ADVERTISEMENT

ಜೂನ್ ವೇಳೆಗೆ ಕಾಮಗಾರಿ ಪೂರ್ಣ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2012, 19:30 IST
Last Updated 9 ಮಾರ್ಚ್ 2012, 19:30 IST

ಹಲಗೂರು (ಮಂಡ್ಯ): ಬೆಂಗಳೂರು ನಗರಕ್ಕೆ ಕುಡಿಯುವ ನೀರು ಪೂರೈಕೆ ಉ್ದ್ದದೇಶದ ಕಾವೇರಿ 4ನೇ ಹಂತದ 2ನೇ ಘಟ್ಟದ ಕುಡಿಯುವ ನೀರಿನ ಯೋಜನೆ ಕಾಮಗಾರಿಯು ಅಂತಿಮ ಹಂತದಲ್ಲಿದ್ದು, ಇದೇ ವರ್ಷದ ಜೂನ್ ವೇಳೆಗೆ ಪೂರ್ಣವಾಗಲಿದೆ ಎಂದು ನಗರಾಭಿವೃದ್ಧಿ ಸಚಿವ  ಸುರೇಶಕುಮಾರ್ ಭರವಸೆ ನೀಡಿದರು.

ಮಾರ್ಚ್ ವೇಳೆಗೆ ನೀರು ಸರಬರಾಜು ಕಾರ್ಯಕ್ಕೆ ಚಾಲನೆ ನೀಡುವ ಯೋಜನೆ ಇತ್ತು. ಆದರೆ ಕಾರ್ಮಿಕರ ಕೊರತೆ, ಮರಳು ಪೂರೈಕೆ ವ್ಯತ್ಯಯದಿಂದಾಗಿ ವಿಳಂಬವಾಗಿದೆ. ಪೈಪ್‌ಲೈನ್ ಕೆಲಸ ಬಹುತೇಕ ಮುಗಿದಿದೆ. ಮೆಟ್ರೊ ಯೋಜನೆಯಷ್ಟೇ ಪ್ರಮುಖವಾದ ಈ ಯೋಜನೆಗೆ ಕಾರ್ಮಿಕರ ಕೊರತೆ ಹೆಚ್ಚಿದೆ ಎಂದು ಅಭಿಪ್ರಾಯಪಟ್ಟರು.

ಅಧಿಕಾರಿಗಳ ಜತೆ ಸಮಾಲೋಚಿಸಿದ್ದು, ಜೂನ್ ತಿಂಗಳಿನಲ್ಲಿ ನೀರು ಸರಬರಾಜು ಮಾಡಲು ಕ್ರಮ ಕೈಗೊಳ್ಳಲಾಗಿದೆ. ಬೇಸಿಗೆ ನೀರಿನ ಕೊರತೆ ನೀಗಲು ಬಿಬಿಎಂಪಿ ಸಹಕಾರದಲ್ಲಿ ಟ್ಯಾಂಕರ್‌ನಲ್ಲಿ ನೀರು ಸರಬರಾಜು ಮಾಡಲು ವ್ಯವಸ್ಥೆ ಮಾಡಲಾಗಿದೆ. ನೀರು ಪೂರೈಕೆ ಸಮಸ್ಯೆ ನಿರ್ವಹಣೆಗೆ 27 ಮಂದಿ ವಿಶೇಷ ಅಧಿಕಾರಿಗಳನ್ನು ನೇಮಿಸಲಾಗಿದೆ ಎಂದರು.

ಬೇಸಿಗೆಯಲ್ಲಿ ನೀರು ಮಾರಾಟ ದಂಧೆ ತಡೆಯಲು ಖಾಸಗಿ ಟ್ಯಾಂಕರ್ ಮಾಲೀಕರನ್ನು ನಿಯಂತ್ರಿಸಲಾಗುವುದು. ಹೆಚ್ಚಿನ ದರ ನಿಗದಿಪಡಿಸಿ ಲಾಬಿ ನಡೆಸುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಕಾಮಗಾರಿ ಪರಿಶೀಲನೆ ವೇಳೆ ವಿಳಂಬ ಪ್ರಗತಿಗಾಗಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಹಂಗಾಮಿ ನೌಕರರ ಅಹವಾಲು ಸ್ವೀಕರಿಸಿ, ಕ್ರಮ ಕೈಗೊಳ್ಳುವುದಾಗಿ  ಸಚಿವರು ಭರವಸೆ ನೀಡಿದರು.

ಬೆಂಗಳೂರಿನಲ್ಲಿ ಜಲಮಂಡಳಿ ಎಂಜಿನಿಯರ್, ನೌಕರನ ಮೇಲೆ ನಡೆದ ಹಲ್ಲೆ ಖಂಡಿಸಿ ಸ್ಥಳೀಯ ನೌಕರರು ಕಪ್ಪುಪಟ್ಟಿ ಧರಿಸಿ ಕರ್ತವ್ಯ ನಿರ್ವಹಿಸಿದರು.ಬೆಂಗಳೂರು ಜಲಮಂಡಳಿ ಅಧ್ಯಕ್ಷ ಗೌರವ್ ಗುಪ್ತಾ, ಮುಖ್ಯ ಎಂಜಿನಿಯರ್ ನಾರಾಯಣ, ಕಾರ್ಯಪಾಲಕ ಎಂಜಿನಿಯರ್‌ಗಳಾದ ಕೆ.ನಾಗರಾಜು, ಎನ್.ಎಸ್. ಜಯರಾಂ, ಐಯಾನ್. ಪಿ. ಟೇಲರ್, ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಎ.ರಾಜಶೇಖರ್, ಕೆ.ಲಕ್ಷ್ಮಿಕಾಂತ್ ಜತೆಯಲ್ಲಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.