ADVERTISEMENT

ಜಾದು ಮೂಲಕ ವಿಜ್ಞಾನ ಸಿದ್ಧಾಂತ ಕಲಿಕೆ

‘ವಿಜ್ಞಾನ ಪ್ರಯೋಗಗಳ ಪ್ರದರ್ಶನ’ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 13 ಜೂನ್ 2017, 19:30 IST
Last Updated 13 ಜೂನ್ 2017, 19:30 IST
ವ್ಯಾಕ್ಯೂಮ್‌ ಕ್ಲೀನರ್‌ ಬಳಸಿಕೊಂಡು ಗುಂಡು ಹಾರಿಸುವುದು ಹೇಗೆ ಎಂಬುದನ್ನು ಗ್ರಾಮ್‌ ವಾಕರ್‌ (ಎಡಭಾಗದಲ್ಲಿರುವವರು) ವಿದ್ಯಾರ್ಥಿಗಳಿಂದ ಮಾಡಿಸಿದರು. ಸ್ಟುವರ್ಟ್ ಕೊಹ್ಲಾಗೆನ್‌ ಇದ್ದರು  –-ಪ್ರಜಾವಾಣಿ ಚಿತ್ರ
ವ್ಯಾಕ್ಯೂಮ್‌ ಕ್ಲೀನರ್‌ ಬಳಸಿಕೊಂಡು ಗುಂಡು ಹಾರಿಸುವುದು ಹೇಗೆ ಎಂಬುದನ್ನು ಗ್ರಾಮ್‌ ವಾಕರ್‌ (ಎಡಭಾಗದಲ್ಲಿರುವವರು) ವಿದ್ಯಾರ್ಥಿಗಳಿಂದ ಮಾಡಿಸಿದರು. ಸ್ಟುವರ್ಟ್ ಕೊಹ್ಲಾಗೆನ್‌ ಇದ್ದರು –-ಪ್ರಜಾವಾಣಿ ಚಿತ್ರ   

ಬೆಂಗಳೂರು: ವಿಜ್ಞಾನ ಹಾಗೂ ಗಣಿತದ ಪ್ರಯೋಗ, ಅದರಲ್ಲಿ ಅಡಗಿರುವ ತತ್ವ, ಸಿದ್ಧಾಂತಗಳನ್ನು ಕಲಾತ್ಮಕ ಹಾಗೂ ಹಾಸ್ಯದ ಮೂಲಕ ವಿವರಿಸಿದ ಆಸ್ಟ್ರೇಲಿಯ ವಿಜ್ಞಾನಿಗಳು ಇಲ್ಲೊಂದು ಜಾದು ಲೋಕವನ್ನೇ ಸೃಷ್ಟಿಸಿದ್ದರು.

ವಿಶ್ವೇಶ್ವರಯ್ಯ ಕೈಗಾರಿಕಾ ಮತ್ತು ತಾಂತ್ರಿಕಾ ವಸ್ತು ಸಂಗ್ರಹಾಲಯ, ಆಸ್ಟ್ರೇಲಿಯ ವಿದೇಶಾಂಗ ಸಚಿವಾಲಯದ ಸಹಯೋಗದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ‘ವಿಜ್ಞಾನ ಪ್ರಯೋಗಗಳ ಪ್ರದರ್ಶನ’ದಲ್ಲಿ ಇದು ಕಂಡುಬಂದಿತು. ಗ್ರಾಮ್‌ ವಾಕರ್‌ ಮತ್ತು ಸ್ಟುವರ್ಟ್ ಕೊಹ್ಲಾಗೆನ್‌ ಪ್ರದರ್ಶನ ನಡೆಸಿಕೊಟ್ಟರು.

ಮನೆಯಲ್ಲಿರುವ ಅಡುಗೆ ಸೋಡ ಮತ್ತು ವಿನೇಗರ್‌ ಬಳಸಿ ರಾಕೆಟ್‌  ತಯಾರಿಸುವುದು ಹೇಗೆ ಎಂಬ ಪ್ರಯೋಗ ಮಾಡಲಾಯಿತು.  ಪ್ರಯೋಗದ ಜತೆಗೆ ಅದರಲ್ಲಿ ಬಳಕೆಯಾದ ರಾಸಾಯನಿಕ ಕ್ರಿಯೆ ಬಗ್ಗೆಯೂ ವಿವರಿಸಿದರು. ವ್ಯಾಕ್ಯೂಮ್‌ ಕ್ಲೀನರ್‌ ಅನ್ನು ಪಿಸ್ತೂಲಿನ ರೂಪದಲ್ಲಿ ಬಳಸಬಹುದು ಎಂಬು ಪ್ರಯೋಗವೂ ಇಲ್ಲಿ ನಡೆಯಿತು.

ADVERTISEMENT

ಮೈನಸ್‌ 196 ಡಿಗ್ರಿ ಸೆಲ್ಸಿಯಸ್‌ನಲ್ಲಿರುವ ದ್ರವ ರೂಪದ ನೈಟ್ರೋಜನ್‌ ಅನ್ನು ಬಾಟಲಿವೊಂದಕ್ಕೆ ಸುರಿದು, ಅದಕ್ಕೆ ಬಲೂನ್‌ನಿಂದ ಮುಚ್ಚಿ, ಅದು ಹೇಗೆ ಊದಿಕೊಳ್ಳುತ್ತದೆ ಎಂಬ ಪ್ರಯೋಗ  ಮಾಡಿದರು. ಗಾಳಿ ತುಂಬಿ ಬಲೂನ್‌ ಒಡೆದಾಗ ಮಕ್ಕಳು ಕೂಗಿ ಸಂಭ್ರಮಿಸಿದರು.

