ಬೆಂಗಳೂರು: ನಗರದ ಅರಮನೆ ಮೈದಾನದಲ್ಲಿ ಇದೇ 23ರಂದು ಸ್ವಾಭಿಮಾನಿ, ಸಮಾನತೆ ಸಮಾವೇಶ ಏರ್ಪಡಿಸಲಾಗಿದೆ ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡ ತಿಳಿಸಿದರು.
ಇದೇ 15ರಂದು ಪಕ್ಷದ ಕಚೇರಿಯಲ್ಲಿ ಧಾರ್ಮಿಕ ವಿಧಿ ನೆರವೇರಿಸಲಾಗಿದೆ. ಅಧಿಕೃತ ಉದ್ಘಾಟನೆ ಮತ್ತು ಜಯಪ್ರಕಾಶ ನಾರಾಯಣ ಭವನ ಎಂಬ ನಾಮಕರಣ 23ರಂದು ನಡೆಯಲಿದೆ. ಅದೇ ದಿನ ಅರಮನೆ ಮೈದಾನದಲ್ಲಿ ನಡೆಯುವ ಸಮಾವೇಶದಲ್ಲಿ ಒಂದು ಲಕ್ಷ ಕಾರ್ಯಕರ್ತರು ಭಾಗವಹಿಸುವ ನಿರೀಕ್ಷೆ ಇದೆ ಎಂದು ಮಂಗಳವಾರ ಮಾಧ್ಯಮಗೋಷ್ಠಿಯಲ್ಲಿ ಹೇಳಿದರು.
ಪಕ್ಷದ ಕಚೇರಿ ಉದ್ಘಾಟನೆಗೆ ಬಿಜೆಪಿ ನಾಯಕ ಎಲ್.ಕೆ. ಅಡ್ವಾಣಿ ಅವರನ್ನು ಆಹ್ವಾನಿಸುವ ಅಪೇಕ್ಷೆ ಇತ್ತು. ರಾಷ್ಟ್ರಪತಿ ಹುದ್ದೆಗೆ ಅವರ ಹೆಸರು ಚರ್ಚೆಯಲ್ಲಿದೆ. ಅವರ ಭವಿಷ್ಯಕ್ಕೆ ತೊಂದರೆ ಆಗಬಾರದೆಂಬ ಕಾರಣಕ್ಕೆ ಆಹ್ವಾನ ನೀಡಲಿಲ್ಲ ಎಂದು ಹೇಳಿದರು.
‘ವಿಧಾನಸಭಾಧ್ಯಕ್ಷ ಕೆ.ಬಿ. ಕೋಳಿವಾಡ ಅವರು ಸಚಿವಾಲಯದ ನೌಕರರ ಸಹಕಾರ ಸಂಘದಿಂದ ನಿವೇಶನ ಪಡೆದಿರುವ ಬಗ್ಗೆ ನಾನು ಪ್ರತಿಕ್ರಿಯಿಸುವುದಿಲ್ಲ’ ಎಂದು ದೇವೇಗೌಡ ಹೇಳಿದರು.