ADVERTISEMENT

ಜಾನಪದ ಕಲೆ ಉಳಿಸಲು ಸಚಿವೆ ಸಲಹೆ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2011, 19:30 IST
Last Updated 3 ಮಾರ್ಚ್ 2011, 19:30 IST

ರಾಜರಾಜೇಶ್ವರಿನಗರ: ‘ಕಲೆ, ಸಂಸ್ಕೃತಿ, ಸಾಹಿತ್ಯದ ಮೂಲ ಬೇರು ಜಾನಪದ. ಅದನ್ನು ಉಳಿಸಿ ಮುಂದಿನ ಯುವಪೀಳಿಗೆಗೆ ನೀಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ’ ಎಂದು ಸಚಿವಶೋಭಾ ಕರಂದ್ಲಾಜೆ ಅಭಿಪ್ರಾಯಪಟ್ಟರು. ಬೆಂಗಳೂರು ದಕ್ಷಿಣ ತಾಲ್ಲೂಕು ಕೆ,ಗೊಲ್ಲಹಳ್ಳಿಯಲ್ಲಿ ರಂಗಜಂಗಮ ಕಲಾನಿಕೇತನ ಟ್ರಸ್ಟ್‌ನವರು ಆಯೋಜಿಸಿದ್ದ ರಂಗಜಂಗಮ ಸಂಸ್ಕೃತಿ ಹಬ್ಬದ ಮುಕ್ತಾಯ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಗ್ರಾಮೀಣರ ಜೀವನದ ಕಷ್ಟವನ್ನು ಹಾಡುಗಳ ಮೂಲಕ ಬಣ್ಣಿಸುತ್ತಲೇ ಕೇಳುಗರಿಗೆ ಸಂತೋಷವನ್ನುಂಟು ಮಾಡುವುದು ಜಾನಪದ ಕಲೆಗಳ ವೈಶಿಷ್ಟ್ಯವಾಗಿದೆ. ಅಂತಹ ಕಲೆಯನ್ನು ಉಳಿಸುವ ಕಾರ್ಯದಲ್ಲಿ ಮೇಕಪ್ ಕೃಷ್ಣ ಮುಂದಾಗಿರುವುದು ಶ್ಲಾಘನೀಯ ಕೆಲಸವಾಗಿದೆ’ ಎಂದು ಅವರು ಹೇಳಿದರು. ಬಾಲ್ಯದಲ್ಲಿಯೇ ಮಕ್ಕಳಿಗೆ ಜಾನಪದ ಕಲೆಗಳನ್ನು ಪರಿಚಯಿಸುವ ಮೂಲಕ ಅದರ ಮಹತ್ವದ ಅರಿವನ್ನು ಮೂಡಿಸುವ ಕೆಲಸವನ್ನು ಸರ್ಕಾರ ಮತ್ತು ಸಂಘ ಸಂಸ್ಥೆಗಳು ಸಂಸ್ಕೃತಿ ಹಬ್ಬದ ಮೂಲಕ ಜಾರಿಗೆ ತರಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.ನಾಡಿನ ಹಿರಿಯ ಜಾನಪದ ಗಾಯಕ ಡಾ.ಬಾನಂದೂರು ಕೆಂಪಯ್ಯ ಮಾತನಾಡಿದರು. ವಿಧಾನ ಪರಿಷತ್ತಿನ ಸದಸ್ಯ ಡಾ.ದೊಡ್ಡರಂಗೇಗೌಡ, ನಗರ ಜಿ.ಪಂ. ಸದಸ್ಯ ಎ.ಶಿವಕುಮಾರ್ ಮೊದಲಾದವರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.