ADVERTISEMENT

ಜೆಡಿಎಸ್ ವಿಶ್ವಾಸದ್ರೋಹಿ:ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2012, 22:00 IST
Last Updated 8 ಡಿಸೆಂಬರ್ 2012, 22:00 IST

ಬೆಂಗಳೂರು: `ಅಧಿಕಾರ ಗಳಿಸುವುದಕ್ಕಾಗಿ ಬಿಜೆಪಿ ಜೊತೆ ಸೇರಿದ ಜೆಡಿಎಸ್ ವಿಶ್ವಾಸದ್ರೋಹಿ ಪಕ್ಷ' ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ಇಲ್ಲಿನ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಶನಿವಾರ ಆಯೋಜಿಸಿದ್ದ `ಕಾಂಗ್ರೆಸ್‌ಗೆ ಬನ್ನಿ, ಬದಲಾವಣೆ ತನ್ನಿ' ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, `ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ 80 ಸ್ಥಾನಗಳು ಲಭಿಸಿದ್ದವು. ಜೆಡಿಎಸ್ ಜೊತೆ ಸೇರಿದ್ದರೆ ಸರ್ಕಾರ ರಚಿಸಬಹುದಿತ್ತು. ಆದರೆ ಆ ಪಕ್ಷ ವಿಶ್ವಾಸದ್ರೋಹಿ ಎಂಬ ಕಾರಣಕ್ಕೆ, ಅದರ ಜೊತೆ ನಾವು ಸಖ್ಯ ಬೆಳೆಸಲಿಲ್ಲ' ಎಂದು ಹೇಳಿದರು.

ತ್ಯಾಜ್ಯ ನಿರ್ವಹಣೆಯಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವಿಫಲವಾಗಿರುವ ಕುರಿತು ಪ್ರತಿಕ್ರಿಯೆ ನೀಡಿದ ಅವರು, `ಗಾರ್ಡನ್ ಸಿಟಿ (ಉದ್ಯಾನ ನಗರ) ಆಗಿದ್ದ ಬೆಂಗಳೂರು ಈಗ ಗಾರ್ಬೇಜ್ ಸಿಟಿಯಾಗಿ (ತ್ಯಾಜ್ಯದ ನಗರ) ಪರಿವರ್ತನೆಯಾಗಿದೆ. ಜನ ಬೀದಿಗಳಲ್ಲಿ ಮೂಗು ಮುಚ್ಚಿಕೊಂಡು ನಡೆದಾಡುವಂಥ ಸ್ಥಿತಿ ನಿರ್ಮಾಣವಾಗಿದೆ. ಲೂಟಿಕೋರರಂತಿರುವ ಬಿಜೆಪಿಯವರು ಮತ್ತೆ ಅಧಿಕಾರಕ್ಕೆ ಬರಲು ಬಿಡಬಾರದು' ಎಂದು ಹೇಳಿದರು.

ಕೆಪಿಸಿಸಿ ಮಾಜಿ ಅಧ್ಯಕ್ಷ ಆರ್.ವಿ. ದೇಶಪಾಂಡೆ ಮಾತನಾಡಿ, `ರಾಜ್ಯದಲ್ಲಿ ಹೊಸ ಕೈಗಾರಿಕೆಗಳು ಸ್ಥಾಪನೆ ಆಗುತ್ತಿಲ್ಲ. ಆದರೆ ಜಮೀನು ಲೂಟಿ ನಿಂತಿಲ್ಲ. ಬಿಜೆಪಿ ಸರ್ಕಾರ ರಾಜ್ಯದೆಲ್ಲೆಡೆ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಸುಳ್ಳು ಕ್ರಿಮಿನಲ್ ಮೊಕದ್ದಮೆ ದಾಖಲಿಸುತ್ತಿದೆ' ಎಂದು ದೂರಿದರು.

ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಜೆಡಿಎಸ್‌ನ ನಡವಳಿಕೆಯೇ ಕಾರಣ. ಜೆಡಿಎಸ್‌ಗೆ ಕರಾವಳಿ, ಉತ್ತರ ಕರ್ನಾಟಕ ಭಾಗದಲ್ಲಿ ನೆಲೆ ಇಲ್ಲ. ಎಲ್ಲ ಸಮುದಾಯಗಳ ಪ್ರಾತಿನಿಧ್ಯ ಜೆಡಿಎಸ್‌ನಲ್ಲಿ ಇಲ್ಲ ಎಂದು ಟೀಕಿಸಿದರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ನೀಡಿದ್ದ ಆಶ್ವಾಸನೆಗಳ ಪೈಕಿ, ಬಿಜೆಪಿ ಸರ್ಕಾರ ಯಾವುದನ್ನೂ ಪೂರೈಸಿಲ್ಲ ಎಂದು ಕಾಂಗ್ರೆಸ್ ಮುಖಂಡ ವಿ.ಎಸ್. ಉಗ್ರಪ್ಪ ಲೇವಡಿ ಮಾಡಿದರು.

ಕೆಪಿಸಿಸಿ ಬೆಂಗಳೂರು ಮಹಾನಗರ ಜಿಲ್ಲಾ ಘಟಕದ ಅಧ್ಯಕ್ಷ ದಿನೇಶ್ ಗುಂಡೂರಾವ್, ನಗರ ಘಟಕದ ಅಧ್ಯಕ್ಷ ಎಸ್.ಟಿ. ಸೋಮಶೇಖರ್, ಶಾಸಕ ರಾಮಲಿಂಗಾ ರೆಡ್ಡಿ ಮತ್ತಿತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.