ADVERTISEMENT

ಜಿ.ಪದ್ಮಾವತಿ ಸೇರಿದಂತೆ ನಾಲ್ವರ ವಿರುದ್ಧ ಎಫ್‌ಐಆರ್‌

₹3.40 ಕೋಟಿ ಪಡೆದು ವಂಚಿಸಿದ್ದ ಪ್ರಕರಣ

​ಪ್ರಜಾವಾಣಿ ವಾರ್ತೆ
Published 3 ಮೇ 2018, 20:02 IST
Last Updated 3 ಮೇ 2018, 20:02 IST

ಬೆಂಗಳೂರು: ಕಟ್ಟಡವೊಂದನ್ನು ಮಾರಾಟ ಮಾಡುವುದಾಗಿ ಹೇಳಿ ₹3.40 ಕೋಟಿ ಪಡೆದು ವಂಚನೆ ಮಾಡಿದ್ದ ಆರೋಪದಡಿ ರಾಜಾಜಿನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಜಿ. ಪದ್ಮಾವತಿ ಸೇರಿದಂತೆ ನಾಲ್ವರ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.

ವಂಚನೆ ಬಗ್ಗೆ ರಾಜಾಜಿನಗರದ ನಾಲ್ಕನೇ ಹಂತದ ನಿವಾಸಿ ಎನ್‌.ಸಂಪತ್‌ಕುಮಾರ್‌ ಎಂಬುವರು 9ನೇ ಎಸಿಎಂಎಂ ನ್ಯಾಯಾಲಯದಲ್ಲಿ ಖಾಸಗಿ ಮೊಕದ್ದಮೆಯನ್ನು ಹೂಡಿದ್ದರು.

ವಿಚಾರಣೆ ನಡೆಸಿದ್ದ ನ್ಯಾಯಾಲಯ, ಆರೋಪಿಗಳ ವಿರುದ್ಧ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ನಡೆಸುವಂತೆ ಇತ್ತೀಚೆಗಷ್ಟೇ ಆದೇಶ ಹೊರಡಿಸಿತ್ತು.

ADVERTISEMENT

‘ಈ ಆದೇಶದ ಅನ್ವಯ ಆರ್‌.ಜಯಪಾಲ್‌, ಎನ್‌.ಸಂತೋಷ್, ಗಜಾನನ್ ಮರಾಠೆ ಎಂಬುವರ ವಿರುದ್ಧ ಕೂಡ ಎಫ್‌ಐಆರ್‌ ದಾಖಲಿಸಿಕೊಳ್ಳಲಾಗಿದೆ’ ಎಂದು ರಾಜಾಜಿನಗರ ಪೊಲೀಸರು ತಿಳಿಸಿದರು.

‘ಪದ್ಮಾವತಿ ಅವರು ಪ್ರಕರಣದ ಮೂರನೇ ಆರೋಪಿ ಆಗಿದ್ದಾರೆ’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

’ದುರುದ್ದೇಶದಿಂದ ಪ್ರಕರಣ ದಾಖಲು’

ಎಫ್‌ಐಆರ್ ಬಗ್ಗೆ ‘ಪ್ರಜಾವಾಣಿ’ ಜತೆ ಮಾತನಾಡಿದ ಪದ್ಮಾವತಿ, ‘ಇದು ಸಿವಿಲ್ ವಿಷಯ. ಈ ಬಗ್ಗೆ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ಈಗ, ಕ್ರಿಮಿನಲ್‌ ಪ್ರಕರಣದಡಿ ಎಫ್‌ಐಆರ್‌ ದಾಖಲಿಸಿರುವುದು ದುರುದ್ದೇಶದಿಂದ ಕೂಡಿದೆ’ ಎಂದರು.

‘ನನಗೆ ತೊಂದರೆ ಕೊಡುವುದಕ್ಕಾಗಿಯೇ ಈ ರೀತಿ ಮಾಡಲಾಗುತ್ತಿದೆ. ಈ ಬಗ್ಗೆ ನಾನು ಪೊಲೀಸರಿಗೆ ದುರುದ್ದೇಶದಿಂದ ಮಾಹಿತಿ ನೀಡಿದ್ದೇನೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.