ADVERTISEMENT

ಟೆಂಡರ್‌ನಲ್ಲಿ ಭಾರಿ ಅಕ್ರಮ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2011, 19:30 IST
Last Updated 16 ಅಕ್ಟೋಬರ್ 2011, 19:30 IST

ಬೆಂಗಳೂರು: ಗುತ್ತಿಗೆದಾರರು ನಮೂದಿಸಿದ ದರವನ್ನು ಟೆಂಡರ್ ತೆರೆದ ಬಳಿಕ ತಿದ್ದುಪಡಿ ಮಾಡುವುದು. ಗುತ್ತಿಗೆದಾರರಿಂದ ಪಡೆದ ಹಣವನ್ನು ಪಾಲಿಕೆ ನಿಧಿಗೆ ಜಮಾ ಮಾಡದಿರುವುದು. ಒಂದೇ ಡಿ.ಡಿ ಯನ್ನು ಒಂದಕ್ಕಿಂತ ಹೆಚ್ಚು ಕಾಮಗಾರಿಗಳಿಗೆ ಇ.ಎಂ.ಡಿ ಎಂದು ಪರಿಗಣಿಸಿ ಟೆಂಡರ್ ಅನುಮೋದಿಸುವುದು...

ಇದು ಬಿಬಿಎಂಪಿಯ ದಾಸರಹಳ್ಳಿ ಕಾರ್ಯಪಾಲಕ ಎಂಜಿನಿಯರ್ ವಿಭಾಗದಲ್ಲಿನ ಅಧಿಕಾರಿಗಳು ನಡೆಸಿರುವ ಕರಾಮತ್ತು. ಅಧಿಕಾರಿಗಳು ಅಕ್ರಮ ನಡೆಸಿ ಪಾಲಿಕೆಯ ಬೊಕ್ಕಸಕ್ಕೆ ಲಕ್ಷಾಂತರ ರೂಪಾಯಿ ನಷ್ಟ ಉಂಟು ಮಾಡಿರುವುದು ಲೆಕ್ಕ ಪರಿಶೋಧನೆಯಲ್ಲಿ ಬಯಲಾಗಿದೆ.

ದಾಸರಹಳ್ಳಿ ಕಾರ್ಯಪಾಲಕ ಎಂಜಿನಿಯರ್ ವಿಭಾಗದ 2009-10ನೇ ಹಣಕಾಸು ವರ್ಷದ ಲೆಕ್ಕ ಪರಿಶೋಧನೆ ಕಾರ್ಯ ಇತ್ತೀಚೆಗೆ ನಡೆಯಿತು. ಅದರಲ್ಲಿ ಅಧಿಕಾರಿಗಳ ಅಕ್ರಮ ಬೆಳಕಿಗೆ ಬಂದಿದೆ.

ಗುತ್ತಿಗೆದಾರರು ನಮೂದಿಸಿದ್ದ ದರವನ್ನು ಟೆಂಡರ್ ತೆರೆದ ನಂತರ ತಿದ್ದುಪಡಿ ಮಾಡಿ ಒಂದು ಲಕ್ಷ ರೂಪಾಯಿಯನ್ನು ಗುತ್ತಿಗೆದಾರರಿಗೆ ಹೆಚ್ಚುವರಿಯಾಗಿ ಪಾವತಿ ಮಾಡಲಾಗಿದೆ.

ಟೆಂಡರ್ ಪ್ರಕ್ರಿಯೆ ಭಾಗವಾಗಿ ಕಾರ್ಯಪಾಲಕ ಎಂಜಿನಿಯರ್ ಅವರು ಟೆಂಡರ್ ತೆರೆದ ಸಂದರ್ಭದಲ್ಲಿ ಅರ್ಜಿಯಲ್ಲಿ ಯಾವುದೇ ತಿದ್ದುಪಡಿಗಳಿಲ್ಲ ಎಂದು ನಮೂದಿಸಲಾಗಿದೆ. ಹಾಗಿದ್ದರೂ ನಂತರ ದರವನ್ನು ತಿದ್ದುಪಡಿ ಮಾಡಿರುವುದು ಲೆಕ್ಕ ಪರಿಶೋಧನೆಯಲ್ಲಿ ಪತ್ತೆಯಾಗಿದೆ.

ನಿಯಮ ಉಲ್ಲಂಘನೆ
ಕಾಮಗಾರಿಗೆ ಸಂಬಂಧಪಟ್ಟಂತೆ ಗುತ್ತಿಗೆದಾರರು ನೀಡಿರುವ ಇ.ಎಂ.ಡಿ ಹಣವನ್ನು ಅಧಿಕಾರಿಗಳು ಪಾಲಿಕೆಯ ನಿಧಿಗೆ ಪಾವತಿಸಿಲ್ಲ.

ಟೆಂಡರ್ ಅಧಿಸೂಚನೆ ಸಂಖ್ಯೆ- 7, 11 ಹಾಗೂ 12ರ ಒಟ್ಟು 16 ಕಾಮಗಾರಿಗಳಿಗೆ ಸಂಬಂಧಪಟ್ಟಂತೆ ಸಂಗ್ರಹವಾದ 6.28 ಲಕ್ಷ ರೂಪಾಯಿ ಇ.ಎಂ.ಡಿ ಹಣವನ್ನು ಪಾಲಿಕೆ ನಿಧಿಗೆ ಪಾವತಿಸದಿರುವುದು ಬೆಳಕಿಗೆ ಬಂದಿದೆ.

ಕರ್ನಾಟಕ ಆರ್ಥಿಕ ಸಂಹಿತೆ ಕಲಂ 4ರ ಅನ್ವಯ ಸ್ವೀಕೃತಿಯಾದ ಹಣವನ್ನು ಗರಿಷ್ಠ ಎರಡು ದಿನದೊಳಗೆ ಪಾಲಿಕೆ ನಿಧಿಗೆ ಜಮಾ ಮಾಡುವುದು ಕಡ್ಡಾಯ. ಆದರೆ ಒಂದು ವರ್ಷವಾದರೂ ಸಂಬಂಧಪಟ್ಟವರು ಈ ಮೊತ್ತವನ್ನು ಪಾಲಿಕೆ ನಿಧಿಗೆ ಜಮಾ ಮಾಡದಿರುವುದು ಗಂಭೀರ ಲೋಪ ಎಂದು ಲೆಕ್ಕ ಪರಿಶೋಧಕರು ಆಕ್ಷೇಪ ವ್ಯಕ್ತಪಡಿಸಿದ್ದರು.

ಆ ಹಿನ್ನೆಲೆಯಲ್ಲಿ ಇತ್ತೀಚೆಗೆ ಅಂದರೆ 2011ರ ಸೆಪ್ಟೆಂಬರ್ 6ರಂದು ಇ.ಎಂ.ಡಿ ಮೊತ್ತಕ್ಕೆ ಸಂಬಂಧಪಟ್ಟಂತೆ 6.45 ಲಕ್ಷ ರೂಪಾಯಿ ಮೊತ್ತದ ಹೊಸ ಡಿ.ಡಿಗಳನ್ನು ಖರೀದಿಸಿ ಪಾಲಿಕೆ ನಿಧಿಗೆ ಜಮಾ ಮಾಡಲಾಗಿದೆ.

ಈ ವಿಳಂಬದಿಂದ ಪಾಲಿಕೆಗೆ ಬರಬೇಕಿದ್ದ 1.27 ಲಕ್ಷ ರೂಪಾಯಿ ಬಡ್ಡಿ ಹಣ ಕೈತಪ್ಪಿದೆ. ಇ.ಎಂ.ಡಿ ಮೊತ್ತವನ್ನು ಪಾಲಿಕೆ ನಿಧಿಗೆ ಜಮಾ ಮಾಡದೇ ಕಾಮಗಾರಿಗೆ ಆದೇಶ ನೀಡಿರುವ ಹಿನ್ನೆಲೆಯಲ್ಲಿ ಈ ಕಾಮಗಾರಿಗಳು ಅಸಿಂಧುವಾಗಿವೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಹಲವು ಕಾಮಗಾರಿಗೆ ಒಂದೇ ಡಿ.ಡಿ:ಒಂದೇ ಡಿ.ಡಿಯನ್ನು ಒಂದಕ್ಕಿಂತ ಹೆಚ್ಚು ಕಾಮಗಾರಿಗಳಿಗೆ ಇ.ಎಂ.ಡಿ ಠೇವಣಿ ಎಂದು ಪರಿಗಣಿಸಿ ಪಾಲಿಕೆಗೆ ನಷ್ಟ ಉಂಟು ಮಾಡಿರುವುದು ಸಹ ಲೆಕ್ಕ ಪರಿಶೋಧನೆಯಿಂದ ಗೊತ್ತಾಗಿದೆ.

ಶೆಟ್ಟಿಹಳ್ಳಿ, ಮೇದರಹಳ್ಳಿ, ಅಬ್ಬಿಗೆರೆಯಲ್ಲಿ ಕೊಳವೆಬಾವಿ ಕೊರೆಯುವುದು, ಬಾಗಲಗುಂಟೆ ಮುಖ್ಯರಸ್ತೆಯ ಸುಧಾರಣೆ ಹಾಗೂ ಚರಂಡಿ ನಿರ್ಮಾಣ, ಬಾಗಲಗುಂಟೆಯ ಅಡ್ಡರಸ್ತೆಗಳನ್ನು ಕಾಂಕ್ರಿಟ್ ರಸ್ತೆಗಳಾಗಿ ಪರಿವರ್ತಿಸುವುದು, ವಿನಾಯಕ ನಗರದ ರಸ್ತೆಗಳ ಸುಧಾರಣೆ, ಮಂಜುನಾಥನಗರದಲ್ಲಿ ಪ್ರೌಢಶಾಲಾ ಕಟ್ಟಡ ನಿರ್ಮಾಣ ಸೇರಿದಂತೆ ಒಟ್ಟು ಎಂಟು ಕಾಮಗಾರಿಗಳಿಗೆ ಮೂರು ಡಿ.ಡಿ ನೀಡಿರುವುದು ಬಯಲಾಗಿದೆ.

ಗುತ್ತಿಗೆದಾರರು ಒಂದು ಕಾಮಗಾರಿಗೆ ಇ.ಎಂ.ಡಿ ಬಾಬ್ತು ನೀಡಿದ್ದ ಡಿ.ಡಿಯನ್ನು ಪಾಲಿಕೆ ನಿಧಿಗೆ ಜಮಾ ಮಾಡದ ಅಧಿಕಾರಿಗಳು ಅದೇ ಡಿ.ಡಿಯನ್ನು ಇನ್ನೊಂದು ಕಾಮಗಾರಿಗೆ ಇ.ಎಂ.ಡಿ ಠೇವಣಿ ಎಂದು ತೋರಿಸಿರುವುದು ಕಂಡು ಬಂದಿದೆ. ಇದರಿಂದ ಟೆಂಡರ್ ಪ್ರಕ್ರಿಯೆ ದೋಷಪೂರಿತವಾಗಿದೆ. ಇದು ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕತೆ (ಕೆಟಿಪಿಪಿ) ಕಾಯ್ದೆಯ ಉಲ್ಲಂಘನೆಯಾಗಿದೆ.
 
ಈ ಪ್ರಕ್ರಿಯೆಯನ್ನು ಗಮನಿಸಿದರೆ ತಮಗೆ ಬೇಕಾದ ಗುತ್ತಿಗೆದಾರರಿಗೆ ಕಾಮಗಾರಿ ನೀಡಲು ದಾಖಲೆ ಸೃಷ್ಟಿಸಿರುವುದು ಮೇಲ್ನೋಟಕ್ಕೆ ಕಾಣುತ್ತದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಈ ಅಕ್ರಮದ ಬಗ್ಗೆ ಲೆಕ್ಕ ಪರಿಶೋಧನಾಧಿಕಾರಿಗಳು ಆಕ್ಷೇಪ ವ್ಯಕ್ತಪಡಿಸಿದ ಬೆನ್ನಲ್ಲೇ 2011ರ ಸೆಪ್ಟೆಂಬರ್‌ನಲ್ಲಿ ಈ ಮೊತ್ತವನ್ನು ಅಧಿಕಾರಿಗಳು ಪಾಲಿಕೆ ನಿಧಿಗೆ ಪಾವತಿಸಿದ್ದಾರೆ.

ಅವಧಿ ಮುಗಿದ ನಂತರ ಡಿ.ಡಿ ಸಲ್ಲಿಕೆ:ಸುಮಾರು 5 ಲಕ್ಷ ರೂಪಾಯಿ ಮೊತ್ತದ ಡಿ.ಡಿಗಳನ್ನು ವಾಯಿದೆ ಮುಗಿದ ನಂತರ ಬ್ಯಾಂಕಿಗೆ ಜಮಾ ಮಾಡಿರುವುದು ಲೆಕ್ಕ ಪರಿಶೋಧನೆಯಲ್ಲಿ ಪತ್ತೆಯಾಗಿದೆ. ವಾಯಿದೆ ಮುಗಿದ ಬಳಿಕ ಸಲ್ಲಿಸಿದ ಡಿ.ಡಿಗಳು ಬ್ಯಾಂಕಿನಿಂದ ಹಿಂದಕ್ಕೆ ಬಂದಿವೆ.

ಅವುಗಳನ್ನು ನವೀಕರಿಸದೆ ಕಚೇರಿಯಲ್ಲಿಯೇ ಇಟ್ಟುಕೊಂಡಿರುವುದು ಬಯಲಾಗಿದೆ. ನಿಯಮದ ಪ್ರಕಾರ ಡಿ.ಡಿ ಪಡೆದ ಮರುದಿನವೇ ಅದನ್ನು ಬ್ಯಾಂಕ್‌ಗೆ ಜಮಾ ಮಾಡಬೇಕು.

ಸಂಬಂಧಪಟ್ಟ ಅಧಿಕಾರಿಗಳೇ ಹೊಣೆ: ಈ ಎಲ್ಲ ಅಕ್ರಮಗಳನ್ನು ಗಮನಿಸಿದರೆ ಟೆಂಡರ್ ಪ್ರಕ್ರಿಯೆಯು ಪಾರದರ್ಶಕವಾಗಿ ನಡೆದಿಲ್ಲ ಎಂಬುದು ಸ್ಪಷ್ಟವಾಗಿದೆ. ಈ ಪ್ರಕ್ರಿಯೆಗಳನ್ನು ಡ್ರಾಫ್ಟ್‌ಮನ್ ಹಾಗೂ ಕಾರ್ಯಪಾಲಕ ಎಂಜಿನಿಯರ್ ನಿರ್ವಹಿಸಿರುತ್ತಾರೆ.

ಈ ಬಗ್ಗೆ ಪರಿಶೀಲನೆ ನಡೆಸಿ ಅಕ್ರಮ ನಡೆಸಿರುವ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸುವಂತೆ ಶಿಫಾರಸು ಮಾಡಲಾಗಿದೆ. ಈ ಸಂಬಂಧ ವರದಿಯನ್ನು ಮುಖ್ಯ ಲೆಕ್ಕ ಪರಿಶೋಧಕರು, ಸೆ. 28ರಂದು ಆಯುಕ್ತರಿಗೆ ಸಲ್ಲಿಸಿದ್ದಾರೆ.

ಮುಖ್ಯಾಂಶಗಳು
ಮಂಜೂರಾದ ಟೆಂಡರ್ ದರದಲ್ಲಿ ತಿದ್ದುಪಡಿ
 ಒಂದಕ್ಕಿಂತ ಹಲವು ಕಾಮಗಾರಿಗೆ ಒಂದೇ ಡಿ.ಡಿ

ಗುತ್ತಿಗೆದಾರರಿಗೆ `ನೆರ~ವಾಗಲು ದಾಖಲೆ ಸೃಷ್ಟಿ
ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಶಿಫಾರಸು
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.