ADVERTISEMENT

ಜೈನ್ ಕಾಲೇಜ್ ಸೀಟು ಹೆಚ್ಚಳಕ್ಕೆ ನಕಾರ

​ಪ್ರಜಾವಾಣಿ ವಾರ್ತೆ
Published 3 ಜೂನ್ 2013, 19:59 IST
Last Updated 3 ಜೂನ್ 2013, 19:59 IST

ಬೆಂಗಳೂರು: ಜಯನಗರದ ಜೈನ್ ಕಾಲೇಜಿನಲ್ಲಿ (ಹಗಲು ಕಾಲೇಜು) ಹೊಸ ಸಂಯೋಜನೆ, ಕೋರ್ಸ್ ಹಾಗೂ ಸೀಟ್ ಹೆಚ್ಚಳಕ್ಕೆ ಅನುಮತಿ ನೀಡಬಾರದೆಂಬ ನಿರ್ಣಯ ಸೇರಿದಂತೆ 10 ಸ್ಥಳೀಯ ಪರಿಶೀಲನಾ ಸಮಿತಿಗಳ (ಎಲ್‌ಐಸಿ) ವರದಿಗಳನ್ನು ಸೋಮವಾರ ನಡೆದ ಬೆಂಗಳೂರು ವಿಶ್ವವಿದ್ಯಾಲಯದ ಅಕಾಡೆಮಿಕ್ ಕೌನ್ಸಿಲ್ ಸಭೆಯಲ್ಲಿ ಅಂಗೀಕರಿಸಲಾಯಿತು.

ಸಿಂಡಿಕೇಟ್ ಸದಸ್ಯ ಡಿ.ಎಸ್.ಕೃಷ್ಣ ಅಧ್ಯಕ್ಷತೆಯ ಎಲ್‌ಐಸಿ ವರದಿಯಲ್ಲಿ ಜೈನ್ ಕಾಲೇಜಿಗೆ ಹೊಸ ಸಂಯೋಜನೆಗಳನ್ನು ನೀಡುವಂತೆ ಶಿಫಾರಸು ಮಾಡಲಾಗಿತ್ತು. ಈ ಶಿಫಾರಸನ್ನು ಪ್ರಶ್ನಿಸಿದ ಕೌನ್ಸಿಲ್ ಸದಸ್ಯರು ಜೈನ್ ಕಾಲೇಜಿನಲ್ಲಿ ಈಗಿರುವ ಸಂಯೋಜನೆಗಳಿಗೇ ವಿದ್ಯಾರ್ಥಿಗಳಿಲ್ಲ. ಹೀಗಿರುವಾಗ ಹೊಸ ಸಂಯೋಜನೆಗಳಿಗೆ ಅನುಮೋದನೆ ನೀಡಬಾರದು ಎಂದು ಆಕ್ಷೇಪಿಸಿದರು.

ಇದಲ್ಲದೇ 2012-13ನೇ ಸಾಲಿಗೆ ಜೈನ್ ಕಾಲೇಜಿನಲ್ಲಿ ಸಂಯೋಜನೆ, ಕೋರ್ಸ್ ಹಾಗೂ ಸೀಟ್ ಹೆಚ್ಚಳಕ್ಕೆ ಉನ್ನತ ಶಿಕ್ಷಣ ಇಲಾಖೆಯಿಂದ ನೇರವಾಗಿ ಅನುಮತಿ ಪಡೆಯಲಾಗಿದೆ. ಆದರೆ, ವಿಶ್ವವಿದ್ಯಾಲಯದಿಂದ ಅನುಮತಿ ಪಡೆಯದೇ ಇಲಾಖೆಯಿಂದ ನೇರವಾಗಿ ಅನುಮತಿ ಪಡೆದಿರುವುದು ನಿಯಮ ಉಲ್ಲಂಘಿಸಿದಂತಾಗಿದೆ. ಹೀಗಾಗಿ ಜೈನ್ ಕಾಲೇಜಿಗೆ ಹೊಸ ಸಂಯೋಜನೆ, ಕೋರ್ಸ್ ಹಾಗೂ ಸೀಟ್ ಹೆಚ್ಚಳ ಮಾಡದಂತೆ ಸಿಂಡಿಕೇಟ್ ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಬೇಕು ಎಂದು ಸದಸ್ಯರು ಆಗ್ರಹಿಸಿದರು.

ವಿಶ್ವವಿದ್ಯಾಲಯ ವ್ಯಾಪ್ತಿಯ ಕೆಲವು ಕಾಲೇಜುಗಳಲ್ಲಿ ಹೆಚ್ಚಿನ ಸಂಯೋಜನೆಗಳಿಗೆ ವಿದ್ಯಾರ್ಥಿಗಳೇ ಇಲ್ಲ. ಈ ಬಗ್ಗೆ ಸಮಗ್ರ ಪರಿಶೀಲನೆ ನಡೆಸಿ ಅಂತಹ ಕಾಲೇಜುಗಳ ಹೊಸ ಸಂಯೋಜನೆಗಳನ್ನು ತಡೆಹಿಡಿಯಬೇಕು ಎಂದು ಸದಸ್ಯರು ಒತ್ತಾಯಿಸಿದರು. ಅಕಾಡೆಮಿಕ್ ಕೌನ್ಸಿಲ್ ಸದಸ್ಯರಾಗಿರುವ ಅಶ್ವಿನಿ ದೇಸಾಯಿ ಎಂಬುವರು ಒಮ್ಮೆಯೂ ಸಭೆಗೆ ಹಾಜರಾಗಿಲ್ಲ. ಆದರೂ ಅವರನ್ನು ಎಲ್‌ಐಸಿ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ ಎಂದು ಸದಸ್ಯರು ದೂರಿದರು.

`ಅನರ್ಹ ಪ್ರಾಂಶುಪಾಲರ ಬದಲಾವಣೆ, ಕಾಯಂ ಉಪನ್ಯಾಸಕರ ನೇಮಕ ಹಾಗೂ ಎಲ್‌ಐಸಿ ವರದಿಗಳ ಅನುಮೋದನೆಯ ವಿಷಯಗಳನ್ನು ಮಂಗಳವಾರ ನಡೆಯುವ ಸಿಂಡಿಕೇಟ್ ಸಭೆಯ ಮುಂದಿಡಲಾಗುವುದು. ಸಭೆಯ ನಿರ್ಣಯದಂತೆ ಮುಂದಿನ ಕ್ರಮ ಕೈಗೊಳ್ಳಲಾಗುವುದು' ಎಂದು ಕುಲಪತಿ ಪ್ರೊ.ಬಿ.ತಿಮ್ಮೇಗೌಡ ತಿಳಿಸಿದರು.

ಕರಣ್ ಹಾಜರು: ಅಕಾಡೆಮಿಕ್ ಕೌನ್ಸಿಲ್‌ನ ಸದಸ್ಯತ್ವಕ್ಕೆ ಶನಿವಾರ ರಾಜೀನಾಮೆ ನೀಡಿದ ಎಚ್.ಕರಣ್ ಕುಮಾರ್ ಸೋಮವಾರ ಸಭೆಯಲ್ಲಿ ಹಾಜರಿದ್ದರು. `ನನ್ನ ರಾಜೀನಾಮೆ ಅಂಗೀಕಾರವಾಗಿರುವ ಬಗ್ಗೆ ಸರ್ಕಾರದಿಂದ ಇನ್ನೂ ನನಗೆ ಉತ್ತರ ಬಂದಿಲ್ಲ. ಹೀಗಾಗಿ ಸಭೆಗೆ ಬಂದಿದ್ದೇನೆ' ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.