ADVERTISEMENT

ಟಿಕೆಟ್ ಹಂಚಿಕೆ: ಜಗಳ ಆಡಿಲ್ಲ

ಪರಮೇಶ್ವರ್, ಸಿದ್ದರಾಮಯ್ಯ ಸ್ಪಷ್ಟನೆ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2013, 19:42 IST
Last Updated 8 ಏಪ್ರಿಲ್ 2013, 19:42 IST

ಬೆಂಗಳೂರು: `ವಿಧಾನಸಭಾ ಚುನಾವಣೆಯ ಅಭ್ಯರ್ಥಿಗಳ ಆಯ್ಕೆಗೆ ಸಂಬಂಧಿಸಿದಂತೆ ನಮ್ಮ ನಡುವೆ ಭಿನ್ನಾಭಿಪ್ರಾಯ ಇಲ್ಲ. ಜಗಳ ಅಥವಾ ಮಾತಿನ ಚಕಮಕಿಯೂ ನಡೆದಿಲ್ಲ' ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಹಾಗೂ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.

ಕೆಪಿಸಿಸಿ ಸೋಮವಾರ ಆಯೋಜಿಸಿದ್ದ ಆಡಿಯೊ ಹಾಗೂ ವಿಡಿಯೊ ಚುನಾವಣಾ ಪ್ರಚಾರ ಸಾಮಗ್ರಿಗಳ ಬಿಡುಗಡೆ ಮತ್ತು ಸಾಮಾಜಿಕ ಮಾಧ್ಯಮಗಳ ಮೂಲಕ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡುವ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಇಬ್ಬರೂ ಜಂಟಿಯಾಗಿ ಈ ಹೇಳಿಕೆ ನೀಡಿದರು. ರಾಜಕೀಯ ಬೆಳವಣಿಗೆಗಳ ಕುರಿತು ಪತ್ರಕರ್ತರ ಜೊತೆ ಸಂವಾದ ನಡೆಸಿದ ಉಭಯ ನಾಯಕರು, ವೇದಿಕೆಯಲ್ಲಿ ಪರಸ್ಪರ ಹಸ್ತಲಾಘವ ನೀಡುವ ಮೂಲಕ `ನಾವು ಒಗ್ಗಟ್ಟಾಗಿ ಇದ್ದೇವೆ' ಎಂದು ಸಾರಿದರು.

`ನಾನು, ಸಿದ್ದರಾಮಯ್ಯ, ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ ಎಲ್ಲರೂ ಒಟ್ಟಾಗಿಯೇ ಇದ್ದೇವೆ. ನಮ್ಮ ನಡುವೆ ಯಾವುದೇ ರೀತಿಯ ಭಿನ್ನಾಭಿಪ್ರಾಯವೂ ಇಲ್ಲ. ಈ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವುದು ಖಚಿತ ಎಂಬುದು ಎಲ್ಲರಿಗೂ ತಿಳಿದಿದೆ. ಈ ಸಂದರ್ಭದಲ್ಲಿ ನಮ್ಮ ರಾಜಕೀಯ ವಿರೋಧಿಗಳು, ಕಾಂಗ್ರೆಸ್ ಬೆಳವಣಿಗೆ ಸಹಿಸದವರು ಇಂತಹ ವದಂತಿ ಹಬ್ಬಿಸುತ್ತಾರೆ. ಇದರಲ್ಲಿ ಎಳ್ಳಷ್ಟೂ ಸತ್ಯಾಂಶವಿಲ್ಲ' ಎಂದು ಪರಮೇಶ್ವರ್ ಹೇಳಿದರು.

