸೆಲ್ಸಿ ವರೆಗೆ ಶಾಲೆಗೆ ಹೋದರು. ವಿವಿಧ ಸಮಸ್ಯೆಗಳಿಂದಾಗಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಲಾಗಲಿಲ್ಲ. ಮೈಸೂರಿನಲ್ಲಿ ಸ್ವಲ್ಪ ಸಮಯ ಕಾಲ ಕಳೆದರು. ಹೊಸ ಬದುಕು ಅರಸಿ 2004ರಲ್ಲಿ ಬೆಂಗಳೂರಿಗೆ ಬಂದರು. ಸಮರ ಸಂಘಟನೆಗೆ ಸೇರಿಕೊಂಡು ಲೈಂಗಿಕ ಅಲ್ಪಸಂಖ್ಯಾತರ ಪರವಾದ ಹೋರಾಟದಲ್ಲಿ ತೊಡಗಿಕೊಂಡರು. 

`ಸಂಸದರ ಕಚೇರಿಯಲ್ಲಿ ನೌಕರಿಗಾಗಿ ಅರ್ಜಿ ಸಲ್ಲಿಸಿರಲಿಲ್ಲ. ಸಮರ ಸಂಘಟನೆಯ ಮುಖಂಡರಾದ ಅಕ್ಕೈ ಅವರು ತಿಳಿಸಿದ್ದರಿಂದ ಈ ಉದ್ಯೋಗಕ್ಕೆ ಸೇರಿದೆ. ರಾಜಕಾರಣಿಗಳ ಜೊತೆಗೆ ಕೆಲಸ ಮಾಡಬೇಕು ಎಂಬುದು ಬಾಲ್ಯದ ಕನಸಾಗಿತ್ತು. ಈಗ ಕನಸು ನನಸಾಗಿದೆ. ಕಚೇರಿಯ ಸಿಬ್ಬಂದಿ ಸಹ ಗೌರವದಿಂದ ನೋಡುತ್ತಾರೆ~ ಎಂದು ಕಾವೇರಿ `ಪ್ರಜಾವಾಣಿ~ಗೆ ಬುಧವಾರ ತಿಳಿಸಿದರು.

`ಲೈಂಗಿಕ ಅಲ್ಪಸಂಖ್ಯಾತರು ಶಾಲಾ ಕಾಲೇಜಿಗೆ ಸೇರಿದರೆ ಜನರು ಬಗೆ ಬಗೆಯ ತೊಂದರೆ ನೀಡಿ  ಕಲಿಕೆ ಮುಂದುವರಿಸಲು ಬಿಡುವುದಿಲ್ಲ. ಅವರನ್ನು ಜನರು ಯಾವಾಗಲೂ ಅನುಮಾನದಿಂದಲೇ ನೋಡುತ್ತಾರೆ ಹಾಗೂ ಹಿಂಸೆ ನೀಡುತ್ತಾರೆ. ಬಹು ಸಮಯದಿಂದ ಅವರಿಗೆ ಸಹಾಯ ಮಾಡಬೇಕು ಎಂಬ ತುಡಿತ ಇತ್ತು. ಆದರೆ ಅವಕಾಶ ಇರಲಿಲ್ಲ. ಬೆಂಗಳೂರಿನಲ್ಲಿರುವ ನನ್ನ ಕಚೇರಿಗೆ ಸಹಾಯಕರನ್ನು ನೇಮಿಸಿಕೊಳ್ಳುವ ಅಧಿಕಾರ ಇದ್ದುದರಿಂದ ಆ ಅವಕಾಶವನ್ನು ಬಳಸಿಕೊಂಡು ಕಾವೇರಿಗೆ ಉದ್ಯೋಗ ನೀಡಿದೆ. ಕಾವೇರಿ ಉತ್ತಮ ನಡವಳಿಕೆ ಇರುವವರು. ಶ್ರದ್ಧೆಯಿಂದ ಕೆಲಸ ಮಾಡುತ್ತಿದ್ದಾರೆ~ ಎಂದು ರಾಜ್ಯಸಭಾ ಸದಸ್ಯೆ ಬಿ.ಜಯಶ್ರೀ ಮೆಚ್ಚುಗೆ ವ್ಯಕ್ತಪಡಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.