ADVERTISEMENT

ಜಾನಪದಕ್ಕೆ ಲಿಂಗಯ್ಯ ಮಹತ್ವದ ಕೊಡುಗೆ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2012, 18:30 IST
Last Updated 3 ಅಕ್ಟೋಬರ್ 2012, 18:30 IST
ಜಾನಪದಕ್ಕೆ ಲಿಂಗಯ್ಯ ಮಹತ್ವದ ಕೊಡುಗೆ
ಜಾನಪದಕ್ಕೆ ಲಿಂಗಯ್ಯ ಮಹತ್ವದ ಕೊಡುಗೆ   

ಬೆಂಗಳೂರು: `ಕನ್ನಡ ಜಾನಪದ ಸಂಶೋಧನಾ ಕ್ಷೇತ್ರಕ್ಕೆ ಮಹತ್ವದ ಕೊಡುಗೆ ನೀಡಿದ ಧೀಮಂತ ಜಾನಪದ ತಜ್ಞ ಪ್ರೊ.ಡಿ.ಲಿಂಗಯ್ಯ~ ಎಂದು ಲೇಖಕ ಡಾ.ಚಕ್ಕೆರೆ ಶಿವಶಂಕರ್ ಹೇಳಿದರು.

ಬಿಎಂಶ್ರೀ ಸ್ಮಾರಕ ಪ್ರತಿಷ್ಠಾನವು ನಗರದಲ್ಲಿ ಬುಧವಾರ ಆಯೋಜಿಸಿದ್ದ `ಪ್ರೊ.ಡಿ.ಲಿಂಗಯ್ಯನವರ ಬದುಕು - ಬರಹ~ ಕುರಿತ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

`ಸಮಗ್ರ ಸಂಶೋಧನೆ ಇಲ್ಲದೇ ಜಾನಪದ ಅಧ್ಯಯನ ನಡೆಸುವವರು ಪ್ರಸ್ತುತ ದಿನಗಳಲ್ಲಿ ಹೆಚ್ಚಾಗಿದ್ದಾರೆ. ಆದರೆ, ಲಿಂಗಯ್ಯ ಅವರಿಗೆ ಸಂಶೋಧನೆಯ ಹಿನ್ನೆಲೆಯಿತ್ತು. ತಾವು ಸಂಗ್ರಹಿಸುವ ಪಠ್ಯದ ಬಗ್ಗೆ ಅವರು ಮೊದಲೇ ವಿಶ್ಲೇಷಣೆ ನಡೆಸಿ ನಂತರ ಸಂಗ್ರಹ ಕಾರ್ಯ ಕೈಗೊಳ್ಳುತ್ತಿದ್ದರು. ನಿರಂತರ ಅಧ್ಯಯನದಿಂದ ಅವರ ಜ್ಞಾನ ವಿಸ್ತಾರವಾಗಿತ್ತು~ ಎಂದು ಅವರು ನುಡಿದರು.

`ಲಿಂಗಯ್ಯ ಅವರು ಕೇವಲ ಕಾಟಾಚಾರಕ್ಕಾಗಿ ಜಾನಪದ ಸಂಶೋಧನೆ ನಡೆಸಿದವರಲ್ಲ. ಅವರ ಸಂಶೋಧನೆ ಪಾಂಡಿತ್ಯ ಪೂರ್ಣವಾಗಿತ್ತು. ಮೌಲಿಕವಾದ ಅವರ ಸಂಗ್ರಹ ಕಾರ್ಯ ಹೊಸ ಸಂಶೋಧಕರಿಗೆ ಮಾದರಿಯಾಗಿದೆ. ಅವರು ಸಂಪಾದಿಸಿದ `ಬಯಲು ಸೇಮೆಯ ಜನಪದ ಗೀತೆಗಳು~ ಕೃತಿ ಇಂಗ್ಲಿಷ್ ಭಾಷೆಗೆ ಅನುವಾದಗೊಳ್ಳುವ ಮೂಲಕ ಕನ್ನಡ ಜನಪದ ಗೀತೆಗಳು ವಿಶ್ವಕ್ಕೆ ಪರಿಚಯವಾದವು~ ಎಂದರು.

ಲೇಖಕ ಡಾ.ಎಂ.ಎ.ಜಯಚಂದ್ರ ಮಾತನಾಡಿ, `ವಿದ್ಯಾರ್ಥಿದೆಸೆಯಿಂದಲೂ ಲಿಂಗಯ್ಯ ಅವರು ಜಾನಪದ ಸಂಶೋಧನೆಯ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದರು. ಅವರು ತಮ್ಮ ಅನಾರೋಗ್ಯವನ್ನೂ ಲೆಕ್ಕಿಸದೇ ಸಂಶೋಧನಾ ಕಾರ್ಯದಲ್ಲಿ ತೊಡಗುತ್ತಿದ್ದರು. ಅನಾರೋಗ್ಯ ಅವರ ಕಾರ್ಯಕ್ಕೆ ಎಂದೂ ತೊಡಕಾಗಿರಲಿಲ್ಲ. ಕೊನೆಗೆ ಹಾಸಿಗೆ ಹಿಡಿಯದೆ, ಕಾರ್ಯಕ್ರಮದ ವೇದಿಕೆಯಲ್ಲೇ ಕುಸಿದು ಪ್ರಾಣ ಬಿಟ್ಟರು~ ಎಂದು ಅವರು ಹೇಳಿದರು.

ನಿವೃತ್ತ ಇಂಗ್ಲಿಷ್ ಪ್ರಾಧ್ಯಾಪಕ ಪ್ರೊ.ಎಚ್.ಶೇಷಗಿರಿರಾವ್ ಮತನಾಡಿ, `ಲಿಂಗಯ್ಯ ಅವರ ಕ್ಷೇತ್ರ ಕಾರ್ಯ ಅನೇಕರಿಗೆ ಸ್ಫೂರ್ತಿಯಾಗಿದೆ. ಸಂಶೋಧನಾ ಕ್ಷೇತ್ರದೊಂದಿಗೆ ನಿರಂತರ ಬರವಣಿಗೆಯನ್ನು ಅವರು ಕಾಯ್ದುಕೊಂಡಿದ್ದರು~ ಎಂದರು. ಲೇಖಕ ಪ್ರೊ.ಜಿ.ಅಶ್ವತ್ಥನಾರಾಯಣ ಮಾತನಾಡಿ, `ಲಿಂಗಯ್ಯ ಅವರ ಆಧುನಿಕ ವಚನಗಳಲ್ಲಿ ಕೆಲವು ಲೋಪಗಳಿದ್ದರೂ ಅವು ಮೌಲ್ಯ ಹೊಂದಿವೆ~ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.