ಟಿಕೆಟ್ ಹಂಚಿಕೆಯ ವಿಷಯದಲ್ಲಿ ಅಸಮಾಧಾನದ ಪ್ರಶ್ನೆಯೇ ಉದ್ಭವಿಸಿಲ್ಲ. ಬ್ಲಾಕ್ ಕಾಂಗ್ರೆಸ್ ಸಮಿತಿಗಳು, ಜಿಲ್ಲಾ ಕಾಂಗ್ರೆಸ್ ಸಮಿತಿಗಳು ಮತ್ತು ಪ್ರದೇಶ ಕಾಂಗ್ರೆಸ್ ಸಮಿತಿ ಕಳುಹಿಸಿದ ಶಿಫಾರಸುಗಳನ್ನು ಪರಿಶೀಲಿಸಿದ ಪಕ್ಷದ ಕೇಂದ್ರ ಚುನಾವಣಾ ಸಮಿತಿ ಅಂತಿಮ ನಿರ್ಧಾರ ಕೈಗೊಂಡಿದೆ. ಕೇಂದ್ರ ಸಚಿವರು ಸೇರಿದಂತೆ ಪಕ್ಷದ ಹಿರಿಯ ಮುಖಂಡರ ಸಲಹೆಯನ್ನು ಪಡೆದ ಬಳಿಕವೇ ಹೈಕಮಾಂಡ್ ಅಭ್ಯರ್ಥಿಗಳ ಪಟ್ಟಿಗೆ ಅನುಮೋದನೆ ನೀಡಿದೆ. ಈ ಪ್ರಕ್ರಿಯೆಯಲ್ಲಿ ಯಾವ ಗೊಂದಲವೂ ಉದ್ಭವಿಸಿಲ್ಲ ಎಂದರು.

`ಅಭ್ಯರ್ಥಿಗಳ ಆಯ್ಕೆ ಸಮಿತಿಯ ಸಭೆಯಲ್ಲಿ ನನ್ನ ಹಾಗೂ ಪರಮೇಶ್ವರ್ ನಡುವೆ ಜಗಳವಾಗಿದೆ ಎಂಬುದು ಶುದ್ಧ ಸುಳ್ಳು. ಕೆಲವರು ಈ ರೀತಿ ಗಾಳಿಸುದ್ದಿ ಹಬ್ಬಿಸಿದ್ದಾರೆ. ನಾವು ಜಗಳವಾಡುವುದು ಇರಲಿ, ನಮ್ಮ ನಡುವೆ ಬಿರುಸಿನ ಮಾತುಕತೆ ಕೂಡ ನಡೆದಿಲ್ಲ. ವದಂತಿಯನ್ನು ದೆಹಲಿಯಲ್ಲೇ ನಾವು ನಿರಾಕರಿಸಿದ್ದೇವೆ. ಆದರೂ, ಅದಕ್ಕೆ ದೊಡ್ಡಮಟ್ಟದ ಪ್ರಚಾರ ನೀಡಲಾಗಿದೆ' ಎಂದು ಸಿದ್ದರಾಮಯ್ಯ ದನಿಗೂಡಿಸಿದರು.

ಸೋನಿಯಾ ಗಾಂಧಿ ನಮ್ಮ `ಕ್ಯಾಪ್ಟನ್'
ಕಾಂಗ್ರೆಸ್ ರಾಜ್ಯದಲ್ಲಿ ಯಾರ ನಾಯಕತ್ವದಲ್ಲಿ ಚುನಾವಣೆ ಎದುರಿಸುತ್ತದೆ ಎಂಬುದನ್ನು ಪ್ರಕಟಿಸದೇ ಇರುವ ಕುರಿತು ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿದಾಗ, `ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ನಮ್ಮ ಕ್ಯಾಪ್ಟನ್. ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ನಮ್ಮ ಉಪ ನಾಯಕ. ನಾವೆಲ್ಲರೂ ರಾಜ್ಯ ತಂಡದ ಆಟಗಾರರು. ಎಲ್ಲರೂ ಒಟ್ಟಾಗಿ ಚುನಾವಣೆ ಎದುರಿಸುತ್ತೇವೆ' ಎಂದರು.

ರಾಜ್ಯದಲ್ಲಿ ಬಿಜೆಪಿ ಪರ ಪ್ರಚಾರ ನಡೆಸಲು ಗುಜರಾತ್ ಸಿ.ಎಂ ನರೇಂದ್ರ ಮೋದಿ ಹಿಂದೇಟು ಹಾಕುತ್ತಿದ್ದಾರೆ ಎಂಬುದರ ಕುರಿತು ಗಮನ ಸೆಳೆದಾಗ, `ರಾಜ್ಯದಲ್ಲಿ ಬಿಜೆಪಿ ಮುಳುಗುತ್ತಿರುವ ಹಡಗು ಎಂಬುದು ಎಲ್ಲರಿಗೂ ಗೊತ್ತು. ಇಂತಹ ಸಂದರ್ಭದಲ್ಲಿ ಸೋಲಿನ ಹೊಣೆಯನ್ನು ಹೊರಲು ಯಾರೂ ಸಿದ್ಧರಿರುವುದಿಲ್ಲ' ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT