ADVERTISEMENT

ಜಯಾ ವಿರುದ್ಧದ ಅಕ್ರಮ ಆಸ್ತಿ ವಿವಾದ: ಶಶಿಕಲಾ ಸಾಕ್ಷ್ಯ ದಾಖಲು

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2012, 19:30 IST
Last Updated 25 ಫೆಬ್ರುವರಿ 2012, 19:30 IST

ಬೆಂಗಳೂರು: ಅಕ್ರಮ ಆಸ್ತಿ ಗಳಿಕೆ ಆರೋಪಕ್ಕೆ ಸಿಲುಕಿರುವ ತಮಿಳುನಾಡಿನ ಮುಖ್ಯಮಂತ್ರಿ ಜಯಲಲಿತಾ ಅವರ ಆಪ್ತ ಸ್ನೇಹಿತೆಯಾಗಿದ್ದ ವಿ.ಕೆ.ಶಶಿಕಲಾ ಅವರು ಶನಿವಾರ ಸಿಬಿಐ ವಿಶೇಷ ಕೋರ್ಟ್‌ನಲ್ಲಿ 68 ಪ್ರಶ್ನೆಗಳಿಗೆ ಉತ್ತರಿಸಿದರು.

ಇವರಿಗೆ ಇಂಗ್ಲಿಷ್ ಭಾಷೆ ಗೊತ್ತಿಲ್ಲ. ಆದುದರಿಂದ ಇಂಗ್ಲಿಷ್ ಪ್ರಶ್ನೆಗಳನ್ನು ತಮಿಳಿಗೆ ತರ್ಜುಮೆ ಮಾಡಿ ಇವರಿಗೆ ವಕೀಲರು ಹೇಳುವುದು, ಅವರು ತಮಿಳಿನಲ್ಲಿ ನೀಡಿದ ಉತ್ತರಗಳನ್ನು ಇಂಗ್ಲಿಷ್‌ಗೆ ಭಾಷಾಂತರ ಮಾಡಿ ನ್ಯಾಯಾಧೀಶರಿಗೆ ಹೇಳುವ ಪ್ರಕ್ರಿಯೆ ಶನಿವಾರವೂ ಮುಂದುವರಿಯಿತು.

ಈ ಹಿನ್ನೆಲೆಯಲ್ಲಿ ಮೂರು ದಿನಗಳಲ್ಲಿ ಕೇವಲ 171 ಪ್ರಶ್ನೆಗಳಿಗೆ ಅವರು ಉತ್ತರಿಸಲು ಶಕ್ಯರಾಗಿದ್ದಾರೆ. ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಲಾಯಿತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇರುವ ಎಲ್ಲ ದಾಖಲೆಗಳನ್ನು ತಮಿಳಿಗೆ ತರ್ಜುಮೆ ಮಾಡಲು ಆದೇಶಿಸುವಂತೆ ಕೋರಿ ಶಶಿಕಲಾ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ. ಹೈಕೋರ್ಟ್ ಆದೇಶವನ್ನು ಅವರು ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಿದ್ದು, ಅದು ಇನ್ನೂ ಇತ್ಯರ್ಥಕ್ಕೆ ಬಾಕಿ ಇದೆ.

ಈ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್‌ನಿಂದ ತೀರ್ಪು ಹೊರ ಬೀಳುವವರೆಗೆ ಪ್ರಕರಣದ ವಿಚಾರಣೆಯನ್ನು ಮುಂದೂಡುವಂತೆ ಶಶಿಕಲಾ ಪರ ವಕೀಲರು ನ್ಯಾಯಾಧೀಶ ಬಿ.ಎಂ.ಮಲ್ಲಿಕಾರ್ಜುನ ಅವರಲ್ಲಿ ಕೋರಿಕೊಂಡರು.
ಆದರೆ ಈ ಕೋರಿಕೆಯನ್ನು ಸರ್ಕಾರದ ಪರ ವಕೀಲರು ವಿರೋಧಿಸಿದರು. `ಈ ಪ್ರಕರಣದ ವಿಚಾರಣೆಯನ್ನು ದಿನನಿತ್ಯದ ಆಧಾರದ ಮೇಲೆ ನಡೆಸುವಂತೆ ಸುಪ್ರೀಂಕೋರ್ಟ್ ಹೇಳಿದೆ. ಆದುದರಿಂದ ವಿಚಾರಣೆಯನ್ನು ಮುಂದೂಡುವುದು ಸರಿಯಲ್ಲ~ ಎಂದರು.

ಅಂತರಿಕ್ಷ್: 17ಕ್ಕೆ ವಿಚಾರಣೆ

ಪ್ಯಾರಿಸ್ ಅಂತರರಾಷ್ಟ್ರೀಯ ನ್ಯಾಯಾಲಯದಲ್ಲಿ ತನ್ನ ವಿರುದ್ಧ `ದೇವಾಸ್ ಮಲ್ಟಿ-ಮೀಡಿಯಾ ಸಂಸ್ಥೆ ~ ಸಲ್ಲಿಸಿರುವ ರಾಜಿ ಒಪ್ಪಂದ ಅರ್ಜಿಯ ವಿಚಾರಣೆಗೆ ತಡೆ ವಿಧಿಸುವಂತೆ ಕೋರಿ ನಗರ ಸಿವಿಲ್ ಕೋರ್ಟ್‌ನಲ್ಲಿ `ಅಂತರಿಕ್ಷ್ ಕಾರ್ಪೊರೇಷನ್~ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಮಾರ್ಚ್ 17ಕ್ಕೆ ಮುಂದೂಡಲಾಗಿದೆ.

ತನ್ನ ವಾದವನ್ನು ಸಮರ್ಥಿಸಿಕೊಳ್ಳುವ ಕುರಿತಾದ ಹೆಚ್ಚುವರಿ ದಾಖಲೆಗಳನ್ನು `ಅಂತರಿಕ್ಷ್~ ಶನಿವಾರ ಕೋರ್ಟ್‌ಗೆ ಒದಗಿಸಿತು. ಅಂತೆಯೇ ಇದರ ಪರ ವಕೀಲರು ತಮ್ಮ ವಾದ ಮುಗಿಸಿದರು. 17ರಂದು ದೇವಾಸ್ ಕಂಪೆನಿಯ ಪರ ವಕೀಲರು ವಾದಿಸಲಿದ್ದಾರೆ.

ಎಸ್-ಬ್ಯಾಂಡ್ ತರಂಗಾಂತರ ಹಂಚಿಕೆಗೆ ಸಂಬಂಧಿಸಿದಂತೆ ಅಂತರಿಕ್ಷ್ ಮತ್ತು ದೇವಾಸ್ ಮಲ್ಟಿ ಮೀಡಿಯಾ ಸಂಸ್ಥೆಗಳ ನಡುವೆ 2005ರ ಜ.28ರಂದು ನಡೆದಿರುವ ಒಪ್ಪಂದ ಹಿಂದಕ್ಕೆ ಪಡೆದಿರುವ ವಿವಾದ ಇದಾಗಿದೆ. ಈ ನಡುವೆ ಅಂತರಿಕ್ಷ್ ಸಂಸ್ಥೆಗೆ ತಿಳಿಸದೆ ಪ್ಯಾರಿಸ್ ಅಂತರರಾಷ್ಟ್ರೀಯ ನ್ಯಾಯಾಲಯದಲ್ಲಿ ದೇವಾಸ್ ಸಂಸ್ಥೆ ಅರ್ಜಿ ಸಲ್ಲಿಸಿದೆ. ಇದನ್ನು ಅಂತರಿಕ್ಷ್  ಸಿವಿಲ್ ಕೋರ್ಟ್‌ನಲ್ಲಿ ಪ್ರಶ್ನಿಸಿದೆ.

ತನಿಖೆ ಮುಂದುವರಿಕೆಗೆ ಅಸ್ತು

ಡಿನೋಟಿಫಿಕೇಷನ್ ಹಗರಣದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಜೊತೆಗೆ ಸಹ ಆರೋಪಿಯಾಗಿರುವ ಆರ್.ಸುಗುಣ ಅವರ ವಿರುದ್ಧ ಲೋಕಾಯುಕ್ತರು ನಡೆಸುತ್ತಿರುವ ತನಿಖೆಗೆ ಹೈಕೋರ್ಟ್ ಶನಿವಾರ ಹಸಿರು ನಿಶಾನೆ ತೋರಿದೆ.

ವಕೀಲ ಸಿರಾಜಿನ್ ಬಾಷಾ ದಾಖಲು ಮಾಡಿರುವ ಮೂರನೇ ದೂರಿನಲ್ಲಿ ಸುಗುಣ ಅವರೂ ಆರೋಪಿ.
ಎಚ್‌ಎಸ್‌ಆರ್ ಬಡಾವಣೆ, ನಾಗರಬಾವಿ ಮೊದಲನೇ ಹಂತದ ಬಡಾವಣೆಗಳಲ್ಲಿ ಅಕ್ರಮವಾಗಿ ಜಮೀನುಗಳನ್ನು ಸ್ವಾಧೀನ ಪ್ರಕ್ರಿಯೆಯಿಂದ ಕೈಬಿಟ್ಟಿರುವುದು, ಧವಳಗಿರಿ ಪ್ರಾಪರ್ಟಿ ಡೆವಲಪರ್ಸ್, ಭಗತ್ ಹೋಮ್ಸಗೆ ಲಾಭ ಮಾಡಿಕೊಡುವ ಉದ್ದೇಶದಿಂದ ಅಕ್ರಮ ಎಸಗಿರುವ ಆರೋಪ ಇದಾಗಿದೆ.

ಈ ಹಿನ್ನೆಲೆಯಲ್ಲಿ ಸುಗುಣ ಅವರ ವಿರುದ್ಧ ಲೋಕಾಯುಕ್ತ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಅದರ ರದ್ದತಿಗೆ ಕೋರ್ದ್ದಿದ ಅರ್ಜಿಯನ್ನು ನ್ಯಾಯಮೂರ್ತಿ ಎನ್. ಆನಂದ ವಜಾಗೊಳಿಸಿದರು.

ವಿಚಾರಣೆ ಮುಂದೂಡಿಕೆ
ಡಿನೋಟಿಫಿಕೇಷನ್ ಹಗರಣದಲ್ಲಿ ಸಿಲುಕಿರುವ ಸಚಿವ ಸೋಮಣ್ಣ ಹಾಗೂ ಅವರ ಪತ್ನಿ ಶೈಲಜಾ ವಿರುದ್ಧ ಸಲ್ಲಿಸಲಾಗಿರುವ ಅರ್ಜಿಯ ವಿಚಾರಣೆಯನ್ನು ಲೋಕಾಯುಕ್ತ ವಿಶೇಷ ಕೋರ್ಟ್ ಮಾರ್ಚ್ 17ಕ್ಕೆ ಮುಂದೂಡಿದೆ.

`ನಾಗದೇವನಹಳ್ಳಿ ಬಳಿಯ ಸರ್ವೆ ನಂ. 47 ಮತ್ತು 48ರಲ್ಲಿರುವ 3.40 ಎಕರೆ ಜಮೀನಿನನ್ನು ಸ್ವಾಧೀನ ಪ್ರಕ್ರಿಯೆಯಿಂದ ಕೈಬಿಟ್ಟಿರುವ ವಿವಾದದಲ್ಲಿ ದಂಪತಿ ಸಿಲುಕಿದ್ದಾರೆ. ಇವರ ವಿರುದ್ಧ ನಗರದ ರವಿಕೃಷ್ಣ ರೆಡ್ಡಿ ದೂರು ದಾಖಲು ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.