ADVERTISEMENT

ಜೂನ್‌ನಿಂದ ನೀರು ಪೂರೈಕೆ: ಸಚಿವ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2012, 19:45 IST
Last Updated 7 ಫೆಬ್ರುವರಿ 2012, 19:45 IST

ಬೆಂಗಳೂರು: ಕಾವೇರಿ ನಾಲ್ಕನೇ ಹಂತ ಎರಡನೇ ಘಟ್ಟದ ಯೋಜನೆ ಏಪ್ರಿಲ್ 30ರ ಒಳಗೆ ಪೂರ್ಣಗೊಳ್ಳಲಿದ್ದು, ಜೂನ್‌ನಿಂದ ನೀರು ಪೂರೈಕೆಯಾಗಲಿದೆ ಎಂದು ಬೆಂಗಳೂರು ಜಲಮಂಡಳಿ ಸಚಿವ ಎಸ್.ಸುರೇಶ್‌ಕುಮಾರ್ ಮಂಗಳವಾರ ವಿಧಾನ ಸಭೆಯಲ್ಲಿ ತಿಳಿಸಿದರು.

ಕಾಂಗ್ರೆಸ್ ಶಾಸಕ ನೆ.ಲ.ನರೇಂದ್ರಬಾಬು ಪ್ರಶ್ನೆಗೆ ಉತ್ತರಿಸಿದ ಅವರು, ಮಹಾಲಕ್ಷ್ಮಿ ಲೇಔಟ್ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ವಾರಕ್ಕೊಮ್ಮೆ ಕುಡಿಯುವ ನೀರು ಪೂರೈಕೆಯಾಗುತ್ತಿರುವುದು ನಿಜ. ಆದಷ್ಟು ಬೇಗ ಸಮಸ್ಯೆ ಬಗೆಹರಿಸಿ ಎರಡು ದಿನಕ್ಕೊಮ್ಮೆ ನೀರು ಪೂರೈಸಲು ಕ್ರಮಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ತಿಪ್ಪಗೊಂಡನಹಳ್ಳಿ ಜಲಾಶಯಕ್ಕೆ ಸ್ವಲ್ಪಮಟ್ಟಿಗೆ ಕಲುಷಿತ ನೀರು ಸೇರುತ್ತಿದೆ. ಜಲಾನಯನ ಪ್ರದೇಶವು 1450 ಚದರ ಕಿ.ಮೀ. ಇದ್ದು, ಈ ಪ್ರದೇಶದಲ್ಲಿ ರುವ ಅನಧಿಕೃತ ಲೇಔಟ್‌ಗಳನ್ನು ತೆರವುಗೊಳಿಸಲಾಗುವುದು ಎಂದು ತಿಳಿಸಿದರು.

ಕಾಂಗ್ರೆಸ್ ಸದಸ್ಯ ಕೆ.ಜೆ.ಜಾರ್ಜ್, `ನನ್ನ ಕ್ಷೇತ್ರದಲ್ಲೂ ಕುಡಿಯುವ ನೀರಿಲ್ಲ. ಕೂಡಲೇ ಖಾಸಗಿ ಟ್ಯಾಂಕರ್‌ಗಳ ಮೂಲಕ ನೀರಿನ ಪೂರೈಕೆಗೆ ವ್ಯವಸ್ಥೆ ಮಾಡಬೇಕು~ ಎಂದು ಆಗ್ರಹಿಸಿದರು. ಜಲಮಂಡಳಿಗೆ ಹೆಚ್ಚಿನ ಅನುದಾನ ನೀಡಿ ಎಂದು ಎನ್.ಎ.ಹ್ಯಾರಿಸ್ ಮಾಡಿದ ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ, ಈ ಬಗ್ಗೆ ಪರಿಶೀಲಿಸಲಾಗುವುದು ಎಂದು ಭರವಸೆ ನೀಡಿದರು.

ನೆಂಟರ ಮನೆಯಲ್ಲಿ ಸ್ನಾನ...
`ಕಳೆದ 15 ವರ್ಷಗಳಿಂದ ಮಹಾಲಕ್ಷ್ಮಿ ಲೇಔಟ್‌ನಲ್ಲಿ ವಾಸ ಮಾಡುತ್ತಿರುವ ನನಗೂ ಕುಡಿಯುವ ನೀರಿನ ಸಮಸ್ಯೆಯ ಬಿಸಿ ತಟ್ಟಿದೆ. ಬೆಳಿಗ್ಗೆ ಎದ್ದು ನೆಂಟರ ಮನೆಗೆ ಹೋಗಿ ಸ್ನಾನ ಮಾಡುವ ಸ್ಥಿತಿಗೆ ತಲುಪಿದ್ದೇವೆ. ಕೊಟ್ಟ ಮಾತಿನಂತೆ ಎರಡು ದಿನಕ್ಕೊಮ್ಮೆ ನೀರು ಪೂರೈಕೆ ಮಾಡಿ~ ಎಂದು ಬೇಲೂರು ಶಾಸಕ ರುದ್ರೇಶ್‌ಗೌಡ ಮನವಿ ಮಾಡಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT