ADVERTISEMENT

ಜೈನ ಸಾಧ್ವಿ ಸರ್ವೇಶ್ವರಿ ಉಪವಾಸ ಇಂದು ಅಂತ್ಯ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2011, 19:15 IST
Last Updated 27 ಅಕ್ಟೋಬರ್ 2011, 19:15 IST

ಬೆಂಗಳೂರು: ದೇಶದಲ್ಲಿ ಶಾಂತಿ ನೆಲೆಸುವ ಸಲುವಾಗಿ ಹಾಗೂ ತಮ್ಮ ಮೋಕ್ಷ ಸಾಧನೆಗಾಗಿ ಜೈನ ಧರ್ಮದ ಸಾಧ್ವಿ ಸರ್ವೇಶ್ವರಿ ಯಶಾಶ್ರೀಜಿ ಅವರು 110 ದಿನಗಳಿಂದ ಕೈಗೊಂಡಿರುವ ಉಪವಾಸ ಶುಕ್ರವಾರ ಅಂತ್ಯಗೊಳ್ಳಲಿದೆ.

ಸಮಾಜದ ಶ್ರೇಯೋಭಿವೃದ್ಧಿ ಹಾಗೂ ಜೈನಧರ್ಮ ಸೇರಿದಂತೆ ಎಲ್ಲಾ ಸಮುದಾಯಗಳ ಒಳಿತು ಬಯಸಿ ಯಶಾಶ್ರೀಜಿ ಈ ಉಪವಾಸ ಕೈಗೊಂಡಿದ್ದಾರೆ.

ಸರ್ವೇಶ್ವರಿ ಅವರು ಜನಿಸಿದ್ದು ನಾಗಪುರದ ಶ್ರೀಮಂತ ಕುಟುಂಬದಲ್ಲಿ. ಮೂಲ ಹೆಸರು ಸೋನಲ್. ಬಿ.ಎಸ್ಸಿ ಗೃಹ ವಿಜ್ಞಾನದಲ್ಲಿ (ಹೋಂ ಸೈನ್ಸ್) ನಾಗಪುರ ವಿಶ್ವವಿದ್ಯಾಲಯದಿಂದ ಪದವಿ ಪಡೆದಿರುವ ಇವರಿಗೆ, ಅಧ್ಯಾತ್ಮದತ್ತ ಆಸಕ್ತಿ ಬೆಳೆದು ಜನವರಿ 2001ರಲ್ಲಿ ದೀಕ್ಷೆ ಪಡೆದರು.

ತಂದೆ ಅಮರಚಂದಭಾಯ್ ಮೆಹತಾ ಹಾಗೂ ತಾಯಿ ಸ್ವರೂಪ ಬೆನ್ ತಮ್ಮ ಅಧ್ಯಾತ್ಮ ಜೀವನಕ್ಕೆ ಎಂದೂ ವಿರೋಧಿಸಲಿಲ್ಲ. ಅಂದು ದೀಕ್ಷೆ ಪಡೆದು ಮನೆ ತೊರೆದ ಅವರು ಇಂದಿನವರೆಗೂ ಕಾಲ್ನಡಿಗೆಯಲ್ಲೇ ದೇಶದಾದ್ಯಂತ ಸಂಚಾರಿಸುತ್ತಾ ಮನುಕುಲದ ಒಳಿತಿಗಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟಿದ್ದಾರೆ.

ಈವರೆಗೆ ಸುಮಾರು 20ಕ್ಕೂ ಹೆಚ್ಚು ಬಾರಿ ಹಲವು ದಿನಗಳ ಉಪವಾಸ ಕೈಗೊಂಡಿದ್ದಾರೆ. ಮೋಕ್ಷ ಪಡೆಯಲು ಉಪವಾಸ ಉತ್ತಮ ಮಾರ್ಗ ಎಂಬುದು ಅವರ ಅಭಿಪ್ರಾಯ. ಗುಜರಾತ್‌ನ ಅಹಮದಾಬಾದ್‌ನಿಂದ ಸುಮಾರು ಎರಡು ಸಾವಿರ ಕಿ.ಮೀ. ದೂರವನ್ನು ಕಾಲ್ನಡಿಗೆಯಲ್ಲೇ ಕ್ರಮಿಸಿ ಜುಲೈ 10ರಂದು ಬೆಂಗಳೂರಿಗೆ ಆಗಮಿಸಿದ್ದು ಚಿಕ್ಕಪೇಟೆಯಲ್ಲಿರುವ ಆದಿನಾಥ ಭಗವಾನ್ ದೇವಸ್ಥಾನದ ಆವರಣದಲ್ಲಿರುವ ಆದರ್ಶ ಭವನದಲ್ಲಿ ತಂಗಿದ್ದಾರೆ.

ಚಾತುರ್ಮಾಸ (ಜುಲೈ- ಅಕ್ಟೋಬರ್) ಉಪವಾಸ ನಡೆಸುತ್ತಿರುವ ಇವರು ನೀರನ್ನು ಹೊರತುಪಡಿಸಿ ಯಾವುದೇ ಆಹಾರ ಸೇವಿಸಿಲ್ಲ. ಸರ್ವೇಶ್ವರಿಜಿ ಅವರ ಉಪವಾಸಕ್ಕೆ ಶುಕ್ರವಾರ (ಅ.28) 111 ದಿನಗಳು ತುಂಬಲಿವೆ.

ಈ ಅಂಗವಾಗಿ ನಗರದ ಮರಾಠಾ ವಿದ್ಯಾರ್ಥಿ ನಿಲಯದ ಆವರಣದಲ್ಲಿ ನಡೆಯುವ `ಪೂರ್ಣಾಹುತಿ ಪ್ರಸಂಗ್~ ಕಾರ್ಯಕ್ರಮದಲ್ಲಿ ತಮ್ಮ ಉಪವಾಸವನ್ನು ಅಂತ್ಯಗೊಳಿಸಲಿದ್ದಾರೆ. ದೇಶದ ಪ್ರಮುಖ ಜೈನ ಗುರುಗಳು ಭಾಗವಹಿಸಲಿದ್ದು, ನಗರದ ಜೈನ ಮಂದಿರಗಳಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಕೂಡ ನಡೆಯಲಿವೆ.

ಎಲ್ಲರೂ ರಾತ್ರಿ ಭೋಜನವನ್ನು ತ್ಯಜಿಸುವುದು ಒಳಿತು. ಮುಖ್ಯವಾಗಿ ಜೈನ ಧರ್ಮದವರು ರಾತ್ರಿ ವೇಳೆಯ ಭೋಜನವನ್ನು ತ್ಯಜಿಸಬೇಕು ಎಂಬುದು ಇವರ ನಿಲುವಾಗಿದೆ. ಶುಕ್ರವಾರ ನಡೆಯುವ ಕಾರ್ಯಕ್ರಮದಲ್ಲಿ ಸುಮಾರು ಒಂದು ಸಾವಿರ ಮಂದಿ ಜೀವನ ಪರ್ಯಂತ ರಾತ್ರಿ ಊಟ ತ್ಯಜಿಸುವ, 3,200 ಮಂದಿ ಮಹಿಳೆ- ಪುರುಷರು ಹಾಗೂ ಯುವಕರು ವರ್ಷದ 60 ದಿನಗಳು ಉಪವಾಸ ನಡೆಸಲು ಪ್ರತಿಜ್ಞಾ ವಿಧಿ ಸ್ವೀಕರಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.