ತಣ್ಣನೆಯ ನೈಟ್ರೋಜನ್‌ಗೆ ಬಿಸಿ ನೀರು ಸುರಿದು ಅಲ್ಲೊಂದು ಹೊಗೆಯ ಲೋಕವನ್ನೇ ಸೃಷ್ಟಿಸಿದ ಗ್ರಾಮ್‌ ಅದನ್ನು ಮಕ್ಕಳ ಬಳಿಗೆ ತೆಗೆದುಕೊಂಡು ಹೋದರು. ಹೊಗೆಯೊಳಗೆ ಕೈಯಾಡಿಸಿ ವಿದ್ಯಾರ್ಥಿಗಳು ಖುಷಿಪಟ್ಟರು.

ಸ್ಟುವರ್ಟ್‌ ಅವರು ಆಟ ಆಡಿಸುವ ಮೂಲಕ ಗಣಿತದ ಲೆಕ್ಕಗಳನ್ನು ಹೇಳಿಕೊಟ್ಟರು. ಏಕಕಾಲಿಕ ಗಣಕ (ಪ್ಯಾರೆಲೆಲ್ ಕಂಪ್ಯೂಟಿಂಗ್) ಬಗ್ಗೆ ವಿವರಿಸಿದ ಇವರು, ‘ದೊಡ್ಡ ಸಮಸ್ಯೆಗಳನ್ನು ಸಣ್ಣದಾಗಿ ವಿಭಾಗಿಸಿ ಪರಿಹರಿಸಿದರೆ ಕಡಿಮೆ ಸಮಯದಲ್ಲಿ ಉತ್ತರ ಸಿಗುತ್ತದೆ’ ಎಂಬುದನ್ನು ವಿದ್ಯಾರ್ಥಿಗಳಿಂದಲೇ ಪ್ರಯೋಗ ಮಾಡಿಸಿ ತಿಳಿಸಿಕೊಟ್ಟರು.

‘ಯಾವುದೇ ಪ್ರಶ್ನೆಯಾದರೂ ಅದರ ಸಮಸ್ಯೆ ಬಗೆಹರಿಸಲು ಸಾಧ್ಯವಾಗುತ್ತದೆಯೇ ಇಲ್ಲವೇ ಎಂಬುದನ್ನು ಮೊದಲು ನೋಡಬೇಕು. ಏಕೆಂದರೆ ಕೆಲವು ಗಣಿತದ ಸಮಸ್ಯೆಗಳನ್ನು ಬಗೆಹರಿಸಲು ಆಗುವುದಿಲ್ಲ. ಆ ಸಂದರ್ಭದಲ್ಲಿ ನಿಯಮಗಳ ಬಗ್ಗೆ ತಲೆಕೆಡಿಸಿಕೊಂಡರೆ ಅದಕ್ಕೆ ಉತ್ತರವೇ ದೊರೆಯುವುದಿಲ್ಲ’ ಎಂದು ಹೇಳಿದರು.

ಕುತೂಹಲಭರಿತ ವಿಷಯಗಳನ್ನು ಹಾಸ್ಯಮಯವಾಗಿ, ಜಾದು ತೋರಿಸುವ ರೀತಿಯಲ್ಲಿ ವಿವರಿಸುತ್ತಿದ್ದರೆ, ಇತ್ತ ಶಾಲಾ ವಿದ್ಯಾರ್ಥಿಗಳು ನಗುತ್ತಾ, ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸುತ್ತಾ ಮುಂದಿನ ಪ್ರಯೋಗಗಳಿಗಾಗಿ ಉತ್ಸಾಹದಲ್ಲಿ ಕಾದು ಕುಳಿತಿದ್ದರು.

ಇದೇ ಮೊದಲ ಬಾರಿಗೆ ನಗರಕ್ಕೆ ಬಂದಿದ್ದ ಗ್ರಾಮ್‌ ವಾಕರ್‌ ಮತ್ತು ಸ್ಟುವರ್ಟ್ ಕೊಹ್ಲಾಗೆನ್‌ ವಿದ್ಯಾರ್ಥಿಗಳ ಉತ್ಸಾಹ ಮತ್ತು ಪ್ರತಿಕ್ರಿಯೆ ಕಂಡು ಸಂತೋಷಪಟ್ಟರು. ದೇಶದಲ್ಲಿ ಒಟ್ಟು 9 ನಗರಗಳಲ್ಲಿ ಇವರ ಪ್ರದರ್ಶನ ನಡೆಯಲಿದೆ.

ಸುಮಾರು 17 ವರ್ಷಗಳಿಂದ ವಿಶ್ವದ ನಾನಾ ಭಾಗಗಳಲ್ಲಿ ಈ ಪ್ರದರ್ಶನ ನೀಡಿರುವ ಗ್ರಾಮ್‌ ವಾಕರ್‌, ‘ಮಕ್ಕಳಿಗೆ ವಿಜ್ಞಾನ ವಿಷಯ ಸುಲಭವಾಗಿ ಅರ್ಥವಾಗಬೇಕು. ಕ್ಲಿಷ್ಟ ಎಂದು ಅಂದುಕೊಳ್ಳದೆ ಕುತೂಹಲದಿಂದ ಓದುವಂತೆ ಮಾಡುವುದಕ್ಕಾಗಿ ಇದನ್ನು ಪ್ರಾರಂಭಿಸಲಾಯಿತು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.