ಬೆಂಗಳೂರು: ‘ಟಿ.ಜಿ.ಎಸ್ ಕನ್‌ಸ್ಟ್ರಕ್ಷನ್ ಹಾಗೂ ಡ್ರೀಮ್ಸ್ ಇನ್‌ಫ್ರಾ ಕಂಪೆನಿಯ ವಂಚನೆ ಪ್ರಕರಣದ ತನಿಖೆಯನ್ನು ನಿಧಾನಗತಿಯಲ್ಲಿ ನಡೆಸಲಾಗುತ್ತಿದೆ’ ಎಂದು ಆರೋಪಿಸಿ ಭೂ ಕಬಳಿಕೆ ವಿರೋಧಿ ಹೋರಾಟ ಸಮಿತಿ ಹಾಗೂ ಟಿ.ಜಿ.ಎಸ್ ಸಂಸ್ಥೆಯಿಂದ ವಂಚನೆಗೊಳಗಾದ ಗ್ರಾಹಕರ ವೇದಿಕೆ ಸದಸ್ಯರು ನಗರದ ಆನಂದರಾವ್ ವೃತ್ತದ ಬಳಿ ಗಾಂಧಿ ಪ್ರತಿಮೆ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.
‘ಕಡಿಮೆ ಬೆಲೆಗೆ ನಿವೇಶನ, ಫ್ಲ್ಯಾಟ್ ನೀಡುವುದಾಗಿ ಜಾಹೀರಾತು ನೀಡಿದ್ದ ಕಂಪೆನಿಯು, ಗ್ರಾಹಕರಿಂದ ₹1 ಲಕ್ಷದಿಂದ ₹70 ಲಕ್ಷ ಹಣ ಕಟ್ಟಿಸಿಕೊಂಡಿತ್ತು. ಆದರೆ, ನಿವೇಶನ ಹಾಗೂ ಫ್ಲ್ಯಾಟ್ ನೀಡದೆ ವಂಚನೆ ಮಾಡಿದೆ’ ಎಂದು ಪ್ರತಿಭಟನಾಕಾರರು ದೂರಿದರು.
‘ಎಲೆಕ್ಟ್ರಾನಿಕ್ ಸಿಟಿಯ ಟಿಜಿಎಸ್ ಕನ್‌ಸ್ಟ್ರಕ್ಷನ್ ನಿರ್ಮಿಸಲು ಉದ್ದೇಶಿಸಿದ್ದ ಅಪಾರ್ಟ್‌ಮೆಂಟ್ ಸಮುಚ್ಚಯದಲ್ಲಿ ಫ್ಲ್ಯಾಟ್ ನೀಡುವುದಾಗಿ ಹೇಳಿ ಮುಂಗಡವಾಗಿ ₹6 ಲಕ್ಷ ಕಟ್ಟಿಸಿಕೊಂಡಿತ್ತು. ಆದರೆ, ಯೋಜನೆ ಆರಂಭವಾಗಲಿಲ್ಲ. ಹಣ ವಾಪಸ್ ಕೇಳಿದ್ದರಿಂದ ಚೆಕ್ ನೀಡಿತ್ತು. ಆದರೆ, ಅದು ಬೌನ್ಸ್ ಆಗಿತ್ತು’ ಎಂದು ವಂಚನೆಗೊಳಗಾದ ಗ್ರಾಹಕ ವೆಂಕಟೇಶ್ ಹೇಳಿದರು.
ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ ಮಾತನಾಡಿ, ‘ಸರ್ಕಾರ ಮಧ್ಯ ಪ್ರವೇಶಿಸಿ, ವಂಚನೆಗೆ ಒಳಗಾದವರಿಗೆ ನಿವೇಶನ, ಫ್ಲ್ಯಾಟ್ ಕೊಡಿಸಬೇಕು. ಟಿ.ಜಿ.ಎಸ್ ಸಂಸ್ಥೆಯ ಮಾಲೀಕರನ್ನು ಬಂಧಿಸಿ ಕ್ರಿಮಿನಲ್ ಮೊಕದ್ದಮೆ ಹೂಡಬೇಕು’ ಎಂದು ಆಗ್ರಹಿಸಿದರು.
ಸಹಾಯವಾಣಿ ಕೇಂದ್ರ: ಕಂಪೆನಿಯ ಸಂಸ್ಥಾಪಕರಲ್ಲಿ ಒಬ್ಬರಾದ ಸಚಿನ್ ನಾಯಕ್ ಹಾಗೂ ಆತನ ಸಹಚರರು ಗ್ರಾಹಕರಿಗೆ ನೀಡಿದ್ದ ದಾಖಲೆಗಳ ನೋಂದಣಿಗಾಗಿ ಸಹಾಯವಾಣಿ ಕೇಂದ್ರವನ್ನು ಸಹ ಪ್ರತಿಭಟನಾ ಸ್ಥಳದಲ್ಲಿ ತೆರೆಯಲಾಗಿದೆ. ಗ್ರಾಹಕರು ತಮ್ಮ ಹೆಸರು ಹಾಗೂ ದಾಖಲೆ ಪತ್ರಗಳನ್ನು ನೋಂದಾಯಿಸಲು ಸರತಿ ಸಾಲಿನಲ್ಲಿ ನಿಂತಿದ್ದ ದೃಶ್ಯ ಕಂಡುಬಂತು.